ADVERTISEMENT

ದೂರು ಬಂದರೆ ಕಠಿಣ ಕ್ರಮ

ಅಧಿಕಾರಿಗಳಿಗೆ ಎಚ್ಚರಿಕೆ * ‘ಲೋಕಾಯುಕ್ತ ಸಂಸ್ಥೆ ನಿಶ್ಯಕ್ತಗೊಂಡಿಲ್ಲ’

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:44 IST
Last Updated 4 ಮೇ 2017, 7:44 IST
ಮಡಿಕೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಮಾತನಾಡಿದರು
ಮಡಿಕೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಮಾತನಾಡಿದರು   

ಮಡಿಕೇರಿ: ಅಧಿಕಾರಿಗಳು ಬಡವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ  ಪಿ.ವಿಶ್ವನಾಥ ಶೆಟ್ಟಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತವೆ. ದೂರುಗಳು ಕೇಳಿ ಬರದಂತೆ ಕಾರ್ಯ ನಿರ್ವಹಿಸುವುದು ಅಧಿಕಾರಿಗಳ ಜವಾಬ್ದಾರಿ; ಆ ನಿಟ್ಟಿನಲ್ಲಿ ಸರ್ಕಾರ ನಿಗದಿಪಡಿಸಿರುವ ಕಾಲ ಮಿತಿಯೊಳಗೆ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಹೇಳಿದರು.

ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಲ್ಲಿ ನಿವೇಶನದ ಖಾತೆ ಬದಲಾವಣೆ ಹಾಗೂ ಮನೆ ನಿರ್ಮಾಣ ಸಂಬಂಧ ಅರ್ಜಿಗಳ ವಿಲೇವಾರಿ ಮಾಡಲು ಸತಾಯಿಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಯಥೇಚ್ಛವಾಗಿ ಕೇಳಿ ಬರುತ್ತವೆ. ಇಂತಹ ದೂರುಗಳು ಮರುಕಳಿಸಿದರೆ ಮುಂದಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಲೋಕಾಯುಕ್ತರು ಎಚ್ಚರಿಕೆ ನೀಡಿದರು.

ಅಧಿಕಾರಿಗಳ ವಿರುದ್ಧ ದೂರುಗಳು ಕೇಳಿಬಂದಾಗ ಲೋಕಾಯುಕ್ತವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವಿದೆ. ಆದರೆ, ಅಧಿಕಾರಿಗಳ ವಿಶ್ವಾಸ ಪಡೆದು ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸರ್ಕಾರದ ಸೇವೆಗಳನ್ನು ತಲುಪಿಸಬೇಕು ಎಂಬುದು ಲೋಕಾಯುಕ್ತದ ಆಶಯ; ಅದರಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಹೇಳಿದರು. 

ಸರ್ಕಾರ ಜನಸೇವೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಶಾಲೆಗೆ ಪ್ರತಿನಿತ್ಯ ಹಾಜರಾಗಲು ವಿದ್ಯಾರ್ಥಿನಿಯರಿಗೆ ₹ 2 ಪ್ರೋತ್ಸಾಹ ಧನ, ಬೈಸಿಕಲ್, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ... ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು. 

ಸರ್ಕಾರ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಮಕ್ಕಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ವಿನಿಯೋಗ ಮಾಡುತ್ತಿದೆ. ಅವುಗಳನ್ನು ಕಾಲಮಿತಿಯೊಳಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ವಿದ್ಯಾರ್ಥಿ ನಿಲಯ, ವಸತಿ ನಿಲಯಗಳು, ಅಂಗನವಾಡಿಗಳು, ಅನ್ನಭಾಗ್ಯ ಯೋಜನೆಯಡಿ ಆಹಾರ ಉಚಿತ ಪೂರೈಕೆ ಹೀಗೆ ನಾನಾ ಕಾರ್ಯಕ್ರಮಗಳನ್ನು ತಲುಪಿಸಬೇಕು ಎಂದು ನಿರ್ದೇಶನ ನೀಡಿದರು. 

ಲೋಕಾಯುಕ್ತ ಎಡಿಜಿಪಿ ಪರಶಿವಮೂರ್ತಿ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಬಡವರಿಗೂ ತಲುಪಿಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿ.ಪಂ. ಸಿಇಒ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಡಿಎಚ್ಒ ಶ್ರೀರಂಗಪ್ಪ, ಡಿಡಿಪಿಐ ಬಸವರಾಜು, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು, ಜಿಲ್ಲಾ ಸರ್ಜನ್ ಅಬ್ದುಲ್ ಅಜೀಜ್, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್, ಸಮಾಜ ಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ, ಐಟಿಡಿಪಿ ಅಧಿಕಾರಿ ಪ್ರಕಾಶ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್, ಪೌರಾಯುಕ್ತೆ ಬಿ.ಶುಭಾ, ಪ.ಪಂ. ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಶ್ರೀಧರ ಇತರರು ಹಲವು ಮಾಹಿತಿ ನೀಡಿದರು.

ದಾಳಿಯೇ ಪರಿಹಾರ ಅಲ್ಲ: ವಿಶ್ವನಾಥಶೆಟ್ಟಿ
ಮಡಿಕೇರಿ: 
‘ನಿರಂತರ ದಾಳಿ ಮಾಡುವುದರಿಂದಲೇ ರಾಜ್ಯದಲ್ಲಿ ಲಂಚಗುಳಿತನ ನಿಯಂತ್ರಣಕ್ಕೆ ಬರಲಿದೆ ಎಂದು ಭಾವಿಸಿದ್ದರೆ ತಪ್ಪು; ಅಧಿಕಾರಿಗಳ ಮಾನಹಾನಿ ಮಾಡಿ ಉತ್ತಮ ಆಡಳಿತ ನೀಡುತ್ತೇವೆ ಎಂಬುದೂ ಸತ್ಯಕ್ಕೇ ದೂರವಾದ ಮಾತು...’- ಹೀಗೆ ವಿಶ್ಲೇಷಿಸಿದವರು ಲೋಕಾಯುಕ್ತ ಪಿ.ವಿಶ್ವನಾಥಶೆಟ್ಟಿ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದಾಳಿ ಮಾಡಿದರೆ ಪಾರದರ್ಶಕ ತರುಲು ಸಾಧ್ಯವೇ? ದಾಳಿ ಕಾರ್ಯವನ್ನು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಮಾಡುತ್ತಿದೆ.

ತಪ್ಪು ಕಂಡುಬಂದರೆ ಆಯಾ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇನೆ. ಮೊದಲು ಮಾತುಕತೆಯ ಮೂಲಕ ಪರಿಹಾರ ಕಂಡುಕೊಂಡರೆ ಪಾರದರ್ಶಕ ಸಾಧ್ಯವಾಗಲಿದೆ. ಬಳಿಕವೂ ತಿದ್ದಿಕೊಳ್ಳದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿದೆ’ ಎಂದು ಹೇಳಿದರು.

ನಿಶ್ಯಕ್ತಗೊಂಡಿಲ್ಲ: ‘ಎಸಿಬಿ ರಚನೆಯಾದ ಬಳಿಕ ಲೋಕಾಯುಕ್ತ ಸಂಸ್ಥೆ ನಿಶ್ಯಕ್ತಗೊಂಡಿದೆ ಎಂಬ ಅಭಿಪ್ರಾಯವಿದೆ. ಅದು ಸುಳ್ಳು. ಎಸಿಬಿ ರಚನೆಯ ಬಳಿಕವೂ ಸಾಕಷ್ಟು ದೂರುಗಳು ಬರುತ್ತಿವೆ. ಎಸಿಬಿ ಬೇಕೋ ಬೇಡವೋ ಎಂಬುದು ನ್ಯಾಯಾಲಯದಲ್ಲಿದ್ದು, ಅದರ ಬಗ್ಗೆ ಹೆಚ್ಚು ಚರ್ಚೆ ನಡೆಸುವುದಿಲ್ಲ’ ಎಂದು ವಿಶ್ವನಾಥಶೆಟ್ಟಿ ತಿಳಿಸಿದರು.

ದೆಹಲಿಯ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯವು ಲಂಚಗುಳಿತನದಲ್ಲಿ ಅಗ್ರ ಸ್ಥಾನದಲ್ಲಿದೆ ಎಂಬುದುರ ಬಗ್ಗೆ ಗಮನ ಸೆಳೆದಾಗ, ‘ಇದನ್ನು ನಾನು ಒಪ್ಪಲು ಸಾಧ್ಯವಿಲ್ಲ. ಯಾವ ಸಂಸ್ಥೆ ಸಮೀಕ್ಷೆ ನಡೆಸಿದೇ ಎಂಬುದು ತಿಳಿದಿಲ್ಲ. ಕೇರಳದಲ್ಲಿ ಭ್ರಷ್ಟಾಚಾರ ಸ್ವಲ್ಪಕಡಿಮೆ ಇರಬಹುದು. ಲಂಚಗುಳಿತನದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂಬುದಕ್ಕೇ ಪ್ರಾಮುಖ್ಯತೆ ನೀಡಿ, ಜನರನ್ನು ದಾರಿತಪ್ಪಿಸುವ ಕೆಲಸ ಆಗಬಾರದು’ ಎಂದು ಎಚ್ಚರಿಸಿದರು.

‘ಕರ್ನಾಟಕದಲ್ಲಿ ಅಂತಹ ಸ್ಥಿತಿಯಿಲ್ಲ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಒಳಿತು. ಎಲ್ಲವನ್ನೂ ಕೆಟ್ಟ ಮನಸ್ಸಿನಿಂದಲೇ ನೋಡಬಾರದು. ಜನರೂ ಸಹಕಾರ ನೀಡಬೇಕು’ ಎಂದು ಹೇಳಿದರು.

‘ಸರ್ಕಾರದ ಕಾರ್ಯಕ್ರಮಗಳು ಬರೀ ಕಾಗದಲ್ಲಿ ಉಳಿದರೆ ಸಾಲದು. ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಯೋಜನೆಗಳನ್ನು ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಬೇಕು. ಏಪ್ರಿಲ್‌ 28ಕ್ಕೆ ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಕಳೆದಿದ್ದು, 13 ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದೇನೆ. ನನಗೂ ಅಧಿಕಾರಿಗಳು ಕೆಲಸ ಮಾಡುತ್ತಾರೆಂಬ ವಿಶ್ವಾಸ ಬಂದಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕಾಯುಕ್ತ ಎಡಿಜಿಪಿ ಪರಿಶಿವಮೂರ್ತಿ, ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಜಿಲ್ಲಾ ಪಂಚಾಯಿತಿ ಸಿಇಒ ಚಾರುಲತಾ ಸೋಮಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌ಕುಮಾರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್‌ ಹಾಜರಿದ್ದರು.

ADVERTISEMENT

*
ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕೆ ಸ್ಪಂದಿಸಿ ಪಾರದರ್ಶಕ ಆಡಳಿತ ನೀಡದಿದ್ದರೆ ಕ್ರಮ ಕೈಗೊಳ್ಳುವ ಅಧಿಕಾರವಿದೆ.
-ಪಿ.ವಿಶ್ವನಾಥಶೆಟ್ಟಿ,
ಲೋಕಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.