ADVERTISEMENT

ಮತ್ತೊಂದು ಚುನಾವಣೆಗೆ ಜಿಲ್ಲೆ ಸಜ್ಜು

8ರಂದು ನೈಋತ್ಯ ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 10:13 IST
Last Updated 2 ಜೂನ್ 2018, 10:13 IST

ಮಡಿಕೇರಿ: ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನವು ಜೂನ್ 8ರಂದು ನಡೆಯಲಿದ್ದು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಅಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ (ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಶಾಂತಳ್ಳಿ ಹೋಬಳಿ), ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಸೋಮವಾರ ಪೇಟೆ ತಾಲ್ಲೂಕಿನ ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ), ಮಡಿಕೇರಿ ನಗರಸಭೆ ಕಾವೇರಿ ಕಲಾ ಕ್ಷೇತ್ರ, ವಿರಾಜಪೇಟೆಯ ಪಟ್ಟಣ ಪಂಚಾಯಿತಿಗಳಲ್ಲಿ ತಲಾ ಎರಡು (ನೈಋತ್ಯ ಶಿಕ್ಷಕರ ಮತಗಟ್ಟೆ ಎಡಭಾಗ) ಮತ್ತು ಪದವೀಧರರ ಮತಗಟ್ಟೆ ಬಲಭಾಗ) ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ನೈಋತ್ಯ ಶಿಕ್ಷಕರ ಮತ್ತು ಪದವೀಧರ ಕೇತ್ರದ ವ್ಯಾಪ್ತಿಯಲ್ಲಿ ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳು ಒಳಪಟ್ಟಿವೆ. ಮತ ಎಣಿಕೆಯು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜೂನ್ 12ರಂದು ಬೆಳಿಗ್ಗೆ 8ರಿಂದ ಆರಂಭಗೊಳ್ಳಲಿದೆ ಎಂದು ವಿವರಿಸಿದರು.

ADVERTISEMENT

ಜಿಲ್ಲೆಯ 8 ಮತಗಟ್ಟೆಗಳಲ್ಲಿ ಪ್ರತಿ ಮತಗಟ್ಟೆಗೆ 4ರಂತೆ ಮತಗಟ್ಟೆ ಸಿಬ್ಬಂದಿಗಳನ್ನು ಮತ್ತು ಪ್ರತಿ ಮತಗಟ್ಟೆಗೆ ಒಬ್ಬರಂತೆ ಮೈಕ್ರೊ ವೀಕ್ಷಕರ ಹಾಗೂ ಒಬ್ಬರು ವಿಡಿಯೊಗ್ರಾಫರ್‌ನ್ನು ನೇಮಕ ಮಾಡಲಾಗಿದೆ. ನಾಲ್ಕು ಜೀಪು, ತಲಾ ಒಂದು ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 6 ವಾಹನ ನಿಯೋಜಿಸಲಾಗಿದೆ ಎಂದು ಶ್ರೀವಿದ್ಯಾ ಹೇಳಿದರು.

ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಒಟ್ಟು 8 ಜನ ಅಭ್ಯರ್ಥಿಗಳು ಹಾಗೂ ಶಿಕ್ಷಕರ ಕ್ಷೇತ್ರದಿಂದ ಒಟ್ಟು 12 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯಲ್ಲಿ ಒಟ್ಟು 1,633 ಮತದಾರರಿದ್ದಾರೆ. ಇವರಲ್ಲಿ 947 ಪುರುಷರು ಮತ್ತು 689 ಮಹಿಳಾ ಮತದಾರರಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 1,250 ಮತದಾರರಿದ್ದು, 583 ಪುರುಷರು ಮತ್ತು 667 ಮಹಿಳಾ ಮತದಾರರಿದ್ದಾರೆ ಎಂದು ಹೇಳಿದರು.

ಮತದಾನದ ದಿನದಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾರರ ಬಲಗೈನ ಮಧ್ಯದ ಬೆರಳಿಗೆ ಹಾಗೂ ಪದವೀಧರರ ಕ್ಷೇತ್ರಕ್ಕೆ ಬಲಗೈನ ತೋರು ಬೆರಳಿಗೆ ಶಾಯಿ ಹಾಕಲಾಗುವುದು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಬಗ್ಗೆ ಮತ್ತು ಭಾಗ ಸಂಖ್ಯೆ, ಕ್ರಮ ಸಂಖ್ಯೆಯ ಮಾಹಿತಿಯನ್ನು ಪಡೆದುಕೊಳ್ಳಲು ತಾಲ್ಲೂಕು ಕಚೇರಿಗಳಲ್ಲಿ ಮತದಾರರ ಮಾಹಿತಿ ಕೇಂದ್ರ ತೆರೆಯಲಾಗಿದೆ. ಮಾಹಿತಿಗೆ 08272 228396 ಸೋಮವಾರಪೇಟೆ ತಾಲ್ಲೂಕು ಕಚೇರಿ 08276 284044 ಮತ್ತು ವಿರಾಜಪೇಟೆ ತಾಲ್ಲೂಕು ಕಚೇರಿ 08274 257328ನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಪದವೀಧರ ಕ್ಷೇತ್ರದ ಅಭ್ಯರ್ಥಿಗಳು
1. ಅರುಣ್‌ ಕುಮಾರ್‌ (ಜೆಡಿಎಸ್‌)
2. ಆಯನೂರು ಮಂಜುನಾಥ್‌ (ಬಿಜೆಪಿ)
3. ಎಸ್‌.ಪಿ. ದಿನೇಶ್‌ (ಕಾಂಗ್ರೆಸ್‌)
4. ಜಿ.ಸಿ. ಪಟೇಲ್‌ (ಸರ್ವ ಜನತಾ ಪಾರ್ಟಿ)
5. ಜಫರುಲ್ಲಾ ಸತ್ತರ್‌ ಖಾನ್‌ (ಪಕ್ಷೇತರ)
6. ಜಿ.ಎಂ. ಜಯಕುಮಾರ್‌ (ಪಕ್ಷೇತರ)
7. ಬಿ.ಆರ್‌. ಪ್ರಭುಲಿಂಗ (ಪಕ್ಷೇತರ)
8. ಬಿ.ಕೆ. ಮಂಜುನಾಥ್‌ (ಪಕ್ಷೇತರ)

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳು

1. ಗಣೇಶ್‌ ಕಾರ್ಣಿಕ್‌ (ಬಿಜೆಪಿ)
2. ಎಸ್‌.ಎಲ್‌. ಭೋಜೇಗೌಡ (ಜೆಡಿಎಸ್‌)
3. ಕೆ.ಕೆ. ಮಂಜುನಾಥ್‌ ಕುಮಾರ್‌ (ಕಾಂಗ್ರೆಸ್‌)
4. ಡಾ.ಅರುಣ್‌ ಹೊಸಕೊಪ್ಪ (ಪಕ್ಷೇತರ)
5. ಅಲೋಶಿಯಸ್‌ ಡಿಸೋಜ (ಪಕ್ಷೇತರ)
6. ಕೆ.ಬಿ. ಚಂದ್ರೋಜಿರಾವ್‌ (ಪಕ್ಷೇತರ)
7. ಡಿ.ಕೆ. ತುಳಸಪ್ಪ (ಪಕ್ಷೇತರ)
8. ಅಂಪಾರು ನಿತ್ಯಾನಂದ ಶೆಟ್ಟಿ (ಪಕ್ಷೇತರ)
9. ಬಿ.ಆರ್‌. ಪ್ರಭುಲಿಂಗ (ಪಕ್ಷೇತರ)
10. ಕೆ.ಸಿ. ಬಸವರಾಜಪ್ಪ (ಪಕ್ಷೇತರ)
11. ಎಂ. ರಮೇಶ್‌ (ಪಕ್ಷೇತರ)

ಸರ್ಕಾರಿ ನೌಕರರು ಪ್ರಚಾರ ನಡೆಸುವಂತಿಲ್ಲ: ಡಿ.ಸಿ ಎಚ್ಚರಿಕೆ

ಸರ್ಕಾರಿ ನೌಕಕರು ಚುನಾವಣಾ ಪ್ರಚಾರದಲ್ಲಿ ತೊಡಗುವುದು ನಿಯಮ ಬಾಹಿರ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ, ಅನುದಾನಿತ ಕಾಲೇಜು ಉಪನ್ಯಾಸಕರು ಮತ್ತು ಶಾಲೆಗಳ ಶಿಕ್ಷಕರು ಯಾವುದೇ ಪ್ರತಿಸ್ಪರ್ಧಿ ಅಥವಾ ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದರೆ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಚುನಾವಣೆ ಸಂಬಂಧ ಅಧಿಕಾರಿಗಳ ನೇಮಕ: ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಫ್ಲೈಯಿಂಗ್ ಸ್ಕ್ವಾಡ್ ತಂಡವನ್ನು ನಿಯೋಜಿಸಲಾಗಿದೆ. ಟಿ.ಎನ್. ಜೀವನ್ ಕುಮಾರ್ (ಮಡಿಕೇರಿ ತಾಲ್ಲೂಕು ಗ್ರಾಮಾಂತರ), ಪಿ. ಲಕ್ಷ್ಮಿ (ಮಡಿಕೇರಿ ನಗರ), ಸುನಿಲ್ ಕುಮಾರ್ (ಸೋಮವಾರಪೇಟೆ ತಾಲ್ಲೂಕು ಗ್ರಾಮಾಂತರ), ಧರ್ಮರಾಜು (ಕುಶಾಲನಗರ ಪಟ್ಟಣ), ಜಯಣ್ಣ (ವಿರಾಜಪೇಟೆ ತಾಲ್ಲೂಕು ಗ್ರಾಮಾಂತರ), ಲಕ್ಷ್ಮಿಕಾಂತ್ (ವಿರಾಜಪೇಟೆ ನಗರ) ಅವರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.