ADVERTISEMENT

ರೈತರಿಗೆ ರೂ 10 ಸಾವಿರ ಕೋಟಿ ಬೆಳೆಸಾಲ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 5:48 IST
Last Updated 22 ಸೆಪ್ಟೆಂಬರ್ 2014, 5:48 IST

ಸೋಮವಾರಪೇಟೆ: ರಾಜ್ಯದ ರೈತರಿಗೆ ಪ್ರಸಕ್ತ ಸಾಲಿನಲ್ಲಿ ರೂ 10 ಸಾವಿರ ಕೋಟಿ ಬೆಳೆ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಸೋಮವಾರಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ 10 ಲಕ್ಷ ರೈತರಿಗೆ ಈಗಾಗಲೇ ರೂ 5 ಸಾವಿರ ಕೋಟಿ ಸಾಲ ವಿತರಿಸಿದ್ದು, ಉಳಿದ ರೂ 5 ಸಾವಿರ ಕೋಟಿ ಸಾಲವನ್ನು ಮುಂದಿನ ಮಾರ್ಚ್‌ ಅಥವಾ ಏಪ್ರಿಲ್ ತಿಂಗಳ ಒಳಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ನಿರ್ಧಾರಗಳನ್ನು ತಿದ್ದುಪಡಿಯ ಮೂಲಕ ಕೈಗೊಳ್ಳಲು ಸರ್ಕಾರ ಸಿದ್ಧವಿದೆ. ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಇಲ್ಲಿಯವರೆಗೆ ಗ್ರಾಮೀಣ ಭಾಗದ ರೈತರಿಗೆ ಮಾತ್ರ ಉಪಯೋಗವಾಗುತ್ತಿತ್ತು. ಪ್ರಸಕ್ತ ವರ್ಷ ಸರ್ಕಾರ ಈ ಯೋಜನೆ ಸೌಲಭ್ಯವನ್ನು ಪಟ್ಟಣ ವ್ಯಾಪ್ತಿಯ ಸಹಕಾರಿ ಸಂಘಗಳಿಗೂ ವಿಸ್ತರಿಸಿದೆ. ಇದರಿಂದಾಗಿ 36 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಈ ಹಿಂದೆ 72 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ವಿಮೆಯ ಪ್ರಯೋಜನ ದೊರಕುತ್ತಿರಲಿಲ್ಲ. ಸಹಕಾರ ಸಂಘದ ಸದಸ್ಯರಾಗಿ 6 ತಿಂಗಳ ಅವಧಿವರೆಗೆ ಕಾಯಬೇಕಾಗಿತ್ತು. ಆದರೆ, ಈಗಿನ ಸರ್ಕಾರ ನೋಂದಣಿಯಾದ ಕೂಡಲೇ ಯೋಜನೆಯ ಪ್ರಯೋಜನ ಪಡೆಯುವ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಬ್ಯಾಂಕಿನ ಕೌಂಟರ್ ವಿಭಾಗವನ್ನು ಉದ್ಘಾಟಿಸಿ ಮತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ. ನಾಣಯ್ಯ, ಸಹಕಾರ ಸಂಸ್ಥೆಗಳು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದ್ದರೆ ಮಾತ್ರ ಅಂತಹ ಸಹಕಾರ ಸಂಸ್ಥೆಗಳಿಗೆ ಭವಿಷ್ಯವಿದೆ ಎಂದು ಹೇಳಿದರು.
ಸಹಕಾರ ಸಂಘಗಳಲ್ಲಿ ಪ್ರಾಮಾಣಿಕರು ಮತ್ತು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವ ಮನೋಭಾವನೆ ಹೊಂದಿರುವವರು ಮಾತ್ರ ಇರಬೇಕು. ಭ್ರಷ್ಟರಿಗೆ ಸಹಕಾರ ಕ್ಷೇತ್ರದಲ್ಲಿ ಅವಕಾಶ ನೀಡಬಾರದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್‌ ವಹಿಸಿದ್ದರು. ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಶಿವಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾ ನಿರ್ವಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ವಿದಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳೀರ ಎಸ್. ಪೂವಯ್ಯ, ಸಹಕಾರ ಸಂಘಗಳ ಉಪ ನಿಬಂಧಕಾರ ವಿಜಯಕುಮಾರ್, ಕೇಂದ್ರ ಸಹಕಾರ ಬ್ಯಾಂಕಿನ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.