ADVERTISEMENT

‘ಬಿದ್ದಾಟಂಡ ಹಾಕಿ ನಮ್ಮೆ’ಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:58 IST
Last Updated 16 ಏಪ್ರಿಲ್ 2017, 5:58 IST
ನಾಪೋಕ್ಲು ಪಟ್ಟಣದಲ್ಲಿ ನಡೆಯುವ ಬಿದ್ದಾಟಂಡ ಹಾಕಿಗೆ ಸಜ್ಜುಗೊಂಡಿರುವ ಅಂಕಣ
ನಾಪೋಕ್ಲು ಪಟ್ಟಣದಲ್ಲಿ ನಡೆಯುವ ಬಿದ್ದಾಟಂಡ ಹಾಕಿಗೆ ಸಜ್ಜುಗೊಂಡಿರುವ ಅಂಕಣ   

ನಾಪೋಕ್ಲು:  ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಹಾಕಿ ಉತ್ಸವ ಬಿದ್ದಾಟಂಡ ಕಪ್ ಹಾಕಿ– 2017' ಕ್ಕೆ ಏಪ್ರಿಲ್‌ 17ರಂದು ಚಾಲನೆ ಸಿಗಲಿದೆ.ಇಪ್ಪತ್ತೇಳು ದಿನಗಳ ಕಾಲ ನಡೆಯಲಿರುವ ಹಾಕಿ ಉತ್ಸವಕ್ಕೆ ಇಲ್ಲಿನ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿಯ ಕ್ರಿಡಾಂಗಣವನ್ನು ಸಜ್ಜುಗೊಳಿಸಲಾಗಿದೆ. 

ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಎರಡು ಮೈದಾನಗಳು ಮತ್ತು ಪದವಿ ಪೂರ್ವ ಕಾಲೇಜಿನ ಬಳಿಯಿರುವ ಒಂದು ಮೈದಾನ ದುರಸ್ತಿ ಕಾರ್ಯ ಹಾಗೂ ಅಂತಿಮ ಹಂತದ ಸಿದ್ಧತೆಗಳು ಶನಿವಾರ ಭರದಿಂದ ಸಾಗಿದವು.ಈ ಮೂರು ಮೈದಾನಗಳ ನಿರ್ವಹಣೆಗೆ ಸುಮಾರು ₹16 ಲಕ್ಷ ವೆಚ್ಚವಾಗಿದ್ದು ಹೆಚ್ಚುವರಿಯಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನವನ್ನೂ ಬಳಸಿಕೊಳ್ಳಲು ತಯಾರಿ ನಡೆದಿದೆ. ಒಟ್ಟು ₹ 1.60 ಕೋಟಿ ವೆಚ್ಚದಲ್ಲಿ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ.

ಎರಡು ಮೂರು ದಿನ ಕಾಲ ಮಧ್ಯಾಹ್ನ ನಿರಂತರವಾಗಿ ಸುರಿದ ಮಳೆ ತ್ವರಿತಗತಿಯಲ್ಲಿ ಮೈದಾನದ ಸಿದ್ಧತೆಗೆ ಅಡ್ಡಿಯಾಯಿತು ಎಂದು ಮೈದಾನ ಸಮಿತಿ ಅಧ್ಯಕ್ಷ ಬಿ.ಬಿ.ಬೆಳ್ಯಪ್ಪ ಹೇಳಿದರು. ಶನಿವಾರ ಮಳೆ ಬಿಡುವು ನೀಡಿದ್ದು  ಸಂಘಟಕರಿಗೆ ಸಮಾಧಾನವಾಗಿದೆ.‘ಕೊಡವ ಹಾಕಿ ನಮ್ಮೆ’ ಇತಿಹಾಸದಲ್ಲಿ ಮೊದಲ ಬಾರಿಗೆ ಮೆಟಲ್ ಗ್ಯಾಲರಿ ಅಳವಡಿಸಲಾಗಿದೆ. ಅದಕ್ಕೆ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮೈದಾನದ ಸುತ್ತ ಗ್ಯಾಲರಿ, ನೆಲ ಹಾಸು, ತಾಂತ್ರಿಕ ವಿಭಾಗ, ಮಾಧ್ಯಮ ವಿಭಾಗ, ಧ್ವನಿ ವರ್ಧಕ, ಬೆಳಕು ಸೇರಿದಂತೆ ಸಂಪೂರ್ಣ ವ್ಯವಸ್ಥೆಗಳಿಗೆ ₹ 33.50 ಲಕ್ಷ ವೆಚ್ಚದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿಯೇ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣ  ಹೆಚ್ಚು ವಿಶಾಲವಾಗಿದ್ದು ಮೈದಾನ ಸುತ್ತಲು ಗ್ಯಾಲರಿ ಅಳವಡಿಕೆ, ವಾಟರ್ ಫ್ರೂಫ್‌ನ 30 ಮಾರಾಟ ಮಳಿಗೆಗಳು ಮೈದಾನವನ್ನು ಅಲಂಕರಿಸಲಿದೆ.

ADVERTISEMENT

ಮೈದಾನದ ಬಲ ಭಾಗದಲ್ಲಿ ಹೋಟೆಲ್, ತಂಪು ಪಾನಿಯಗಳ ಅಂಗಡಿಗಳು ಇರುತ್ತವೆ. ಅನೈರ್ಮಲ್ಯ ಉಂಟು ಮಾಡಬಹುದಾದ ಮಾರಾಟ ಪ್ರತ್ಯೇಕವಾಗಿರಿಸುವುದರ ಮೂಲಕ ಸ್ವಚ್ಛತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೈದಾನದ ಪೂರ್ವ ಭಾಗದಲ್ಲಿ ಹರಿಯುವ ಕಾವೇರಿ ನದಿ ತೀರವನ್ನು ಶೇಡ್ ನೆಟ್ ಬಳಸಿ ಸಂಪೂರ್ಣವಾಗಿ ಮುಚ್ಚಿ ಜನ ನದಿಗೆ ಇಳಿಯುವುದನ್ನು ಮತ್ತು ನದಿ ನೀರನ್ನು ಕಲುಷಿತಗೊಳಿಸುವುದನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆ.

ಪದವಿ ಪೂರ್ವ ಕಾಲೇಜು ಬಳಿಯ ಮೈದಾನ ದುರಸ್ತಿಗೆ ಸಂಸದ ಪ್ರತಾಪ್ ಸಿಂಹ ₹ 30 ಲಕ್ಷ ಮಂಜೂರು ಮಾಡಿದ್ದಾರೆ. ಅದರಲ್ಲಿ ಈಗಾಗಲೇ ₹  20 ಲಕ್ಷ ದೊರೆತಿದೆ. ಅದರಂತೆ ಚೆರಿಯಪರಂಬು ಬಳಿಯ ನೂತನ ಮೈದಾನ ನಿರ್ಮಾಣಕ್ಕೆ ₹ 6.50 ಲಕ್ಷ ವೆಚ್ಚವಾಗಲಿದೆ. ಇದಕ್ಕೆ ಜಿ.ಪಂ ₹ 2 ಲಕ್ಷ ಮತ್ತು ತಡೆಗೋಡೆ ನಿರ್ಮಾಣಕ್ಕೆ ₹  2 ಲಕ್ಷ ನೀಡಲಾಗಿದೆ.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ₹ 5 ಲಕ್ಷ ಹಾಕಿ ನಮ್ಮೆಗೆ ಮಂಜೂರು ಮಾಡಿದ್ದಾರೆ. ಅದರೊಂದಿಗೆ ಶಾಸಕ ಕೆ.ಜಿ.ಬೋಪಯ್ಯ, ಎಂ.ಎಲ್.ಸಿ ಸುನಿಲ್ ಸುಬ್ರಮಣಿ ಕೂಡಾ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ.ಹಾಕಿ ನಮ್ಮೆಗೆ ಹಾಕಿ ಇಂಡಿಯಾ, ಹಾಕಿ ಕರ್ನಾಟಕ, ಹಾಕಿ ಕೊಡಗು ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಲಿದೆ. ಅದರೊಂದಿಗೆ ಅಂಪಯರ್ ಅಸೋಸಿಯೇಷನ್ ಕೂಡ ಸಹಕಾರ ನೀಡುತ್ತಿದ್ದು, ಅದರ ಅಧ್ಯಕ್ಷ ಕಾಟುಮಣಿಯಂಡ ಉಮೇಶ್ ಹಾಕಿ ನಮ್ಮೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಹಾಕಿ ನಮ್ಮೆಯಲ್ಲಿ ಅಂತರಾಷ್ಟ್ರೀಯ ಹಾಕಿ ಕ್ರೀಡಾಕೂಟದಲ್ಲಿ ಪಾಲಿಸುವ ನಿಯಮಗಳನ್ನು ಕೂಡಾ ಪಾಲಿಸಲಾಗುತ್ತಿದೆ. ಈಗಾಗಲೇ 306 ಕುಟುಂಬ ತಂಡಗಳು  ಭಾಗವಹಿಸಲಿವೆ. ಉತ್ಸವಕ್ಕೆ ₹ 1.60 ಕೋಟಿ ವೆಚ್ಚವಾಗಲಿದೆ20 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಬಿದ್ದಾಟಂಡ ಹಾಕಿ ನಮ್ಮೆಯ ತಾಂತ್ರಿಕ ನಿರ್ದೇಶಕ ಬಿ.ಎಸ್.ತಮ್ಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.