ADVERTISEMENT

ಬೀಟೆ, ಹೊನ್ನೆ ನಾಟಾ ವಶ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಮೇ 2017, 9:18 IST
Last Updated 21 ಮೇ 2017, 9:18 IST

ಶನಿವಾರಸಂತೆ: ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು ₹ 20 ಲಕ್ಷ ಮೌಲ್ಯದ ಬೀಟೆ ಮರದ 20 ಹಾಗೂ ಹೊನ್ನೆ ಮರದ 12 ನಾಟಾಗಳನ್ನು ನಾಲ್ಕು ವಾಹನ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದರು. ಈ ಸಂಬಂಧ ನಾಲ್ವರು ಆರೋಪಿ ಗಳನ್ನು ಅಧಿಕಾರಿಗಳು ಸಮೀಪದ ಹೆಬ್ಬುಲುಸೆ ಗ್ರಾಮದ ಬಳಿ ಶನಿವಾರ ಬಂಧಿಸಿದರು.

ಒಡೆಯನಪುರ ಗ್ರಾಮದ ಎಚ್.ವಿ. ತ್ಯಾಗರಾಜ್, ಶಿವರಳ್ಳಿಯ ಎಸ್.ಜಿ. ಪ್ರದೀಪ್, ಹೊಳೆನರಸೀಪುರದ ಎಚ್.ಎಂ.ಪ್ರಕಾಶ್, ಎ.ಬಿ.ರುದ್ರಸ್ವಾಮಿ ಬಂಧಿತರು. ಗೋಪಾಲಪುರದ ಚಿಮ್ಮಿ ತಲೆಮರೆಸಿಕೊಂಡಿದ್ದಾನೆ.

ಕೊಡ್ಲಿಪೇಟೆ ಹೋಬಳಿಯ ಶಿವರಳ್ಳಿ ಗ್ರಾಮದ ಪ್ರದೀಪ್ ಕಾಫಿತೋಟದಲ್ಲಿ ಬೆಳಗ್ಗಿನ ಜಾವ ಮರ ಕಡಿದು ಸಾಗಿಸುತ್ತಿದ್ದರು. ಮಾಹಿತಿ ಆಧರಿಸಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದರು. ಹೆಬ್ಬುಲುಸೆ ಗ್ರಾಮದ ವಾಹನ ಅಡ್ಡಗಟ್ಟಿದಾಗ ನಿಲ್ಲಿಸಲಿಲ್ಲ. ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದಾಗ ವಾಹನ ನಿಲ್ಲಿಸಿ ಪರಾರಿಗೆ ಮುಂದಾದರು.

ADVERTISEMENT

ಬೆನ್ನಟ್ಟಿದ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದು, ನಾಟಾ ತುಂಬಿದ್ದ 2 ವಾಹನ, ಬೆಂಗಾವಲಿನ 2 ವಾಹನ ಜಪ್ತಿ ಪಡೆಯಿತು. ಉಪ ಅರಣ್ಯಾಧಿಕಾರಿಗಳಾದ ಸುಕ್ಕೂರ್, ಗೋವಿಂದ್ ರಾಜ್, ಶ್ರೀನಿ ವಾಸ್, ಸಿಬ್ಬಂದಿ ನಾಗರಾಜ್, ಶೇಖರ್, ಕೃಷ್ಣಮೂರ್ತಿ, ಕೃಷ್ಣಪ್ಪ, ರಾಮಕೃಷ್ಣಶೆಟ್ಟಿ, ಶಿವರಾಜ್, ಪ್ರಕಾಶ್, ವಿಜೇಂದ್ರ ಕುಮಾರ್, ಬಿ.ರುಕ್ಮಯ್ಯ, ವೆಂಕಟೇಶ್, ಲೋಹಿತ್, ಕಾರ್ಯಪ್ಪ, ಹರೀಶ್ ಕುಮಾರ್ ಹಾಗೂ ಭರತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.