ADVERTISEMENT

‘ಮಡಿಕೇರಿ ದಸರಾ’ಕ್ಕೆ ಗುಂಡಿಗಳದ್ದೇ ಭಯ!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 8:34 IST
Last Updated 11 ಸೆಪ್ಟೆಂಬರ್ 2017, 8:34 IST
ಮಡಿಕೇರಿಯ ರಾಜಾಸೀಟ್ ರಸ್ತೆಯಲ್ಲಿ ಗುಂಡಿ ಬಿದ್ದಿರುವ ದೃಶ್ಯ
ಮಡಿಕೇರಿಯ ರಾಜಾಸೀಟ್ ರಸ್ತೆಯಲ್ಲಿ ಗುಂಡಿ ಬಿದ್ದಿರುವ ದೃಶ್ಯ   

ಮಡಿಕೇರಿ: ಕೆಲವೇ ದಿನಗಳಲ್ಲಿ ‘ಮಡಿಕೇರಿ ದಸರಾ’ ಆರಂಭಗೊಳ್ಳಲಿದ್ದು ರಸ್ತೆ ದುರಸ್ತಿ ಮಾತ್ರ ಇನ್ನೂ ಆಗಿಲ್ಲ. ಹೀಗಾಗಿ, ದಸರಾಕ್ಕೆ ಬರುವವರಿಗೆ ಗುಂಡಿಗಳು ಸ್ವಾಗತ ಕೋರಲಿವೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ದಸರಾ ಆರಂಭಕ್ಕೂ ಮುನ್ನವೇ ರಸ್ತೆಗಳು ದುರಸ್ತಿ ಆಗಬೇಕು ಎಂಬ ಚರ್ಚೆ ನಡೆದರೂ ಕಾರ್ಯರೂಪಕ್ಕೆ ಬಂದಿಲ್ಲ.

ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದರೂ ಕ್ಯಾರೇ ಅನ್ನುತ್ತಿಲ್ಲ ಆಡಳಿತ ಮಂಡಳಿ. ವಾಹನ ಸವಾರರು ಹಾಗೂ ದಾರಿಹೋಕರು ರಸ್ತೆ ದುಃಸ್ಥಿತಿ ಕಂಡು ಹಿಡಿಶಾಪ ಹಾಕುವಂತಾಗಿದೆ.

ನಗರದ ಮುಖ್ಯ ರಸ್ತೆಗಳಾದ ಜಿ.ಟಿ. ವೃತ್ತ, ಅಜ್ಜಮಾಡ ದೇವಯ್ಯ ವೃತ್ತದಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಇಷ್ಟೆ ಅಲ್ಲದೆ, ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣ, ಕಾನ್ವೆಂಟ್ ಜಂಕ್ಷನ್, ದೇಚೂರು ರಸ್ತೆ, ಕಾನ್ವೆಂಟ್‌ ರಸ್ತೆ, ಹೊಸ ಬಡಾವಣೆ, ರಾಜಾಸೀಟ್ ರಸ್ತೆ, ರಾಣಿಪೇಟೆ, ರೇಸ್ ಕೋರ್ಸ್ ರಸ್ತೆ, ಗಣಪತಿ ಬೀದಿಯ ರಸ್ತೆಗಳು ಹಾಳಾಗಿವೆ.

ADVERTISEMENT

ಬಹುತೇಕ ರಸ್ತೆಗಳಲ್ಲಿ ದಶಮಂಟಪಗಳು ಸಂಚರಿಸಲಿವೆ. ಅಷ್ಟು ಮಾತ್ರವಲ್ಲದೇ ದಸರಾ ವೇಳೆ ಜನದಟ್ಟಣೆ ಸಹ ಇರಲಿದೆ. ಹೀಗೆ ಬಿಟ್ಟರೆ ದಸರಾಕ್ಕೆ ಅಡ್ಡಿ ಉಂಟಾಗಲಿದೆ ಎಂದು ಸಾರ್ವಜನಿಕರು ಆಪಾದಿಸುತ್ತಾರೆ.

ಐತಿಹಾಸಿಕ ಮೈಸೂರು ದಸರಾ ಪ್ರಾರಂಭವಾಗುತ್ತಿದ್ದಂತೆಯೇ ಇತ್ತ ಮಡಿಕೇರಿಯ ದಸರಾಕ್ಕೂ ಚಾಲನೆ ದೊರೆಯಲಿದೆ. ನಗರದಲ್ಲಿ ಹತ್ತು ದಿನಗಳ ದಸರಾ ಉತ್ಸವ ಇರಲಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಹಾಗೂ ಮಂಟಪಗಳ ಶೋಭಾ ಯಾತ್ರೆ ಚಲಿಸುವುದರಿಂದ ಸಾಕಷ್ಟು ಪ್ರವಾಸಿಗರು ಹಾಗೂ ಸ್ಥಳೀಯರು ನಗರದಲ್ಲಿ ಹೆಚ್ಚಾಗಿ ಜಮಾಯಿಸುತ್ತಾರೆ. ಆದ್ದರಿಂದ, ರಸ್ತೆ ದುರಸ್ತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಟೊ ಚಾಲಕ ನವೀನ್‌ ಆಗ್ರಹಿಸುತ್ತಾರೆ.

ಕಳಪೆ ಕಾಮಗಾರಿ: ಕೆಲವು ದಿನಗಳ ಹಿಂದೆಯಷ್ಟೇ ರಸ್ತೆಗಳ ದುರಸ್ತಿ ಕಾರ್ಯ ಪ್ರಾರಂಭವಾಗಿದ್ದರೂ ಪೂರ್ಣ ಗೊಳಿಸುವಲ್ಲಿ ಸಾಧ್ಯವಾಗಿಲ್ಲ. ಪೂರ್ಣಗೊಂಡಿರುವ ಕಾಮಗಾರಿಯ ಗುಣಮಟ್ಟವೂ ಚೆನ್ನಾಗಿಲ್ಲ.

ದಶಮಂಟಪಗಳ ಚಾಲನೆಗೆ ಆತಂಕ: ದಸರಾದ ಕೊನೆಯ ದಿನ ವೈಭವಯುತ ದಶಮಂಟಪಗಳು ಮೆರವಣಿಗೆ ನಡೆಯಲಿದೆ. ದೊಡ್ಡ ಪ್ರಮಾಣದ ಗುಂಡಿಗಳೇ ಮುಖ್ಯ ರಸ್ತೆಯಲ್ಲಿ ಇರುವುದರಿಂದ ಮಂಟಪಗಳನ್ನು ಕೊಂಡೊಯ್ಯುವುದೇ ಸವಾಲಾಗಿದೆ ಎಂದು ಗಣಪತಿ ಬೀದಿ ನಿವಾಸಿ ಚಂದನ್‌ ರಾವ್‌ ಹೇಳುತ್ತಾರೆ.

ದಸರಾ ದಿನದಂದು ನಗರದ ಎಲ್ಲಾ ಭಾಗದಲ್ಲೂ ವಾಹನದಟ್ಟಣೆ ಇರಲಿದೆ. ಆದ್ದರಿಂದ, ಹದಗೆಟ್ಟಿರುವ ನಗರದ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಬೇಕು. ರಸ್ತೆಗಳ ದುರಸ್ತಿಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.