ADVERTISEMENT

ದಿಡ್ಡಳ್ಳಿ ನಿರಾಶ್ರಿತರಿಗೆ ಮೊದಲ ಆದ್ಯತೆ; ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:47 IST
Last Updated 11 ಜನವರಿ 2017, 9:47 IST

ಮಡಿಕೇರಿ: ದಿಡ್ಡಳ್ಳಿ ನಿರಾಶ್ರಿತರಿಗೆ ನಿವೇಶನ ಹಾಗೂ ಪುನರ್ವಸತಿ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಹೇಳಿದರು.

ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಮಂಗಳವಾರ ನಡೆದ ಪುನರ್ವಸತಿ ಕುರಿತ ಸಭೆಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಬುಡ ಕಟ್ಟು ಜನರಿಗೆ ನಿವೇಶನ ಕಲ್ಪಿಸದಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ವೇಳೆ ಸಚಿವರು ಮಾತನಾಡಿ, ಇದುವರೆಗೂ ಯಾರೂ ನಿವೇಶನ ಕಲ್ಪಿಸಿ ಎಂದು ಮನವಿ ಸಲ್ಲಿಸಿರಲಿಲ್ಲ. ಈಗ ಏಕಾಏಕಿ ದಿಡ್ಡಳ್ಳಿ ನಿರಾಶ್ರಿತರಿಗೆ ಅಡ್ಡಿ ಪಡಿಸುವುದು ಸಲ್ಲದು ಎಂದು ಮನವಿ ಮಾಡಿದರು.

ಈಗ ನೀಡಿರುವ ಪಟ್ಟಿಯಲ್ಲಿ ಮತ್ತೆ ಹೆಸರನ್ನು ಬದಲಾಯಿಸಬಾರದು. ಸ್ಥಳೀಯ ಅರ್ಹ ಆದಿವಾಸಿಗಳಿಗೆ ನಿವೇ ಶನ ಒದಗಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ ಒಂದು ವಾರದೊಳಗೆ ಅಗತ್ಯ ದಾಖಲೆಗಳ ಪಟ್ಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೋರಿದರು.  

ಬುಡಕಟ್ಟು ಸಮುದಾಯದ ಪ್ರಮುಖರಾದ ಚಂದ್ರು, ನಿಜವಾದ ಆದಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು. ಕುಶಾಲನಗರ ಬಳಿಯ ಬಸವನಹಳ್ಳಿ ಹಾಗೂ ರಾಂಪುರದಲ್ಲಿ ಗುರುತಿಸಿರುವ ಭೂಮಿಯನ್ನು ಸೋಮ ವಾರಪೇಟೆ ತಾಲ್ಲೂಕಿನ ಆದಿವಾಸಿಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.  

ಇದಕ್ಕೆ ಪ್ರತಿಕ್ರಿಯಿಸಿದ  ಸಚಿವರು ದಿಡ್ಡಳ್ಳಿಯ ನಿರಾಶ್ರಿತರು ಜಿಲ್ಲೆಯ ಮೂರು ತಾಲ್ಲೂಕಿನವರಾಗಿ ದ್ದಾರೆ. ಆದ್ದರಿಂದ ಎಲ್ಲ ಬಡ ಮೂಲ ನಿವಾಸಿ ಅರ್ಹ ಗಿರಿಜನರಿಗೆ ನಿವೇಶನ ಒದಗಿಸಲು ಸರ್ಕಾರ ಹಂತ ಹಂತವಾಗಿ ಕ್ರಮಕೈಗೊಳ್ಳಲಿದೆ. ಸದ್ಯ ದಿಡ್ಡಳ್ಳಿಯ ನಿರಾಶ್ರಿತರಿಗೆ ಪ್ರಥಮ ಆದ್ಯತೆಯಲ್ಲಿ ನಿವೇಶನ ಹಂಚಿಕೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. 

ಪ್ರತಿಭಟನೆ ಕೈಬಿಡಲು ಮಾಜಿ ಸೈನಿಕರಿಗೆ ಮನವಿ: ಮಾಜಿ ಸೈನಿಕರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಸೂಚಿಸಲಾಗಿದ್ದು, ಪ್ರತಿಭಟನೆ ಕೈಬಿಡುವಂತೆ  ಸಚಿವ ಎಂ.ಆರ್‌. ಸೀತಾರಾಂ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದರು. ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಮ್ಮತ್ತಿಯ ಇಬ್ಬರು ಮಾಜಿ ಸೈನಿಕರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗಿದೆ. 

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ದಿಡ್ಡಳ್ಳಿಯಲ್ಲಿನ ಗಿರಿಜನರು ಮೂಲತಃ ಆದಿವಾಸಿಗಳಾಗಿದ್ದು, ಅವರಿಗೆ ನಿವೇಶನ ಒದಗಿಸಬೇಕಿದೆ. ಆ ನಿಟ್ಟಿನಲ್ಲಿ ಸಹಕರಿಸಬೇಕು. ಅರಣ್ಯ ಹಕ್ಕು ಕಾಯ್ದೆ ಅಡಿ ಸಹ ಅರ್ಹರಿಗೆ ಅರಣ್ಯ ಹಕ್ಕು ಪತ್ರವನ್ನು ನೀಡಲಾಗುತ್ತದೆ. ಆ ಕಾರ್ಯವು ಎಂದಿನಂತೆ ನಡೆಯಲಿದೆ ಎಂದು ಅವರು ತಿಳಿಸಿದರು.
94ಸಿ ಅಡಿ ಅರ್ಜಿ ಸಲ್ಲಿಸುವವರಿಗೆ ಅದೂ ಸಹ ಕಾರ್ಯಗತಗೊಳ್ಳಲಿದೆ. ಯಾರೂ  ಗೊಂದಲ ನಿರ್ಮಾಣ ಮಾಡುವುದು ಬೇಡ ಎಂದು ಹೇಳಿದರು. 

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪಂಚಾಯಿತಿ ಸಿಇಒ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಡಿವೈಎಸ್‌ಪಿ ಛಬ್ಬಿ, ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಯಾದೇವಿ ಗಲಗಲಿ, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.