ADVERTISEMENT

ಪ್ರವಾಸೋದ್ಯಮ ಉತ್ತೇಜಿಸಲು ಸಬ್ಸಿಡಿಗೆ ಕೋರಿಕೆ

ಸ್ಥಳೀಯ ಸಂಸ್ಕೃತಿ ಉಳಿಸಿ, ಬೆಳೆಸಲು ಶಾಸಕ ಅಪ್ಪಚ್ಚು ರಂಜನ್ ಮನವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 9:21 IST
Last Updated 28 ಸೆಪ್ಟೆಂಬರ್ 2016, 9:21 IST
ವಿಶ್ವಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಂಗಳವಾರ ಮಡಿಕೇರಿಯ ರಾಜರ ಗದ್ದಿಗೆಯಲ್ಲಿ ನಗರಸಭಾ ಪೌರಾಯಕ್ತೆ ಬಿ.ಬಿ. ಪುಷ್ಪಾವತಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು
ವಿಶ್ವಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಂಗಳವಾರ ಮಡಿಕೇರಿಯ ರಾಜರ ಗದ್ದಿಗೆಯಲ್ಲಿ ನಗರಸಭಾ ಪೌರಾಯಕ್ತೆ ಬಿ.ಬಿ. ಪುಷ್ಪಾವತಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು   

ಮಡಿಕೇರಿ:  ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮ ಬೆಳವಣಿಗೆಯ ಜತೆಗೆ ಸ್ಥಳೀಯ ಸಂಸ್ಕೃತಿಯನ್ನು ಉಳಿಸಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಸರ್ಕಾರ ಹೋಂಸ್ಟೆ ಹಾಗೂ ರೆಸಾರ್ಟ್‌ ನಿರ್ಮಾಣಕ್ಕೆ ಸಬ್ಸಿಡಿ ನೀಡಬೇಕು. ಈ ಸಂಬಂಧ ಪ್ರವಾಸೋದ್ಯಮ ಸಚಿವರಿಗೂ ಮನವಿ ಸಲ್ಲಿಸುವುದಾಗಿ ಇದೇ ವೇಳೆ ಭರವಸೆ ನೀಡಿದರು.

ಜಿಲ್ಲೆಗೆ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಉಪ ಗ್ರಾಮಗಳ ಅಭಿವೃದ್ಧಿಗೆ ಗಮನಹರಿಸಬೇಕು. ಪ್ರತಿ ಪ್ರವಾಸಿ ತಾಣಗಳಲ್ಲಿ ಕಸದ ಬುಟ್ಟಿಯ ವ್ಯವಸ್ಥೆ ಇರಬೇಕು. ಈ ಬಗ್ಗೆ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗಳಿಂದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರವಾಸೋದ್ಯಮ ಮೂಲ ಉದ್ದೇಶ ಕಲಿಕೆಯಾಗಿದ್ದು, ಕೊಡಗನ್ನು ವಿಶ್ವದಲ್ಲಿ ಗುರುತಿಸುವಂತಾಗಬೇಕು. ಜಿಲ್ಲೆಯು ಕೂಡ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಉತ್ತಮ ಕಾರ್ಯ ಯೋಜನೆಗಳು ರೂಪುಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಹೇಳಿರು.

ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲಿ ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು. ವಿದೇಶದಲ್ಲಿರುವ ಪ್ರವಾಸಿ ತಾಣಗಳ ಅಧ್ಯಯನ ಮಾಡಿ ಹೆಚ್ಚಿನ ಅಭಿವೃದ್ಧಿಗೆ ಚಿಂತನೆ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.

ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ವಿಶ್ವ ಸಂಸ್ಥೆಯ ನಿರ್ದೇಶನದಂತೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸುತ್ತಿದ್ದು, ಇದರ ಉದ್ದೇಶ ಪ್ರವಾಸೋದ್ಯಮದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸುವ ಚಿಂತನೆಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಾರುಲತಾ ಸೋಮಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್, ಜಿಲ್ಲಾ ಟೂರ್‍ಸ್‌ ಅಂಡ್ ಟ್ರಾವೆಲ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಚೆಯ್ಯಂಡ ಸತ್ಯ ಗಣಪತಿ, ಮೋಂತಿ ಗಣೇಶ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಹ ಪ್ರಾಧ್ಯಾಪಕ ಟಿ.ಡಿ. ತಿಮ್ಮಯ್ಯ, ಕ್ಲಬ್ ಮಹೀಂದ್ರಾ ರೆಸಾರ್ಟ್ಸ್‌ನ ಸೀನಿಯರ್ ಮ್ಯಾನೇಜರ್ ಎಂ. ಕಾರ್ತಿಕೇಯನ್‌ ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್ ಸ್ವಾಗತಿಸಿದರು, ಬಿಸಿಎಂ ಅಧಿಕಾರಿ ಕೆ.ವಿ. ಸುರೇಶ್ ನಿರೂಪಿಸಿದರು.

ಗದ್ದುಗೆಯಲ್ಲಿ ಸ್ವಚ್ಛತೆ
ಮಡಿಕೇರಿ:  ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜರ ಗದ್ದುಗೆ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ವಿವಿಧ ಸಂಘ– ಸಂಸ್ಥೆಗಳು, ವಿದ್ಯಾರ್ಥಿಗಳು, ನಗರಸಭೆ ಪೌರ ಕಾರ್ಮಿಕರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪೌರ ಕಾರ್ಮಿಕರು, ನಗರದ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಕ್ಲಬ್ ಮಹೀಂದ್ರಾ ಸಂಸ್ಥೆ,  ಗ್ರೀನ್ ಸಿಟಿ ಪಾರಂ, ಪ್ರವಾಸಿ ಮಿತ್ರ ಉದ್ಯೋಗಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT