ADVERTISEMENT

‘ಪರಿಸರ ಸಮತೋಲನದಿಂದ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 6:43 IST
Last Updated 16 ಜುಲೈ 2017, 6:43 IST

ಮಡಿಕೇರಿ: ‘ಗಿಡ, ಮರ, ಪ್ರಾಣಿ ಮತ್ತು ಪಕ್ಷಿಗಳು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇವು ಪರಿಸರ ಸಮತೋಲನಕ್ಕೆ ಸಹಕಾರಿಯಾಗಿವೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಆರ್.ಕೆ.ಎಂ.ಎಂ. ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಬಾಲಕರ ಬಾಲಮಂದಿರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ರೋಟರಿ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ನಡೆದ ಗಿಡ ನೆಡುವ ಕಾರ್ಯಕ್ರಮ ಮತ್ತು ಕಾನೂನು ಶಿಬಿರದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ನೆಮ್ಮದಿಯ ಬದುಕು ನಡೆಸುವಂತಾಗಬೇಕಾದರೆ ಪರಿಸರ ಸಮತೋಲನದಿಂದ ಕೂಡಿರಬೇಕು. ಪರಿಸರ ಸಂರಕ್ಷಣೆ ಕಾಪಾಡಿದಾಗ ಉತ್ತಮ ಜೀವನ ನಡೆಸಬಹುದು. ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು’ ಎಂದು ಸಲಹೆ ನೀಡಿದರು.

ADVERTISEMENT

‘14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣವಿದ್ದು, ಅದನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ದುಡಿಮೆಗೆ ದೂಡಬಾರದು. ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದೆ’ ಎಂದು ಸಲಹೆ ಮಾಡಿದರು.

1ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಡಿ. ಪವನೇಶ್ ಮಾತನಾಡಿ, ‘ದೇಶದಲ್ಲಿ ಸಂವಿಧಾನವೇ ಮೂಲ ಗ್ರಂಥವಾಗಿದ್ದು, ಮೂಲಭೂತ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಪಾಲಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಹೇಳಿದರು.

ರೋಟರಿಯ ಜಿಲ್ಲಾ ಗವರ್ನರ್ ಸುರೇಶ್ ಚಂಗಪ್ಪ ಮಾತನಾಡಿ, ‘ರೋಟರಿ ವತಿಯಿಂದ ಜಿಲ್ಲೆಯಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ನೆಟ್ಟ ಗಿಡವನ್ನು ಮೂರು ವರ್ಷದವರೆಗೆ ಆರೈಕೆ ಮಾಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸಫ್, ಮಡಿಕೇರಿ ರೋಟರಿ ಅಧ್ಯಕ್ಷ ಪ್ರೀತಂ, ಮಡಿಕೇರಿ ರೋಟರಿ ಕಾರ್ಯದರ್ಶಿ ಕೆ.ಎಸ್. ತಮ್ಮಯ್ಯ, ಬಾಲ ನ್ಯಾಯ ಮಂಡಳಿ ಸದಸ್ಯ ಬಿ.ಎಸ್. ಕುಮಾರಿ, ಅರಣ್ಯ ಇಲಾಖೆಯ ಜಗದೀಶ್, ಬಾಲಕರ ಬಾಲಮಂದಿರದ ಮೇಲ್ವಿಚಾರಕ ಚರಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.