ADVERTISEMENT

ರಾಜಕೀಯಕ್ಕೆ ಬಲಿಯಾದ ಅಭಿವೃದ್ಧಿ

ಗೋಣಿಕೊಪ್ಪಲು: ತಂಗುದಾಣವಿಲ್ಲದೆ ಪರದಾಡುತ್ತಿರುವ ಜನತೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:20 IST
Last Updated 22 ಮಾರ್ಚ್ 2017, 10:20 IST

ಗೋಣಿಕೊಪ್ಪಲು:  ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಬಸ್‌ ನಿಲ್ದಾಣದ ಕಟ್ಟಡ ಕುಸಿದು 3 ವರ್ಷ ಆಗಿದೆ. ಆದರೆ, 6 ತಿಂಗಳ ಒಳಗೆ ನೂತನ ಬಸ್‌ ನಿಲ್ದಾಣ ನಿರ್ಮಿಸುವುದಾಗಿ ಭರವಸೆಯನ್ನು ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರು ಮತ್ತು ಜನಪ್ರತಿನಿಧಿಗಳು  ಸಂಪೂರ್ಣ ಮರೆತಿದ್ದಾರೆ.

ಹೌದು, ಇದರಿಂದ ಪಟ್ಟಣಕ್ಕೆ ಬಂದು ಹೋಗುವ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಬಸ್‌ ನಿಲ್ದಾಣದ ಜತೆಗೆ ಮಲ, ಮೂತ್ರ ವಿಸರ್ಜನೆಗೆ  ಸೂಕ್ತ ಶೌಚಾಲಯವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶೀಟ್‌ನಿಂದ ತಾತ್ಕಾಲಿಕವಾಗಿ ನಿರ್ಮಿಸಿರುವ ಶೌಚಾಲಯದ ಒಳಗೆ ಅನಿವಾರ್ಯವಾದವರು ಮೂಗು ಮುಚ್ಚಿಕೊಂಡು ಹೋಗುತ್ತಿದ್ದಾರೆ.

ವೃದ್ಧರು, ಮಹಿಳೆಯರು  ನಿಲ್ಲಲು ಕೂರಲು ಸ್ಥಳವಿಲ್ಲದೆ ರಸ್ತೆ, ಅಂಗಡಿ ಮುಂಗಟ್ಟುಗಳ ಬದಿಯಲ್ಲಿ ನಿಂತು ಬಸ್‌ ಹತ್ತುವಂತಾಗಿದೆ. ಜನ ಪ್ರತಿನಿಧಿಗಳು  ಇದನ್ನು ನೋಡುತ್ತಿದ್ದರೂ ತಂಗುದಾಣ ನಿರ್ಮಿಸುವ ಕಡೆಗೆ ಗಮನಹರಿಸುತ್ತಿಲ್ಲ.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ  ಗ್ರೇಡ್‌1 ಸ್ಥಾನ ಪಡೆದುಕೊಂಡಿದೆ. ಸರ್ಕಾರದ ಅನುದಾನದ ಜತೆಗೆ ಪಟ್ಟಣದಲ್ಲಿರುವ ಮಾರುಕಟ್ಟೆ, ಹೊಟೇಲ್‌, ವ್ಯಾಪಾರ ಮಳಿಗೆಗಳಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಆದರೂ ಅಭಿವೃದ್ಧಿಯಲ್ಲಿ ಮಾತ್ರ ಕೊನೆಯ ಸ್ಥಾನದಲ್ಲಿದೆ. ಅದಕ್ಕೆ ಕಾರಣ  ರಾಜಕೀಯ ಮೇಲಾಟ.

ಗ್ರಾಮಗಳ ಅಭಿವೃದ್ಧಿ ಮತ್ತು ಸಾಮರಸ್ಯದ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪಕ್ಷಾತೀತವಾಗಿ ನಡೆಸಿದ್ದರೂ, ಆಯಾ ಪಕ್ಷದ ನಾಯಕರ ಮೇಲಾಟವೇ ಹೆಚ್ಚಾಗಿ ಇಲ್ಲಿನ ಜನತೆ ಅಭಿವೃದ್ಧಿ ಕಾಣದೆ ಬವಣೆ ಪಡುವಂತಾಗಿದೆ ಎನ್ನುತ್ತಾರೆ ಪಟ್ಟಣದ ಹಿರಿಯರಾದ ರಿವಿನ್‌ ಮಾದಪ್ಪ.

ಪಂಚಾಯಿತಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಸದಸ್ಯರ ನಡುವಿನ ನಿರಂತರ ಸಂಘರ್ಷದಿಂದಾಗಿ ಕಳೆದ 2  ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಪರಿಶಿಷ್ಟ  ಜಾತಿಗೆ ಸೇರಿದ ಮಹಿಳೆ ಅಧ್ಯಕ್ಷರಾಗಿದ್ದು ರಾಜಕೀಯ ಮುಖಂಡರ ಪ್ರತಿಷ್ಠೆಯಿಂದಾಗಿ ಅವರು ನೆಪ ಮಾತ್ರ ಅಧ್ಯಕ್ಷರನ್ನಾಗಿ ಮಾಡಿದಂತಿದೆ ಎಂದು ಜನತೆ ಬೇಸರ ವ್ಯಕ್ತಪಡಿಸುತ್ತಾರೆ.

ಪಟ್ಟಣದ ಚರಂಡಿಗಳು ಕೊಳೆತು ದುರ್ವಾಸನೆ ಬೀರುತ್ತಿವೆ. ಕಸದ ತ್ಯಾಜ್ಯ ಎಲ್ಲೆಂದರಲ್ಲಿ  ಸುರಿದಿದೆ. ಮಾರುಕಟ್ಟೆಯ ಬಳಿ ತ್ಯಾಜ್ಯ ಕರಗಿ ನಾರುತ್ತಿದೆ.
ಸರ್ಕಾರದ ಅನುದಾನ ಬಳಸಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಾಗ ಅಲ್ಲಿ  ಎರಡು ಪಕ್ಷಗಳ ಜನಪ್ರತಿನಿಧಿಗಳು ನುಸುಳಿ ಕಾಮಗಾರಿಗೆ ತಡೆಯಾಗಿದೆ.  ಇದರಿಂದ ಬೇಸತ್ತಿರುವ ಜನತೆ  ಇಲ್ಲಿನ ಗ್ರಾಮ ಪಂಚಾಯಿತಿಯನ್ನೇ ರದ್ದು ಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಶೌಚಾಲಯ ನಿರ್ಮಾಣ: ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ₹ 20ಲಕ್ಷ ಅನುದಾನ ಬಿಡುಗಡೆ ಯಾಗಿದೆ. ಇದರಲ್ಲಿ ಮಾರುಕಟ್ಟೆಯ ಬಳಿ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಸದ್ಯದಲ್ಲಿಯೇ ಕೈಗೊಳ್ಳಲಾಗುವುದು. ಸುಸಜ್ಜಿತ  ಬಸ್‌ ನಿಲ್ದಾಣ  ನಿರ್ಮಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಈ ಕಾರಣದಿಂದ ತಾತ್ಕಾಲಿಕ ತಂಗುದಾಣ ನಿರ್ಮಾಣ ಮುಂದೂಡಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.