ADVERTISEMENT

ಸಾಮೂಹಿಕ ರಾಜೀನಾಮೆಗೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 29 ಮೇ 2017, 7:32 IST
Last Updated 29 ಮೇ 2017, 7:32 IST

ಮಡಿಕೇರಿ: ಕಾಂಗ್ರೆಸ್‌ ಮುಖಂಡರು ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗ ಅಸಮಾಧಾನ ವ್ಯಕ್ತ ಪಡಿಸಿದ್ದು, ಭಿನ್ನಾಭಿಪ್ರಾಯ ಸರಿಪಡಿಸ ದಿದ್ದರೆ ಸಾಮೂಹಿಕ ರಾಜೀನಾಮೆ ನೀಡಿ ಪಕ್ಷದಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸಿದರು.

ನಗರದ ವಿವಿದ್ಧೋದ್ದೇಶ ವಾಣಿಜ್ಯ ಸಹಕಾರ ಸಂಘಗಳ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಡಿಕೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ. ಗಣೇಶ್‌ ಮಾತನಾಡಿ, ‘ಪಕ್ಷದ ನಡೆಯ ಬಗ್ಗೆ ಬಹಳಷ್ಟು ಕಾರ್ಯಕರ್ತರಿಗೆ ಅಸಮಾಧಾನವಿದೆ. ಯಾವುದೇ ಸಮಸ್ಯೆಗೂ ನಾಯಕರು ಸ್ಪಂದಿಸುತ್ತಿಲ್ಲ. ಚುನಾವಣೆಯ ವೇಳೆ ಮಾತ್ರ ಕಾರ್ಯಕರ್ತರ ಸಭೆ ಕರೆದು ಸಮಸ್ಯೆ ಆಲಿಸಲಾಗುತ್ತದೆ’ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

‘ಮೂವತ್ತು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವೆ. ನನಗೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅವಶ್ಯಕತೆಯೂ ಇಲ್ಲ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅವಶ್ಯಕತೆಯೂ ಇಲ್ಲ. ಪ್ರತಿ ಕಾರ್ಯಕರ್ತನ ಸಮಸ್ಯೆ ಆಲಿಸಬೇಕು. ಆದರೆ, ಜಿಲ್ಲಾ ಘಟಕದಲ್ಲಿ ಈ ಕೆಲಸ ನಡೆಯುತ್ತಿಲ್ಲ. ಕಾರ್ಯಕರ್ತರೇ ಇರಲಿ, ನಾಯಕರೇ ಇರಲಿ. ಒಬ್ಬರಿಗೆ ಒಂದೇ ಹುದ್ದೆ ಇರಬೇಕು. ಎಲ್ಲವೂ ನಾಯಕರ ಕೈಯಲ್ಲೇ ಕೇಂದ್ರೀಕೃತ ವಾದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು’ ಎಂದು ಪ್ರಶ್ನಿಸಿದರು.

ADVERTISEMENT

ಮುಖಂಡ ನೆರವಂಡ ಲೋಕೇಶ್‌ ಮಾತನಾಡಿ, ‘18 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವೆ. ಪಕ್ಷದ ಸಂಘಟನೆಗೆ ಸಾಕಷ್ಟು ನೋವುಗಳನ್ನು ಅನುಭವಿಸಿರುವೆ. ಚುನಾವಣೆ ಸಮೀಪಿಸುತ್ತಿದ್ದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಹೇಗೆ ಚುನಾವಣೆ ಎದುರಿಸಲು ಸಾಧ್ಯ’ ಎಂದು ಹೇಳಿದರು.

ಕಾರ್ಯಕರ್ತ ಪ್ಯಾಟ್ರಿಕ್‌ ಲೋಬೋ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ನೆನಪಾಗುತ್ತೇವೆ. ನಾವೇನು ದಿನಗೂಲಿ ನೌಕರರೇ’ ಎಂದು ಅಸಮಾಧಾನ ಹೊರಹಾಕಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಸ್ಮಾನ್‌, ‘ಟಿಪ್ಪು ಜಯಂತಿ ಮಾಡಿ ಎಂದು ನಾವೇನು ಆಗ್ರಹಿಸಿರಲಿಲ್ಲ. ಜಿಲ್ಲಾಡಳಿತದ ವೈಫಲ್ಯದ ನಡುವೆ ಟಿಪ್ಪು ಜಯಂತಿ ಆಚರಣೆ ಮಾಡಿ, ಕೆಲವರ ಮೇಲೆ ಪ್ರಕರಣ ದಾಖಲು ಮಾಡಲಾಯಿತು. ಅಮಾಯಕರ ಮೇಲೆ ದಾಖಲಿಸಿರುವ ಮೊಕದ್ದಮೆ ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

ಮುಖಂಡ ನೆರವಂಡ ಉಮೇಶ್‌, ಟಿಪ್ಪು ಜಯಂತಿ ಆಚರಿಸಿ ಗಲಭೆಯಾದರೆ ಅದರ ಲಾಭವನ್ನು ಬಿಜೆಪಿ ಪಡೆದು ಕೊಳ್ಳುತ್ತದೆ’ ಎಂದು ಎಚ್ಚರಿಸಿದರು. ಮಡಿಕೇರಿ ನಗರ ಘಟಕದ ಅಧ್ಯಕ್ಷ ಕೆ.ಯು. ಅಬ್ದುಲ್‌ ರಜಾಕ್‌ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾದರೆ, ಕಾರ್ಯಕರ್ತರು ಯಾರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸುವುದು’ ಎಂದು ಪ್ರಶ್ನಿಸಿದರು.

‘ಇದೇ 30ರಂದು ಸೋಮವಾರ ಪೇಟೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ನಡೆಯುತ್ತಿದ್ದು, ಪಕ್ಷದಲ್ಲಿ ನಡೆಯು ತ್ತಿರುವ ಎಲ್ಲ ಗೊಂದಲದ ವಿದ್ಯಮಾನ ಗಳ ಬಗ್ಗೆ ಚರ್ಚಿಸೋಣ’ ಎಂದು ಸೋಮವಾರಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎಂ.ಲೋಕೇಶ್‌ ಹೇಳಿದರು. ಮುಖಂಡರ ವರ್ತನೆ ಇದೇ ರೀತಿ ಮುಂದುವರಿದರೆ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಕಾನಹಿತ್ಲು ಮೊಣ್ಣಪ್ಪ, ಮಡಿಕೇರಿ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಮಂಜುಳಾ, ಹಿಂದುಳಿದ ಘಟಕದ ಅಧ್ಯಕ್ಷ ಸುಂದರ, ಎಂ.ಎ. ಉಸ್ಮಾನ್‌, ಎಂ.ಎಂ. ಹನೀಫ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಅಪ್ಪು ರವೀಂದ್ರ ಜುಲೇಕಾಬಿ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.