ADVERTISEMENT

ಸದೃಢ ಸಮಾಜಕ್ಕೆ ಮೌಲ್ಯಯುತ ಶಿಕ್ಷಣ ಅಗತ್ಯ

ಡಿ.ಚನ್ನಮ್ಮ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:51 IST
Last Updated 5 ಜನವರಿ 2017, 9:51 IST

ಸೋಮವಾರಪೇಟೆ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿದಾಗ ಮಾತ್ರ ಸದೃಢ ಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಬೆಂಗಳೂರು ಗಾಂಧಿ ಭವನದ ಕಾರ್ಯದರ್ಶಿ ಪ್ರೊ. ಜಿ.ಬಿ ಶಿವರಾಜು ಹೇಳಿದರು.

ಇಲ್ಲಿಗೆ ಸಮೀಪದ ಮಾದಾಪುರ ಡಿ.ಚನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪೋಷಕರು ಮತ್ತು ಶಿಕ್ಷಕರು ಮುಂದಾಗುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಮಕ್ಕಳು ವಿದ್ಯಾರ್ಜನೆಯ ಸಮಯದಲ್ಲಿ ಟಿವಿ ವೀಕ್ಷಣೆ, ಮೊಬೈಲ್‌ ನಂತಹ ಸಂಪರ್ಕ ಸಾಧನಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ. ಚನ್ನಮ್ಮ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ಶಿಕ್ಷಣದೊಂದಿಗೆ ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಯೋಗಾಭ್ಯಾಸ ದೊಂದಿಗೆ ಪರಿಸರ ಕಾಳಜಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು.  ಜೀವನದಲ್ಲಿ ಶಿಸ್ತು ಮತ್ತು ನಿರ್ದಿಷ್ಟ ಗುರಿ ಯೊಂದಿಗೆ ಮುಂದುವರಿದಲ್ಲಿ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಚಿತ್ರ ಸುಬ್ಬಯ್ಯ, ಸೀತಾ ಚಿಟ್ಟಿಯಪ್ಪ, ಪಿ.ಎನ್.ಮೋಹನ್, ಕೆ.ಎಸ್.ಮಂಜುನಾಥ್, ಪ್ರಾಂಶುಪಾಲ ಮಂದಪ್ಪ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರೇವತಿ, ಉಪನ್ಯಾಸಕ ರಾದ  ಸವಿತಾ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಎನ್.ಸಿ.ಸಿ. ವಿದ್ಯಾರ್ಥಿಗಳಿಂದ  ಅಂಗಸಾಧನೆ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.