ADVERTISEMENT

ಮೇಕೆ ಹಾಲು ಉತ್ಪನ್ನಗಳಿಗೂ ಮಾರುಕಟ್ಟೆ

ಮೇಕೆ ಸಾಕಣೆ ಘಟಕ ಸ್ಥಾಪನೆಗೆ ಸಚಿವ ಎ.ಮಂಜು ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 8:52 IST
Last Updated 18 ಫೆಬ್ರುವರಿ 2017, 8:52 IST
ಕುಶಾಲನಗರ: ‘ಮೇಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಕೆಎಂಎಫ್ ಮಾದರಿಯಲ್ಲೇ ಮಾರುಕಟ್ಟೆಯನ್ನೂ ರೂಪಿಸಲು ಚಿಂತನೆ ನಡೆಸಲಾಗಿದೆ’ ಎಂದು ಪಶು ಸಂಗೋಪನೆ ಸಚಿವ ಎ.ಮಂಜು ಶುಕ್ರವಾರ ಹೇಳಿದರು.
 
ಜಿಲ್ಲೆಯ ಕೂಡಿಗೆ ಗ್ರಾ.ಪಂ.ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿರುವ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
 
ನಂತರ ಕೂಡಿಗೆ ಜರ್ಸಿತಳಿ ಸಂವರ್ಧನಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದ ಎಲ್ಲ ಪಶು ಆಸ್ಪತ್ರೆಗಳನ್ನು ಮೇಲ್ದರ್ಜೇಗೇರಿಸಲು ಕ್ರಮ ಕೈಗೊಳ್ಳಲಾಗುವುದು ಅಲ್ಲದೆ 550 ಪಶು ವೈದ್ಯರನ್ನು ನೇರ ನೇಮಕಾತಿ ಮೂಲಕ ಒಂದು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಹೇಳಿದರು.
 
ಪ್ರಥಮ ಕೇಂದ್ರ: ರೈತರಿಗೆ ಮಾರ್ಗದರ್ಶನ ಮಾಡಲು ಬ್ಯಾಡಗೊಟ್ಟದಲ್ಲಿ ಹಾಲು ಉತ್ಪಾದಕ ಮೇಕೆ ಸಾಕಾಣಿಕಾ ಘಟಕವನ್ನು ರಾಜ್ಯದಲ್ಲಿ ಮೊದಲಿಗೆ ಸ್ಥಾಪಿಸುತ್ತಿದ್ದು, ಸರ್ಕಾರ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.
 
‘ಮೇಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ರೂಪಿಸಲಾಗುವುದು. ಮೇಕೆ ಹಾಲಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ರೈತರು ಆರ್ಥಿಕವಾಗಿ ಸಬಲರಾಗಬಹುದು’ ಎಂದರು.
 
ಮೇಕೆ ಸಾಕಣೆಯಿಂದ ಹಲವು ಪ್ರಯೋಜನಗಳಿವೆ. ಇದು, ಆರೋಗ್ಯಕ್ಕೆ ಪೂರಕ. ಅತ್ಯುತ್ತಮ ಔಷಧಿಯೂ ಹೌದು ಎಂದು ಸಚಿವರು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಸರ್ಕಾರದ ಯೋಜನೆಗಳು  ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ರೈತರು ಉಪ ಕಸುಬಾಗಿ ಮೇಕೆ ಸಾಕಣೆ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
 
ರೇಷ್ಮೆ ಮಾರಾಟ ಮಹಾಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಸೋಮವಾರಪೇಟೆ ತಾ.ಪಂ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಕೆ.ಆರ್.ಮಂಜುಳಾ, ಪೂರ್ಣಿಮಾ, ಗೋಪಾಲ್, ಸವಿತಾ, ತಾ.ಪಂ ಸದಸ್ಯೆ ಸಬಿತಾ ಚನ್ನಕೇಶವ, ಡಿ.ಎಸ್.ಗಣೇಶ್, ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯುಕ್ತ ಕೆ.ಎಸ್.ಶೇಖರ್, ಅಪರ ನಿರ್ದೇಶಕ ಡಾ.ಎಂ.ಟಿ.ಮಂಜುನಾಥ್, ಉಪ ನಿರ್ದೇಶಕ ಡಾ.ಸಿ.ನಾಗರಾಜು, ಕೂಡಿಗೆ ಜರ್ಸಿತಳಿ ಕ್ಷೇತ್ರದ ಉಪ ನಿರ್ದೇಶಕ ಡಾ.ಎಂ.ಸಿ.ಪದ್ಮನಾಭ, ಪಾಲಿ ಕ್ಲಿನಿಕ್‌ ವಿಭಾಗದ ಡಾ.ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.