ADVERTISEMENT

ಮನತಣಿಸಿದ ಸ್ವರ ಸಂಭ್ರಮ, ಸುಮಧುರ ಗಾನ

ಗೆಳೆಯರ ಬಳಗ ಸಾಂಸ್ಕೃತಿಕ ವೇದಿಕೆ ವತಿಯಿಂದ ಗಾಯನ, ನೃತ್ಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:46 IST
Last Updated 3 ಜನವರಿ 2017, 9:46 IST

ಶನಿವಾರಸಂತೆ: ಅದೊಂದು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತ ಸುಸಜ್ಜಿತ ಸಾಂಸ್ಕೃತಿಕ ವೇದಿಕೆ. ಅಲೆ ಅಲೆಯಾಗಿ ತೇಲಿ ಬರುತ್ತಿದ್ದ ಹಳೆಯ ಮಧುರವಾದ ಮಂಜುಳ ಗಾನ ಹಾಗೂ ಮನಸೆಳೆವ ನೃತ್ಯ ಕಾರ್ಯಕ್ರಮಗಳಿಂದ ಗಂಧರ್ವ ಲೋಕವೇ ಧರೆಗಿಳಿದಂತೆ ಭಾಸವಾಗುತ್ತಿತ್ತು.

ಅದು ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾತ್ರಿ ಕಂಡು ಬಂದ ದೃಶ್ಯ. ಗೆಳೆಯರ ಬಳಗ ಸಾಂಸ್ಕೃತಿಕ ವೇದಿಕೆ ವತಿಯಿಂದ ಸ್ವರ ಸಂಭ್ರಮ; ಸುಮಧುರ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿನಿಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಒಂದರ ಹಿಂದೊಂದರಂತೆ ಹಳೆಯ ಚಲನಚಿತ್ರ ಗೀತೆಗಳು, ಭಾವಗೀತೆಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಜಿಲ್ಲೆಯ ಅನು ಭವಿ, ಉದಯೋನ್ಮುಖ ಗಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗಾಯಕ ಕಿರಣ್ ಚಂದ್ರ ಶರಣು....ಶರಣು.... ಹೇ ಗಣಪ ಎಂದು ಹಾಡಿದರೆ, ಶಿಕ್ಷಕಿ ತೇಜಾವತಿ ದೇವರ ಆಟ... ಬಲ್ಲವರಾರು? ಎಂದು ಇಂಪಾಗಿ ಹಾಡಿ ಶ್ರೋತೃಗಳ ಮನಸೆಳೆದರು. ಗಾಯಕ ಶ್ರೀನಿವಾಸ್ ಚಂದಿರ ನಿಲ್ಲದ.... ಆ ಬಾನಿನಲ್ಲಿ ಎಂದು ಹಾಡುತ್ತಾ ವಿರಹ ವೇದನೆ ವ್ಯಕ್ತ ಪಡಿಸಿದರೇ ತನ್ವಿತ್ ಶೆಟ್ಟಿ, ಮೇರೆ ಸಪ್ನೊಂಕಿ ರಾಣಿ ಕಬ್ ಆಯೆಗೀತು.. ಎಂದು ಹಾಡಿ ರಂಜಿಸಿದರು.

ಸಂವೇದಿತಾ ಬಂದಾ ಬಂದಾ ಮೇಘರಾಜ.. ಎಂದು ಹಾಡಿ ಸಂಭ್ರಮಿಸಿ ದರೇ ಶಿಕ್ಷಕ ಎಂ.ಆರ್.ಶೇಖರ್ ನೂರೊಂದು ನೆನಪು ಎದೆಯಾಳದಿಂದ ಎಂದು ಹಾಡುತ್ತಾ ನೆನಪಿನ ಲೋಕಕ್ಕೆ ಸೆಳೆದರು. ಸಂತೋಷ್ ಪ್ರೇಮ ಲೋಕದ ಪಾರಿಜಾತವೇ ಎಂದು ಹಾಡಿ ಪ್ರೇಮಿಗಳ ಮನ ತಣಿಸಿದರು. ಗಾಯನ ಸ್ಪರ್ಧೆಯಲ್ಲಿ ಅರಕಲ ಗೂಡಿನ ವಿದ್ಯಾರ್ಥಿನಿ ದೀಪ್ತಿ ಪ್ರಥಮ ಸ್ಥಾನ, ಸೋಮವಾರಪೇಟೆಯ ಸಾಂದೀ ಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ದ್ವಿತೀಯ ಸ್ಥಾನ ಗಳಿಸಿದರು.

ಸಾಮೂಹಿಕ ನೃತ್ಯ ಸ್ಪರ್ಧೆಯಲ್ಲಿ ಶನಿವಾರಸಂತೆಯ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ, ಸೋಮವಾರಪೇಟೆ ಸಾಂದೀಪನಿ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಯರ ತಂಡ ದ್ವಿತೀಯ ಸ್ಥಾನ, ಶನಿವಾರಸಂತೆಯ ಡಾರ್ಜಿಲಿಂಗ್ ಸ್ಟಾರ್ ತಂಡ ತೃತೀಯ ಸ್ಥಾನ ಗಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ನಿವೃತ್ತ ಮುಖ್ಯಶಿಕ್ಷಕ ಎಂ.ಆರ್.ಮಲ್ಲೇಶ್,  ಮುಖ್ಯಶಿಕ್ಷಕಿ ಪದ್ಮಾವತಿ, ಶಿಕ್ಷಕರಾದ ಪರಮೇಶ್ವರಪ್ಪ, ಟಿ.ವಿ.ಜಯಸ್ವಾಮಿ, ದಿವಾಕರ್, ಕೆ.ಪಿ.ಜಯಕುಮಾರ್, ಎ.ಆರ್.ಕೃಷ್ಣ, ಎನ್.ಬಿ.ಶಿವಣ್ಣ, ಎಚ್.ಕೆ. ಜವರಯ್ಯ, ವಿಜಯಕುಮಾರ್, ದಿನೇಶ್, ಕುಮಾರ ಸ್ವಾಮಿ, ಮಂಜಪ್ಪ, ಸೇವಂತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.