ADVERTISEMENT

ಸ್ವ ಉದ್ಯೋಗ ಕೈಗೊಳ್ಳಿ; ಯುವಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:39 IST
Last Updated 9 ನವೆಂಬರ್ 2017, 8:39 IST

ಕುಶಾಲನಗರ: ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ– ಯುವತಿಯರು ಗುಡಿ ಹಾಗೂ ಸಣ್ಣ ಕೈಗಾರಿಕೆಯಂತಹ ಸ್ವ ಉದ್ಯೋಗವನ್ನು ಕೈಗೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಜನಾರ್ದನ್ ಸಲಹೆ ನೀಡಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ಕೈಗಾರಿಕಾ ವಿಭಾಗ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಮಂಗಳವಾರ ಗುಡ್ಡೆಹೊಸೂರು ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಒಂದು ದಿನದ ಕೈಗಾರಿಕಾ ವಸ್ತುಪ್ರದರ್ಶನ ಮತ್ತು ಉದ್ಯಮಶೀಲತಾ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಂತ ಬಂಡವಾಳದಿಂದ ಕೈಗಾರಿಕೆಗಳನ್ನು ಆರಂಭಿಸಿ ದೇಶದಲ್ಲಿರುವ ಬಡತನ ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಬೀರ್ ಪಾಷ ಮಾತನಾಡಿ, ಗುಡಿ ಹಾಗೂ ಸಣ್ಣ ಕೈಗಾರಿಕೆಗಳು ತಯಾರಿಸಿದ ಉತ್ಪನ್ನಗಳನ್ನು ಜನಪ್ರಿಯಗೊಳಿಸಿ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣಮಟ್ಟದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ. ಸದಸ್ಯರಾದ ಶಶಿ ಭೀಮಯ್ಯ, ಕವಿತಾ, ಸಿ.ಕೆ.ಪಾರ್ವತಿ, ನಾರಾಯಣ, ಕಾವೇರಪ್ಪ, ಸಂತೋಷ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಮ್ ಉಪಸ್ಥಿತರಿದ್ದರು.
ಸಣ್ಣ ಹಾಗೂ ಗುಡಿ ಕೈಗಾರಿಕೆಗಳ ಉತ್ಪನ್ನಗಳು ಹಾಗೂ ವಿವಿಧ ಮಹಿಳಾ ಸಂಘ ಹಾಗೂ ಸ್ತ್ರೀ ಶಕ್ತಿ ಗುಂಪುಗಳು ಸಿದ್ಧಪಡಿಸಿದ ವಿವಿಧ ಬಗೆಯ ಉಡುಪುಗಳು ಹಾಗೂ ಗೃಹಾಲಂಕಾರಿಕ ವಸ್ತುಗಳು ಆಕರ್ಷಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.