ADVERTISEMENT

‘ನೂತನ ಕಾಫಿ ಕಾಯ್ದೆಯಿಂದ ಬೆಳೆಗಾರರಿಗೆ ತೀವ್ರ ತೊಂದರೆ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:36 IST
Last Updated 26 ಸೆಪ್ಟೆಂಬರ್ 2016, 9:36 IST

ಮಡಿಕೇರಿ: ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ನೂತನ ಕಾಫಿ ಕಾಯ್ದೆಯಿಂದ ಕಾಫಿ ಬೆಳೆಗಾರರು ಮುಂದಿನ ದಿನಗಳಲ್ಲಿ ತೀವ್ರ ತೊಂದರೆ ಯನ್ನು ಅನುಭವಿಸಲಿದ್ದು, ಸಾಕಷ್ಟು ಕಷ್ಟ– ನಷ್ಟಗಳಿಗೆ ಒಳಗಾಗಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಪದಾಧಿಕಾರಿ ಗಳ ಸಭೆಯಲ್ಲಿ ಅವರು ಮಾತನಾಡಿದರು.
ನೂತನ ಈ ಕಾಯ್ದೆಯಿಂದ ಬೆಳೆಗಾರರಿಗೆ ಯಾವುದೇ ಲಾಭವಿಲ್ಲ. ಕಾಯ್ದೆಯನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಸಂಬಂಧ ಅ. 1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಲಾಗುವುದು ಎಂದು ಹೇಳಿದರು.

ಕಾಫಿಗೆ ಸಂಬಂಧಿಸಿದ ನೂತನ ಕಾಯ್ದೆಯನ್ನು ಕೈಬಿಡಬೇಕು. ಕಾವೇರಿ ನದಿ ನೀರಿನ ವಿವಾದವನ್ನು ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಕಾಫಿ ಬೆಳೆಗಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕಂದಾಯ ಸಚಿವರು ಕಳೆದವಾರ ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ಜಿಲ್ಲೆಯ ಭೂಮಿ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಪೈಸಾರಿ ಜಾಗ ದಲ್ಲಿ ಮನೆ ಕಟ್ಟಿಕೊಂಡಿರುವ ದುರ್ಬಲ ವರ್ಗದವರಿಗೆ 94‘ಸಿ’ ನಿಯಮಾವಳಿ ಯಂತೆ ಅರ್ಜಿ ಸಲ್ಲಿಸಿ ಅಕ್ರಮವನ್ನು ಸಕ್ರಮ ಮಾಡಿಕೊಳ್ಳುವ ಸಮಯಾವಕಾಶವನ್ನು 2016ರ ನವೆಂಬರ್ ಅಂತ್ಯದವರೆಗೆ ಸಚಿವರು ವಿಸ್ತರಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ವತಿಯಿಂದ ಈ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ಜಾಗೃತಿ ಮೂಡಿಸಲು ಆಂದೋಲನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಆಂದೋಲನವನ್ನು ಅಕ್ಟೋಬರ್ ಅಂತ್ಯದ ಒಳಗೆ ಸಂಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

2016 ಡಾ.ಅಂಬೇಡ್ಕರ್ ಅವರ 125ನೇ ವರ್ಷಾಚರಣೆ. ಈ ಜನ್ಮ ದಿನಾಚರಣೆಯನ್ನು ದೇಶದಾದ್ಯಂತ ನಡೆಸಲು ನಿರ್ಧರಿಸಲಾಗಿದ್ದು, ಜಿಲ್ಲೆಯಲ್ಲಿ ಕೂಡ ಡಿಸೆಂಬರ್ ಅಂತ್ಯದೊಳಗೆ ಅಂಬೇಡ್ಕರ್ ಜಯಂತಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷ ಕೆಲವು ಕಡೆ ಅತಿ ವೃಷ್ಟಿಯಾಗಿದೆ ಮತ್ತೆ ಕೆಲವೆಡೆ ಅನಾವೃಷ್ಟಿಯಾಗಿದೆ. ಇದರಿಂದ ಸಾಕಷ್ಟು ಕಷ್ಟ–ನಷ್ಟಗಳಾಗಿದ್ದು, ಜಿಲ್ಲೆಯ ಬೆಳೆಗಾರರಿಗೆ ಹಾಗೂ ಕೃಷಿಕರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರವನ್ನು ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು. 

ಪಡಿತರ ಚೀಟಿಗೆ ಈಗ  3 ಲೀಟರ್ ಸೀಮೆಎಣ್ಣೆ ಗ್ರಾಹಕರಿಗೆ ದೊರೆಯು ತ್ತಿದ್ದು, ಇದು ಕಾಂಗ್ರೆಸ್ ಪ್ರಯತ್ನಕ್ಕೆ ಸಿಕ್ಕಿದ ಫಲ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದರು. 
ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್, ಪದಾಧಿಕಾರಿಗಳಾದ ಪಿ.ಕೆ. ಪೊನ್ನಪ್ಪ, ಪೋಕುಟ್ಟಿ, ಉಸ್ಮಾನ್ ಹಾಜಿ, ವಿ.ಪಿ. ಸುರೇಶ್, ಎಸ್.ಎಂ. ಚಂಗಪ್ಪ, ಎಂ.ಎಸ್. ವೆಂಕಟೇಶ್, ಟಿ.ಎಂ. ಅಯ್ಯಪ್ಪ, ಕೆ.ಕೆ. ಮಂಜುನಾಥ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.