ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:35 IST
Last Updated 27 ಜನವರಿ 2017, 9:35 IST

ಮಡಿಕೇರಿ: ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಗುರುವಾರ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಹಿಂದೆಯೂ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಬೇಡಿಕೆ ಈಡೇರಿಲ್ಲ. ಇದೇ ಕಾರಣಕ್ಕೆ ಗಣರಾಜ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು ಎಂದು ಹೇಳಿದರು.

ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಮಾತ್ರ ಪ್ರತಿಮೆಯನ್ನು ಸ್ಥಾಪಿಸಿಲ್ಲ. ದಲಿತ ಸಂಘರ್ಷ ಸಮಿತಿಯ 24 ವರ್ಷಗಳ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ದಲಿತರ ಬೇಡಿಕೆಗಳನ್ನು ಈಡೇರಿಸದ ಸರ್ಕಾರ ಕಾರ್ಯಕ್ರಮಗಳನ್ನು ನಡೆಸಲು ಆಡಳಿತ ವ್ಯವಸ್ಥೆಗೆ ಯಾವುದೇ ನೈತಿಕತೆ ಇಲ್ಲ. ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಆಚರಣೆಗಳು ಅರ್ಥಹೀನ ಎಂದು ಅಭಿಪ್ರಾಯಪಟ್ಟರು.

ಅಲ್ಲದೇ ಜಿಲ್ಲೆಯಲ್ಲಿ ಕೆಲವು ಲೈನ್ ಮನೆಗಳಲ್ಲಿ ಜೀತಪದ್ಧತಿ ಇನ್ನೂ ಜೀವಂತವಾಗಿದ್ದು, ದಲಿತರನ್ನು ಜೀತದಿಂದ ಮುಕ್ತಿಗೊಳಿಸಬೇಕು. ಜೀತ ಮುಕ್ತಗೊಳಿಸುವಲ್ಲಿಯವರೆಗೆ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಸರ್ಕಾರ ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹ 5 ಕೋಟಿ ಮಂಜೂರು ಮಾಡಬೇಕು. ಭವನಕ್ಕಾಗಿ ಜಾಗವನ್ನು ಗುರುತಿಸಿ ಸರ್ಕಾರವೇ ಕಟ್ಟಡ ನಿರ್ಮಾಣ ಮಾಡಬೇಕು. ಆದ್ದರಿಂದ, ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಅಗತ್ಯವಿರುವಷ್ಟು ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ನಿವೇಶನ ಹಾಗೂ ವಸತಿ ರಹಿತರಿಗೆ ತಲಾ 3 ಎಕರೆ ಪೈಸಾರಿ ಜಾಗವನ್ನು ಮಂಜೂರು ಮಾಡಬೇಕು. ಶಿಕ್ಷಣದಿಂದ ವಂಚಿತರಾಗಿರುವ ದಲಿತ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಶಿಕ್ಷಣ ನೀಡಬೇಕು. ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ದಲಿತ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ಬಿಡುಗಡೆಗೊಳಿಸಿ ಶಿಕ್ಷಣ ನೀಡಬೇಕು ಎಂದರು.

ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎಚ್‌.ಎಲ್.ಕುಮಾರ್‌, ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್‌.ಎಲ್‌.ರವಿ, ಈರಪ್ಪ, ಕುಶಾಲನಗರ ಹೋಬಳಿ ಸಂಚಾಲಕ ಎಚ್.ಡಿ.ಚಂದ್ರು, ಮೂರ್ನಾಡು ಹೋಬಳಿ ಸಂಚಾಲಕ ದೀಪಕ್‌, ಸದಸ್ಯರಾದ ಪಾಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.