ADVERTISEMENT

ಸಮಸ್ಯೆ ಪರಿಹಾರಕ್ಕಾಗಿ ಪ್ರತ್ಯೇಕ ಪ್ರತಿಭಟನೆ

ಕಾಲೇಜು ಸಮಯ ಬದಲಾವಣೆಗೆ ವಿದ್ಯಾರ್ಥಿಗಳ ವಿರೋಧ *ಹೊರಗುತ್ತಿಗೆ ಪದ್ಧತಿಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:11 IST
Last Updated 18 ಜುಲೈ 2017, 7:11 IST

ಮಡಿಕೇರಿ: ಕಾಲೇಜುಗಳ ಸಮಯ ಬದಲಾವಣೆ ಮಾಡಿರುವುದನ್ನು ಖಂಡಿಸಿ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಬೆಳಿಗ್ಗೆ 8ಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಘೋಷಣೆ ಕೂಗಿದರು.

ಕೊಡಗು ಜಿಲ್ಲೆಯು, ಗುಡ್ಡಬೆಟ್ಟಗಳಿಂದ ಆವೃತ್ತವಾದ ಪ್ರದೇಶ. ಕೆಲವು ಹಳ್ಳಿಗಳಿಗೆ ಬಸ್‌ ಸೌಕರ್ಯವೂ ಇರುವುದಿಲ್ಲ. ನಡೆದುಕೊಂಡು ಬರುವ ಸ್ಥಿತಿಯಿದೆ. ಮೊದಲಿನ ಸಮಯವೇ ಸರಿಯಿತ್ತು. ಅದೇ ಸಮಯಕ್ಕೆ ತರಗತಿಗಳು ಆರಂಭವಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಕುಗ್ರಾಮಗಳಾದ ಸೂರ್ಲಬಿ, ಬೆಟ್ಟತ್ತೂರು, ದಬ್ಬಡ್ಕ, ಭಾಗಮಂಡಲ, ಮದೆನಾಡು, ಚೆಟ್ಟಳ್ಳಿ, ಸಿದ್ದಾಪುರ ಭಾಗಗಳಿಂದ ನಗರಕ್ಕೆ ಬರುವುದು ಕಷ್ಟ. ಗ್ರಾಮೀಣ ಪ್ರದೇಶಕ್ಕೆ ಬಸ್‌ ಸೇವೆ ಆರಂಭಗೊಳ್ಳುವುದೇ 8ಕ್ಕೆ. ಇಂಥ ಸ್ಥಿತಿ ಇರುವಾಗ ಕಾಲೇಜಿಗೆ ಬರಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

ಸಿದ್ದಾಪುರ, ಚೆಟ್ಟಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ವಿಪರೀತವಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು 5ರಿಂದ 6 ಕಿ.ಮೀ ನಡೆದುಕೊಂಡು ಬರಬೇಕಿದೆ. ಕಾಲೇಜು ಶಿಕ್ಷಣ ಮಂಡಳಿಯು ಹೊಸ ಆದೇಶವನ್ನು ಕೈಬಿಡಬೇಕು. ಒಂದು ವೇಳೆ ಆದೇಶ ಹಿಂಪಡೆಯದಿದ್ದರೆ ತರಗತಿಯನ್ನು ಬಹಿಷ್ಕರಿಸಿ ಹೋರಾಟದ ಹಾದಿಯನ್ನು ಹಿಡಿಯಲಾಗುವುದು  ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ವೇಣು, ಸುಮಂತ್, ರೇಣುಕಾ, ಸೋಮಲ್‌ ವಹಿಸಿದ್ದರು.

**

ಜಿಲ್ಲಾಡಳಿತದ ವಿರುದ್ಧ  ಆಕ್ರೋಶ

ಮಡಿಕೇರಿ: ಕುಶಾಲನಗರ ಸಮೀಪದ ಪ್ರವಾಸಿ ತಾಣ ದುಬಾರೆಯಲ್ಲಿ ರಿವರ್ ರ್‍ಯಾಫ್ಟಿಂಗ್‌ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲು ನಿರ್ಧರಿಸಿರುವ ಜಿಲ್ಲಾಡಳಿತದ ಕ್ರಮ ಖಂಡಿಸಿ, ‘ದುಬಾರೆ ರ್‍ಯಾಫ್ಟಿಂಗ್‌ ಅಸೋಸಿಯೇಷನ್’ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ಜಿಲ್ಲಾಡಳಿತ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ನಮ್ಮ ಬದುಕಿನ ಮೇಲೆ ಪರಿಣಾಮ ಬೀರಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ರ್‍ಯಾಫ್ಟಿಂಗ್‌ ಅಸೋಸಿಯೇಷನ್ ಅಧ್ಯಕ್ಷ ದಾಮೋಧರ್‌ ಮಾತನಾಡಿ, ‘ಬಹಳ ವರ್ಷಗಳ ಹಿಂದೆ ರ್‍ಯಾಫ್ಟಿಂಗ್‌ ಕ್ರೀಡೆಯನ್ನು ಗ್ರಾಮಸ್ಥರೇ ಆರಂಭಿಸಿದ್ದರು. ಈಗ ಜಿಲ್ಲಾಡಳಿತಕ್ಕೆ ಅದರ ಮೇಲೆ ಕಣ್ಣು ಬಿದ್ದಿದೆ. ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಆದೇಶದಂತೆ ಹೊರಗುತ್ತಿಗೆಗೆ ನೀಡಲು ನಿರ್ಧರಿಸಿ ಪ್ರಕಟಣೆ ಹೊರಡಿಸಲಾಗಿದೆ. ಇದರಿಂದ ವೃತ್ತಿ ನಿರತರಿಗೆ ಆತಂಕದ ಸ್ಥಿತಿ ಎದುರಾಗಿದೆ. 60ಕ್ಕೂ ಹೆಚ್ಚು ಕಾರ್ಮಿಕರು ರ್‍ಯಾಫ್ಟಿಂಗ್‌ ಅನ್ನೇ ಆಶ್ರಯಿಸಿದ್ದಾರೆ. ಜಿಲ್ಲಾಡಳಿತದ ನಿರ್ಧಾರದಿಂದ ಬಂಡವಾಳಶಾಹಿಗಳಿಗೆ ಅನುಕೂಲವಾಗಿದೆ’ ಎಂದು ಎಂದು ಆರೋಪಿಸಿದರು.

ದುಬಾರೆಯಲ್ಲಿ ನಡೆಯುತ್ತಿರುವ ರ್‍ಯಾಫ್ಟಿಂಗ್‌ ಅನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಎಂದು ದಾಮೋದರ್‌ ಒತ್ತಾಯಿಸಿದರು. 

ಉಪಾಧ್ಯಕ್ಷ ವಿಶ್ವ ಮಾತನಾಡಿ, ‘ವಿರೋಧವಿದ್ದರೂ ಪ್ರತಿವರ್ಷ ಟೆಂಡರ್ ಕರೆಯುವ ಪ್ರಕ್ರಿಯೆಯನ್ನು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮಾಡುತ್ತಿದೆ. ಜಿಲ್ಲಾಡಳಿತದ ಈ ನಿರ್ಧಾರದಿಂದ 150 ಕುಟುಂಬಗಳು ಬೀದಿ ಪಾಲಾಗಲಿವೆ. ಏಕಾಏಕಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸದಸ್ಯರಾದ ಚೇತನ್, ಶಿವರಾಂ, ವಿಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.