ADVERTISEMENT

ರೇಸ್‌ ಕಾರು ಪಲ್ಟಿ: ಶಾಸಕರ ಪುತ್ರ ಪಾರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:34 IST
Last Updated 25 ಏಪ್ರಿಲ್ 2017, 5:34 IST
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ರೇಸ್‌ ಆರಂಭಗೊಂಡಾಗ ಮಣ್ಣಿನ ಟ್ರ್ಯಾಕ್‌ನಲ್ಲಿ ಕಾರು ಪಲ್ಟಿಯಾದ ದೃಶ್ಯ ಹಾಗೂ ಪಲ್ಟಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿರುವುದು
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ರೇಸ್‌ ಆರಂಭಗೊಂಡಾಗ ಮಣ್ಣಿನ ಟ್ರ್ಯಾಕ್‌ನಲ್ಲಿ ಕಾರು ಪಲ್ಟಿಯಾದ ದೃಶ್ಯ ಹಾಗೂ ಪಲ್ಟಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿರುವುದು   

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಕಾರ್ಮಾಡು ಗ್ರಾಮದ ಕಾವಾಡಿಯಲ್ಲಿ ಏಪ್ರಿಲ್‌ 22ರಂದು ಆಯೋಜಿಸಿದ್ದ ‘ಅಮ್ಮತ್ತಿ ರ‍್ಯಾಲಿ ಕ್ರಾಸ್‌’ನಲ್ಲಿ ಕಲಬುರ್ಗಿ ಜಿಲ್ಲೆ, ಅಫ್ಜಲ್‌ಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್‌ ಪುತ್ರ ರಿತೇಶ್‌ ಗುತ್ತೇದಾರ್‌ ಚಲಾಯಿಸುತ್ತಿದ್ದ ರೇಸ್‌ ಕಾರು ಪಲ್ಟಿಯಾಗಿ ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಡರ್ಟ್‌ ರ‍್ಯಾಲಿಗೆ ರಾಷ್ಟ್ರಮಟ್ಟದ ರ‍್ಯಾಲಿ ಟ್ರ್ಯಾಕ್‌ನಂತೆಯೇ ಮಣ್ಣಿನ ಟ್ರ್ಯಾಕ್‌ ನಿರ್ಮಾಣ ಮಾಡಲಾಗಿತ್ತು. ವಿವಿಧ ವಿಭಾಗಗಳಲ್ಲಿ ನಡೆದ ರ‍್ಯಾಲಿ ಯಲ್ಲಿ ತಮಿಳುನಾಡು, ಕೇರಳ ಹಾಗೂ ರಾಜ್ಯದ   ವಿವಿಧೆಡೆಯ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ರ‍್ಯಾಲಿ ಆರಂಭವಾದ ಕೆಲವೇ ನಿಮಿಷಗಳಲ್ಲಿ ರಿತೇಶ್‌ ಅವರ ಕಾರು ನಿಯಂತ್ರಣ ತಪ್ಪಿ, ನಾಲ್ಕೈದು ಪಲ್ಟಿಯಾಗಿ ಗದ್ದೆಗೆ ಉರುಳಿದೆ. ಹೆಲ್ಮೆಟ್‌ ಧರಿಸಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ರೇಸ್‌ ವೀಕ್ಷಿಸುತ್ತಿದ್ದ ಜನರ ಅಕ್ಕಪಕ್ಕವೇ ಕಾರು ಉರುಳಿದೆ. ಯಾರಿಗೂ ಅಪಾಯ ಸಂಭವಿಸಿಲ್ಲ. ಶಾಸಕರ ಪುತ್ರ ರ‍್ಯಾಲಿ ಯಲ್ಲಿ ಪಾಲ್ಗೊಂಡಿದ್ದ ಮಾಹಿತಿ ತಡವಾಗಿ ಸೋಮವಾರ ಬೆಳಕಿಗೆ ಬಂದಿದೆ.

ADVERTISEMENT

‘ರೇಸ್‌ಗಾಗಿ ಕಾರನ್ನು ಮರು ವಿನ್ಯಾಸ ಮಾಡಲಾಗಿತ್ತು. ನಿಗದಿತ ಅವಧಿಯೊಳಗೆ ಗುರಿ ತಲುಪಲು ವೇಗವಾಗಿ ಕಾರು ಓಡಿಸುತ್ತಿದ್ದೆ. ಮಣ್ಣಿನ ಟ್ರ್‍ಯಾಕ್‌ನಲ್ಲಿ ನಿಯಂತ್ರಣ ತಪ್ಪಿತು. ಅದೃಷ್ಟ ಚೆನ್ನಾಗಿದ್ದರಿಂದ ಅಪಾಯ ಸಂಭವಿಸಲಿಲ್ಲ. ಈ ಹಿಂದೆಯೂ ಕೇರಳದಲ್ಲಿ ನಡೆದಿದ್ದ ರ‍್ಯಾಲಿ ಯಲ್ಲಿ ನನ್ನ ಕಾರು ಪಲ್ಟಿಯಾಗಿತ್ತು’ ಎಂದು ರಿತೇಶ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.