ADVERTISEMENT

‘ಕೊಡಗಿನ ಪಾಲಿಗೆ ನ.10 ಕರಾಳ ದಿನ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2016, 9:21 IST
Last Updated 9 ನವೆಂಬರ್ 2016, 9:21 IST
‘ಕೊಡಗಿನ ಪಾಲಿಗೆ ನ.10 ಕರಾಳ ದಿನ’
‘ಕೊಡಗಿನ ಪಾಲಿಗೆ ನ.10 ಕರಾಳ ದಿನ’   

ಮಡಿಕೇರಿ:  ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.

ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಿಸುವುದು ಬೇಡ. ಜಿಲ್ಲೆಯ ಶೇ 90ರಷ್ಟು ಜನರು ಟಿಪ್ಪು ಜಯಂತಿ ಬೇಡವೆಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಯಿಂದ ಜಯಂತಿ ಆಚರಣೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ಸಿಎಂ ವಿರುದ್ಧವೂ ಘೋಷಣೆ ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಟಿಪ್ಪು ಜಯಂತಿ ಆಚರಣೆಯ ದಿನವಾದ ನ.10 ರಾಜ್ಯಕ್ಕೆ ಕರಾಳ ದಿನ; ಕೊಡಗಿನ ಪಾಲಿಗೆ ಅತ್ಯಂತ ಕರಾಳ ದಿನ. ಕರ್ನಾಟಕ ಹಾಗೂ ಕನ್ನಡ ವಿರೋಧಿ ಟಿಪ್ಪು. ರಾಜ್ಯವ್ಯಾಪಿ ಜಯಂತಿಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆದರೂ, ಮುಖ್ಯಮಂತ್ರಿ ಹಠಮಾರಿ ಧೋರಣೆ ಹಿಡಿದು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದು ನಮ್ಮ ಹೋರಾಟಕ್ಕೆ ತಡೆಯೊಡ್ಡುವ ಪ್ರಯತ್ನ. ಈ ಪ್ರಯತ್ನ ಹೆಚ್ಚುದಿವಸಗಳ ಕಾಲ ನಡೆಯುವುದಿಲ್ಲ’ ಎಂದು ಎಚ್ಚರಿಸಿದರು.

ರಾಜ್ಯದ ಮುಖ್ಯಮಂತ್ರಿ ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಜಿಲ್ಲೆಯ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಸೇರಿದಂತೆ ಶೇ 95ರಷ್ಟು ಜನರು ಟಿಪ್ಪು ಜಯಂತಿ ಬೇಡವೆಂದರೂ ಆಚರಿಸುವ ಅಗತ್ಯ ಏನಿದೆ? ಬರ ನಿರ್ವಹಣೆ, ಮೈಸೂರು ದಸರಾ, ಮಡಿಕೇರಿ ದಸರಾಕ್ಕೆ ನೀಡಲು ನಿಮ್ಮ ಬಳಿ ಹಣವಿಲ್ಲ. ಅದೇ ಟಿಪ್ಪು ಜಯಂತಿಗೆ ರೂ 10ರಿಂದ ರೂ 12 ಕೋಟಿ ಖರ್ಚು ಮಾಡಲು ನಿಮ್ಮ ಬಳಿ ಹಣವಿದೆಯೇ? ಎಂದು ಪ್ರಶ್ನಿಸಿದರು.

ಕೊಡಗಿನ 31 ದೇವಸ್ಥಾನಗಳನ್ನು ಟಿಪ್ಪು ಧ್ವಂಸಗೊಳಿಸಿದ್ದಾನೆ. ಭಗಂಡೇಶ್ವರನ ದೇವಸ್ಥಾನದ ಬಳಿಯ ಆನೆಗಳ ಸೊಂಡಿಲನ್ನು ಹಾನಿಗೊಳಿಸಿದ್ದಾನೆ. ವಿರಾಜಪೇಟೆಯ ಸೇಂಟ್‌ ಆನ್ಸ್‌ ಚರ್ಚ್‌ ಅನ್ನು ಬಿಟ್ಟಿರಲಿಲ್ಲ. ಇಲ್ಲಿನ ಮೂಲ ನಿವಾಸಿಗಳನ್ನು ಹತ್ಯೆ ಮಾಡಿದ್ದಾನೆ. ಈ ಎಲ್ಲಾ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ. ಬಲವಂತದಿಂದ ಜಯಂತಿ ಆಚರಣೆ ಮಾಡುವ ಅಗತ್ಯವಾದರೂ ಏನು ಎಂದು ಆಕ್ರೋಶದಿಂದ ಹೇಳಿದರು.

ಮರು ತನಿಖೆಗೆ ಆಗ್ರಹ:  ರುದ್ರೇಶ್‌ ಹತ್ಯೆಯ ತನಿಖೆಗೆ ಬಂದಿದ್ದ ರಾಷ್ಟ್ರೀಯ ತನಿಖಾ ದಳವು ಕುಟ್ಟಪ್ಪ ಹತ್ಯೆಯೂ ವ್ಯವಸ್ಥಿತ ಸಂಚು ಎಂದು ಹೇಳಿದೆ. ಕುಟ್ಟಪ್ಪ ಹತ್ಯೆ ಪ್ರಕರಣವನ್ನು ಮರುತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಮತ್ತೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಈ ವರ್ಷದಲ್ಲಿ 9 ಹಿಂದೂ ಮುಖಂಡರ ಹತ್ಯೆ ನಡೆದಿದೆ. ದೇವರೇ ನಿಮಗೆ ಬುದ್ಧಿಕಲಿಸುತ್ತಾನೆ; ಆ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಹಿಂದೂ ಮುಖಂಡರ ಹತ್ಯೆ ನಡೆಯುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ಡಾ.ಜಿ. ಪರಮೇಶ್ವರ್‌ ಅವರೇ ಕಾರಣ. ಅವರ ವಿರುದ್ಧ ಪ್ರಚೋದನೆ ಆರೋಪದ ಮೇಲೆ ಪ್ರಕರಣ ದಾಖಲು ಮಾಡಬೇಕು. ಕಾವೇರಿ ಮಾತೆಯ ಶಾಪ ಸುಮ್ಮನೇ ಬಿಡುವುದಿಲ್ಲ. ಮತ್ತೊಂದು ಗಂಡಾಂತರ ಕಾದಿದೆ. ನಮ್ಮ ಮುಂದಿನ ಹೋರಾಟ ಕಠಿಣವಾಗಿರಲಿದೆ’ ಎಂದು ಬೋಪಯ್ಯ ಎಚ್ಚರಿಸಿದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿ, ಕೊಡಗಿನವರು ಮನೆಯಲ್ಲಿ ಸಾಕುವ ನಾಯಿಗೆ ಟಿಪ್ಪು ಎಂದು ಕರೆಯುತ್ತಾರೆ. ಹೀಗಾಗಿ, ಟಿಪ್ಪು ನಾಯಿ ಇದ್ದಂತೆ. ಆತನ ಜಯಂತಿಯನ್ನು ಇಲ್ಲಿ ಆಚರಿಸುವುದು ಬೇಡ. ಕೊಡವರನ್ನು ಹತ್ಯೆ ಹಾಗೂ ಮತಾಂತರ ಮಾಡಿದವನ್ನು ಜಯಂತಿ ಆಚರಿಸಬಾರದು. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಕಳೆದ ವರ್ಷ ಕೋಮು ಗಲಭೆ ಮಾಡಲೆಂದೇ ರಾಜ್ಯ ಸರ್ಕಾರ ದೀಪಾವಳಿ ದಿನದಂದು ಟಿಪ್ಪು ಜಯಂತಿ ಆಚರಿಸಿತ್ತು. ಈ ಬಾರಿಯೂ ಪ್ರಬಲ ವಿರೋದ್ಧದ ನಡುವೆ ಆಚರಿಸುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.

ಟಿಪ್ಪು ಜಯಂತಿ ಆಚರಣೆ ವಿರೋಧಿ ಸಮಿತಿ ಅಧ್ಯಕ್ಷ ಅಭಿಮನ್ಯು ಕುಮಾರ್‌ ಮಾತನಾಡಿ, ಸಿದ್ದು ಮಹಾನ್‌ ಟಿಪ್ಪು ಅವತಾರ ತಳೆದಿದ್ದಾರೆ. ಸಿದ್ದರಾಮಯ್ಯ ವೇಷದಲ್ಲಿ ಟಿಪ್ಪು ಮತ್ತೆ ಬಂದಿದ್ದಾನೆ. ಟಿಪ್ಪುವಿನಷ್ಟು ಕ್ರೌರ್ಯ, ಮತಾಂತರ ಮಾಡಿರುವ ವ್ಯಕ್ತಿಗಳು ಬೇರೆ ಯಾರೂ ಇಲ್ಲ. ಕೊಡಗಿನ ಮೇಲೆ 31 ಬಾರಿ ದಾಳಿ ನಡೆಸಿದ್ದಾನೆ. ನಮ್ಮ ಪವಿತ್ರ ನೆಲವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆಕ್ರೋಶಭರಿತವಾಗಿ ಮಾತನಾಡಿದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಅವರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮನು ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ನಗರಸಭೆ ಉಪಾಧ್ಯಕ್ಷ ಟಿ.ಎಸ್‌. ಪ್ರಕಾಶ್‌, ಅರುಣ್‌ ಶೆಟ್ಟಿ, ಪಿ.ಡಿ. ಪೊನ್ನಪ್ಪ, ಕೆ.ಎಸ್‌. ರಮೇಶ್, ಬಾಲಚಂದ್ರ ಕಳಗಿ, ಬಿ.ಶಿವಪ್ಪ, ನಾಗೇಶ್‌ ಕುಂದಲ್ಪಾಡಿ, ವಿಜು ಸುಬ್ರಮಣಿ, ಸ್ಮಿತಾ ಪ್ರಕಾಶ್‌ ಮೊದಲಾದವರು ಹಾಜರಿದ್ದರು.

ಜಿಲ್ಲೆಯಲ್ಲಿ ಸೆಕ್ಷನ್‌ 144 ಜಾರಿ
ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಪರ – ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದ ಶುಕ್ರವಾರ ಬೆಳಿಗ್ಗೆ 8 ಗಂಟೆಯ ತನಕವೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆಯ ವೇಳೆ ಕೆಲವು ಮಹಿಳಾ ಕಾರ್ಯಕರ್ತರು ಸೆಕ್ಷನ್‌ 144 ಜಯಂತಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಬಿಜೆಪಿಯ ಪ್ರತಿಭಟನೆ ವೇಳೆ ಪೊಲೀಸ್‌ ಕಣ್ಗಾವಲಿತ್ತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬ್ಯಾರಿಕೇಡ್‌ ಹಾಕಿ ಪ್ರತಿಭಟನಾಕಾರರು ಒಳನುಗ್ಗದಂತೆ ನಿರ್ಬಂಧಿಸಲಾಗಿತ್ತು. ಪಕ್ಕದಲ್ಲೇ ಕೆಎಸ್‌ಆರ್‌ಪಿ ತುಕಡಿ ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರ ಮಧ್ಯೆ ಪೊಲೀಸರು ಸಿವಿಲ್‌ ಡ್ರೆಸ್‌ನಲ್ಲಿ ಇದ್ದದ್ದು ಕಂಡುಬಂತು.


‘ಸಿದ್ದರಾಮಯ್ಯ...ತಾಕತ್ತಿದ್ದರೆ ನೀನು ಬಾ’
ಮಡಿಕೇರಿ:  ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗಿನಲ್ಲಿ ಎಲ್ಲರಿಗೂ ತದುಕಿ ಎಂದು ಪೊಲೀಸರಿಗೆ ಆದೇಶ ನೀಡಿದ್ದಾರೆ. ತಾಕತ್ತಿದ್ದರೆ ಸಿದ್ದರಾಮಯ್ಯ ನೀನು ಕೊಡಗಿಗೆ ಬಾ... ನಾವೇ ಬುದ್ಧಿಕಲಿಸುತ್ತೇವೆ’ ಎಂದು ಶಾಸಕ ಕೆ.ಜಿ. ಬೋಪಯ್ಯ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.