ADVERTISEMENT

ದಲಿತರ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿಲ್ಲ: ಶಾಸಕ ಎಂ. ಪಿ. ಅಪ್ಪಚ್ಚುರಂಜನ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:51 IST
Last Updated 24 ಏಪ್ರಿಲ್ 2017, 5:51 IST
ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್, ಜಗಜೀವನ್‌ರಾಂ ಜಯಂತಿ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸಿದರು
ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಭಾನುವಾರ ಏರ್ಪಡಿಸಿದ್ದ ಅಂಬೇಡ್ಕರ್, ಜಗಜೀವನ್‌ರಾಂ ಜಯಂತಿ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸಿದರು   

ಕುಶಾಲನಗರ:  ಆರು ದಶಕ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೀನ ದಲಿತರನ್ನು ವೋಟ್‌ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡಿದೆಯೇ ಹೊರತು ಅವರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಿಲ್ಲ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಸಮೀಪದ ಕೂಡುಮಂಗಳೂರು ಬಿಜೆಪಿ ಸ್ಥಾನೀಯ ಸಮಿತಿಯಿಂದ ಭಾನುವಾರ ಕೂಡುಮಂಗಳೂರು ರಾಮೇಶ್ವರ ಸಹಕಾರ ಭವನದ ಆವರಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಹಾಗೂ ಬಾಬು ಜಗಜೀವನ್ ರಾಂ ಅವರ 110ನೇ ಜನ್ಮದಿನಾಚರಣೆ ಹಾಗೂ ಪಕ್ಷದ ಕಾರ್ಯಕರ್ತರು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಾಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದ ಫಲವಾಗಿ ಇಂದು ಸಾಮಾನ್ಯ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಲು ಸಾಧ್ಯವಾಯಿತು. ಅಲ್ಲದೆ ಇಂತಹ ವೇದಿಕೆಯಲ್ಲಿ ನಿಂತು ನಾವು ಮಾತನಾಡುವ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ADVERTISEMENT

ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಗೆ ಆಯ್ಕೆಯಾಗಬಾರದು ಎಂದು ನೆಹರೂ ನೇತೃತ್ವದ ಕಾಂಗ್ರೆಸ್ ಕುತಂತ್ರದಿಂದ ಸೋಲಿಸಿತು. ಅಂದಿನಿಂದಲೇ ದಲಿತರನ್ನು ಮಟ್ಟ ಹಾಕುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಅದೇ ರೀತಿ ಕೊರಟಗೆರೆಯಲ್ಲಿ ಪರಮೇಶ್ವರವನ್ನು ಸಿದ್ದರಾಮಯ್ಯ ಅವರು ಸೋಲಿಸಿ ಅವರನ್ನು ಕೂಡ ರಾಜಕೀಯವಾಗಿ ತುಳಿಯುವ ಕೆಲಸವನ್ನು ಮಾಡಲಾಯಿತು ಎಂದು ಆರೋಪಿಸಿದರು.

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ಅಂಬೇಡ್ಕರ್ ಪೀಠವನ್ನು ಸ್ಥಾಪಿಸುವ ಮೂಲಕ ಅವರ ವಿಚಾರಧಾರೆಗಳನ್ನು ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ವಿಶ್ವದಲ್ಲಿ ಬಿಜೆಪಿ ನಂಬರ್ ಒನ್ ಪಕ್ಷವಾಗಿ ಹೊರಹೊಮ್ಮಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ವಿಶ್ವದ ಬಲಿಷ್ಠ ರಾಷ್ಟ್ರ ಅಮೆರಿಕ ಕೂಡ ಮೆಚ್ಚಿಕೊಂಡಿದೆ. ಅಲ್ಲದೆ ಮೋದಿ ಅವರ ಆಡಳಿತ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಅಂಬೇಡ್ಕರ್ ಅವರ ನಿವಾಸ ಹಾಗೂ ಇಂಗ್ಲೆಂಡ್‌ನಲ್ಲಿ ಅವರು ವಾಸವಾಗಿದ್ದ ಮನೆಯನ್ನು ₹ 100 ಕೋಟಿ ವೆಚ್ಚದಲ್ಲಿ ಖರೀದಿ ಅಂಬೇಡ್ಕರ್ ಸ್ಮಾರಕ ಭವನವಾಗಿ ಮೋದಿ ಸರ್ಕಾರ ರೂಪಿಸುತ್ತಿದೆ ಎಂದು ಹೇಳಿದರು.

ಕೂಡುಮಂಗಳೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಜಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ, ತಾ.ಪಂ.ಸದಸ್ಯರಾದ ಡಿ.ಎಸ್.ಗಣೇಶ್, ಪುಷ್ಪಾಜರ್ನಾಧನ್, ಕಾಫಿ ಮಂಡಳಿ ನಿರ್ದೇಶಕ ಜಿ.ಎಲ್.ನಾಗರಾಜು,  ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಉಪಾಧ್ಯಕ್ಷ ಕೆ.ಕೆ.ಬೋಗಪ್ಪ, ಎಸ್.ಸಿ.ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷ ಯೋಗೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಿಸಾರ್ ಅಹಮ್ಮದ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ.ಜಯಂತ್, ಹೋಬಳಿ ಮಾಜಿ ಅಧ್ಯಕ್ಷ ಕೆ.ವರದ ಉಪಸ್ಥಿತರಿದ್ದರು.

ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ನಿರ್ಮಲಾ ಪ್ರಾರ್ಥಿಸಿದರು. ತಾಲ್ಲೂಕು ಮುಖಂಡ ವರದರಾಜ್ ದಾಸ್ ಸ್ವಾಗತಿಸಿದರು. ನೂತನವಾಗಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಬಿ.ಭಾರತೀಶ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಮೊದಲಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಇದೇ ಸಂದರ್ಭ ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಜ್ಯೋತಿ ಪ್ರಮೀಳಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಇವರೊಂದಿಗೆ ಇತರ ಪಕ್ಷಗಳ ಮಹಿಳಾ ಮುಖಂಡರು ಬಿಜೆಪಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.