ADVERTISEMENT

ಗೌಡ ಸಮುದಾಯದ ಒಗ್ಗಟ್ಟಿಗೆ ಕರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:39 IST
Last Updated 26 ಸೆಪ್ಟೆಂಬರ್ 2016, 9:39 IST

ಸುಂಟಿಕೊಪ್ಪ: ಗೌಡ ಸಮಾಜದ ಸಂಘಟನೆಯನ್ನು ಒಡೆಯುವ ಷಡ್ಯಂತ್ರ ನಡೆಯುತ್ತಿದ್ದು ಈ ಬಗ್ಗೆ ಕುಲ ಬಾಂಧವರು ಎಚ್ಚರ ವಹಿಸಬೇಕು ಎಂದು ಗೌಡ ಸಂಘದ ಸಲಹೆಗಾರ ಬೆದ್ರಂಗಲ ಬಿ.ಭಾರತೀಶ್ ಕರೆ ನೀಡಿದರು.

ಇಲ್ಲಿನ ಗದ್ದೆಹಳ್ಳದಲ್ಲಿ ನಡೆದ ‘ಗೌಡ ಸಂಘ– ಸುಂಟಿಕೊಪ್ಪ ನಾಡು’  ಪ್ರಥಮ  ವಾರ್ಷಿಕ  ಸಭೆಯಲ್ಲಿ ಅವರು ಮಾತನಾಡಿದರು. ಈ ಸಂಘ ಕೊಡಗಿನಲ್ಲಿಯೇ ಪ್ರಬಲವಾಗಿ ಹೊರಹೊಮ್ಮುತ್ತಿರುವು ದಲ್ಲದೆ ಒಂದೇ ವರ್ಷದಲ್ಲಿ 639 ಮಂದಿ ಸದಸ್ಯತ್ವವನ್ನು ಪಡೆದು ಭದ್ರ ಅಡಿಪಾಯಕ್ಕೆ ಕಾರಣರಾಗಿದ್ದಾರೆ. ನಾವೆಲ್ಲರೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಯಂಕನ.ಎಂ.ಉಲ್ಲಾಸ್, ಗೌಡ ಸಂಘವನ್ನು ಮಾಧರಿ ಸಂಘವಾಗಿ ರೂಪಿಸಲು ಅರೆ ಗೌಡ, ಒಕ್ಕಲಿಗ ಗೌಡ, ತುಳು ಗೌಡ ಬಾಂಧವರು ಕೈ ಜೋಡಿಸಬೇಕು ಎಂದರು.

ಈ ವಿಭಾಗದ ಜನಾಂಗದವರ ಸಹಕಾರದಿಂದ 2015 ರಲ್ಲಿ ಸ್ಥಾಪಿತವಾದ ಸಂಘದಲ್ಲಿ ಸಣ್ಣ ಹಿಡುವಳಿದಾರರು,ಕಾಫಿ ಬೆಳೆಗಾರರು, ಕೃಷಿ ಕಾರ್ಮಿಕರಿದ್ದು, ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಗೌಡ ಜನಾಂಗದಲ್ಲಿ ಸಂಕಷ್ಟದಲ್ಲಿರುವ ಮಂದಿಗೆ ಸಹಾಯಹಸ್ತ ನೀಡುವ ಬಗ್ಗೆ ಯೋಜನೆಗಳು ಸಿದ್ಧವಾಗಿದೆ. ಹಾಗೆಯೇ ಸಮಾಜದ ಕಟ್ಟಡ, ಸಮೂದಾಯ ಭವನಕ್ಕೆ ನಿವೇಶನವನ್ನು ಖರೀದಿಸಿ ಕಟ್ಟಡ ನಿರ್ಮಿಸಲು ಉದ್ದೇಶ ಇರುವುದರಿಂದ ದಾನಿಗಳು ನೆರವು ನೀಡಬೇಕು ಎಂದು ಉಲ್ಲಾಸ್ ಮನವಿ ಮಾಡಿಕೊಂಡರು.

ಸಂಘದ ಕಾರ್ಯದರ್ಶಿ ವೈ.ಎಲ್. ಕೌಶಿಕ್ ಸಂಘದ ವರದಿ ವಾಚನ ಹಾಗೂ ಲೆಕ್ಕ ಪರಿಶೋಧಕ ವರದಿ ವಾಚಿಸಿ ಅನುಮೋದನೆ ಪಡೆದುಕೊಂಡರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬೈಚನ ತಿಮ್ಮಯ್ಯ,ಕಾರ್ಯದರ್ಶಿ ವೈ.ಎಲ್. ಕೌಶಿಕ್, ಖಜಾಂಚಿ ಪಟ್ಟೆಮನೆ ಉದಯಕುಮಾರ್, ಸಹಕಾರ್ಯದರ್ಶಿ ಮಾಗಲು ವಸಂತ ಇದ್ದರು.

ಪಡ್ಯಂಬೈಲು ಮೀನಾಕ್ಷಿ ಪ್ರಾರ್ಥನೆ ಹಾಡಿದರು. ಕುದುಪಜೆ ಲತಾ ಸುರೇಶ್ ಸ್ವಾಗತಿಸಿದರು, ಕಡ್ಯದ ರತಿ,ಆನೆರ ಮಾಲ, ಪಟ್ಟೆಮನೆ ದೀಕ್ಷಿತ ಲೋಕೇಶ್ ನಿರೂಪಿಸಿದರು. ಪಟ್ಟೆಮನೆ ಕುಸುಮ ಸದಾಶಿವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.