ADVERTISEMENT

ಕ್ರೀಡಾ ಉತ್ತೇಜನೆ; ಸಂಘಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:31 IST
Last Updated 9 ಜನವರಿ 2017, 8:31 IST

ಸೋಮವಾರಪೇಟೆ: ಮುಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆಯುವ ರಾಜ್ಯದ ಕ್ರೀಡಾಪಟುವಿಗೆ ರಾಜ್ಯ ಸರ್ಕಾರದ ವತಿಯಿಂದ ₹ 5 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹ 3 ಕೋಟಿ ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುವಿಗೆ ₹ 2 ಕೋಟಿ ನೀಡಲಾಗುವುದು ಎಂದು ರಾಜ್ಯದ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್‌ ಕ್ಲಬ್ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ವಿಠಲ ಆಚಾರ್ಯ ಸ್ಮಾರಕ ಜಿಲ್ಲಾಮಟ್ಟದ ಹಾಕಿ ಟೂರ್ನಿಯ ಅಂತಿಮ ದಿನವಾದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯದಲ್ಲಿ ಅತ್ಯುತ್ತಮ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಹಾಕಿ ತಂಡವನ್ನು ರೂಪಿಸುವ ಉದ್ದೇಶದಿಂದ ಮೈಸೂರಿನಲ್ಲಿ ಹಾಕಿ ಅಕಾಡೆಮಿ ಮತ್ತು ಕ್ರೀಡಾ ವಸತಿ ನಿಲಯವನ್ನು ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗುವುದೆಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಇರುವುದರಿಂದ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕು. ಕಳೆದ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಕ್ರೀಡಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವಂತೆ ಹೇಳಿದರು.

ಅಧ್ಯಕ್ಷತೆಯನ್ನು ಡಾಲ್ಫಿನ್ಸ್ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ ಎಚ್.ಎನ್.ಅಶೋಕ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ಎಸ್.ಎಲ್.ಎನ್ ಕಾಫಿ ಸಂಸ್ಥೆಯ ಮಾಲೀಕ ಸಾತಪ್ಪನ್, ಹಾಕಿ ಕೂರ್ಗ್‌ ಸಂಸ್ಥೆಯ ಅಧ್ಯಕ್ಷ ಕಾಳಯ್ಯ, ಅಂತರರಾಷ್ಟ್ರೀಯ ಭಾರತ ಹಾಕಿ ತಂಡದ ನಾಯಕ ಪಿ.ಆರ್. ಶ್ರೀಜೇಶ್, ಹಾಕಿ ಆಟಗಾರರಾದ ಎಸ್.ವಿ. ಸುನಿಲ್,  ವಿ.ಎಸ್. ವಿನಯ್, ಹರಿಪ್ರಸಾದ್,              ವಿಕ್ರಂಕಾಂತ್, ಅಂತರರಾಷ್ಟ್ರೀಯ        ಹಾಕಿ ತೀರ್ಪುಗಾರರಾದ ಆರ್.ವಿ. ರಘುಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.