ADVERTISEMENT

ಮುಂದುವರಿದ ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 5:49 IST
Last Updated 12 ಏಪ್ರಿಲ್ 2017, 5:49 IST

ಮಡಿಕೇರಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ವಿವಿಧೆಡೆ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಗುಡುಗು, ಮಿಂಚು, ಗಾಳಿಯ ಆರ್ಭಟ ಜೋರಾಗಿತ್ತು.ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ನಾಪೋಕ್ಲು, ಕಕ್ಕಬ್ಬೆ, ಚೆರಿಯಪರಂಬು, ನೆಲಜಿ, ಸುಂಟಿಕೊಪ್ಪ, ಭಾಗಮಂಡಲ, ತಲಕಾವೇರಿಯಲ್ಲಿ ಧಾರಾಕಾರ ಮಳೆ ಸುರಿದಿದೆ.

ಮಡಿಕೇರಿಯಲ್ಲಿ ಸೋಮವಾರ ರಾತ್ರಿಯೂ ಉತ್ತಮ ಮಳೆಯಾಗಿತ್ತು.  ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ತೋಟಗಳಿಗೆ ಜೀವಕಳೆ ಬಂದಿದೆ. ಕಾಫಿ ತೋಟಗಳಲ್ಲಿನ ಸಣ್ಣಪುಟ್ಟ ಕೆರೆ, ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗುತ್ತಿದೆ.

ರೈತರ ಹರ್ಷ

ADVERTISEMENT

ಸೋಮವಾರಪೇಟೆ: ಪಟ್ಟಣ ಹಾಗೂ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಿತು.ಕೆಲ ದಿನಗಳಿಂದ ಮೋಡಕವಿದು ಮಳೆ ಬರುವ ಮುನ್ಸೂಚನೆ ಇತ್ತು.ಮಳೆಗಾಗಿ ಪ್ರಾರ್ಥಿಸಿ ದೇವರಿಗೆ ಹರಕೆ ಹೊತ್ತು, ಪೂಜೆ ಸಲ್ಲಿಸಿದ್ದರು.ಇಂದು ಬೆಳಿಗಿನಿಂದ ಬಿಸಿಲಿನ ತಾಪ ಇತ್ತು. ಮಧ್ಯಾಹ್ನ ಮಳೆ ಸುರಿಯಲು ಆರಂಭಿಸಿದ್ದು, ಜನರಲ್ಲಿ ಹರ್ಷ ಉಂಟು ಮಾಡಿದೆ.

ಧಾರಾಕಾರ ಮಳೆ

ಕುಶಾಲನಗರ:  ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಗುಡುಗು, ಮಿಂಚು ಸಹಿತ  ಧಾರಾಕಾರವಾಗಿ ಸುರಿಯಿತು.ಮಂಗಳವಾರ ಸಂತೆ ದಿನ. ಮಳೆಯಿಂದಾಗಿ ವ್ಯಾಪಾರ ಅಸ್ತವ್ಯಸ್ಥಗೊಂಡಿತು. ವ್ಯಾಪಾರಿಗಳು ರಕ್ಷಣೆಗೆ ಪ್ಲಾಸ್ಟಿಕ್ ಹೊದಿಕೆಗಳ ಮೊರೆ ಹೋದರು.ಇನ್ನು ಕೆಲ ವ್ಯಾಪಾರಿಗಳು ಗುಡುಗು, ಮಿಂಚಿಗೆ ಹೆದರಿ ಅಕ್ಕಪಕ್ಕದ ಅಂಗಡಿಗಳಲ್ಲಿ ರಕ್ಷಣೆ ಪಡೆದರು.

ತರಕಾರಿ ಖರೀದಿಗೆ ಗ್ರಾಹಕರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಸಂಪೂರ್ಣ   ಕ್ಷೀಣಿಸಿತ್ತು.ಸಂಜೆ 4ಗಂಟೆಗೆ ಗುಡುಗು ಸಹಿತ ಆರಂಭಗೊಂಡ ಮಳೆ ಸತತ 2 ತಾಸು ಜೋರಾಗಿ ಬಿದ್ದಿತು. ನಂತರ ಮಳೆಯ ಆರ್ಭಟ ಕಡಿಮೆಯಾಯಿತು.ಮಳೆಯಿಂದ ಚರಂಡಿಯಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯಿತು. ರಸ್ತೆ ಮತ್ತು ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.ದಿಢೀರನೆ ಸುರಿದ ಮಳೆಗೆ ನಾಗರಿಕರು ಪರದಾಡುವಂತಾಯಿತು. ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.