ADVERTISEMENT

‘ಬರಪೀಡಿತ ಪ್ರದೇಶ’ ಘೋಷಣೆಗೆ ಆಗ್ರಹ

ಕೊಡಗು ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಎಂ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 8:28 IST
Last Updated 30 ಏಪ್ರಿಲ್ 2016, 8:28 IST

ಮಡಿಕೇರಿ: ಕೊಡಗು ಜಿಲ್ಲೆಯನ್ನು ‘ಬರ ಪೀಡಿತ ಪ್ರದೇಶ’ವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಭಾರತ ಕಮ್ಯುನಿಸ್ಟ್‌ ಪಕ್ಷ(ಮಾರ್ಕ್ಸ್‌ವಾದಿ)ದ ಸದಸ್ಯರು ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಮಳೆಯಿಲ್ಲದೇ ಕಾಫಿ, ಕರಿಮೆಣಸು ಬೆಳೆಗಳು ಒಣಗುವ ಸ್ಥಿತಿಗೆ ತಲುಪಿವೆ. ನದಿ ಹಾಗೂ ಕೆರೆಗಳಲ್ಲೂ ನೀರಿಲ್ಲ. ಕಾರ್ಮಿಕರಿಗೂ ಕೆಲಸ ಇಲ್ಲದಾಗಿದ್ದು, ಕೂಡಲೇ ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಶೇ 98ರಷ್ಟು ಸಣ್ಣ ಹಾಗೂ ಮಧ್ಯಮ ರೈತರಿದ್ದಾರೆ. ಇವರಿಗೆ ಬ್ಯಾಂಕ್‌ಗಳು ಸಾಲ ವಿತರಣೆ ಮಾಡುವು ದನ್ನೂ ನಿಲ್ಲಿಸಿವೆ. ಇದರಿಂದ ಮುಂದಿನ ವರ್ಷಕ್ಕೆ ಬೆಳೆಗಳನ್ನು ಉಳಿಸಿಕೊಳ್ಳು ವುದು ಕಷ್ಟವಾಗಿದೆ. ಸಹಕಾರ ಬ್ಯಾಂಕ್‌ಗಳಲ್ಲಿ ವಿತರಣೆ ಮಾಡುತ್ತಿರುವ ₹ 3 ಸಾಲದ ಮಿತಿಯನ್ನು ₹ 7 ಲಕ್ಷಕ್ಕೆ ಏರಿಕೆ ಮಾಡಬೇಕು. ಶೇ 7ರ ಬಡ್ಡಿ ದರದಲ್ಲಿ ವಿತರಣೆ ಮಾಡುತ್ತಿರುವ ಸಾಲವನ್ನು ₹ 10 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಸಾಲ ಪಾವತಿ ಮಾಡದ ಬೆಳೆಗಾರರ ಮೇಲೆ ದೂರು ದಾಖಲು ಮಾಡಲಾ ಗುತ್ತಿದ್ದು, ಇದನ್ನು ನಿಲ್ಲಿಸಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಕಾಳುಮೆಣಸು, ಕಾಫಿ, ಅಡಿಕೆ, ಬಾಳೆಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು. ಮಲೆನಾಡು ಜಿಲ್ಲೆ ಕೊಡಗಿನಲ್ಲೂ ಬರ ಸ್ಥಿತಿ ಇರುವ ಕಾರಣ ಸಣ್ಣ ಹಾಗೂ ಮಧ್ಯಮ ರೈತರಿಗೆ ₹ 30 ಸಾವಿರದ ತನಕ ಸಹಾಯಧನ ವಿತರಣೆ ಮಾಡಬೇಕು.

ಜತೆಗೆ, ಜಿಲ್ಲೆಯಲ್ಲಿ ಕಾಫಿ, ಕಾಳುಮೆಣಸು ಬೆಳೆಯನ್ನೇ ನಂಬಿಕೊಂಡು ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೂ ಕೆಲಸ ಇಲ್ಲದಂತಾಗಿದೆ. ಕಾರ್ಮಿಕರಿಗೆ ಪ್ರತಿ ತಿಂಗಳು 35 ಕೆ.ಜಿ. ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಭಾರತ ಕಮ್ಯುನಿಸ್ಟ್‌ ಪಕ್ಷದ ಕಾರ್ಯದರ್ಶಿ ಇ.ರ. ದುರ್ಗಾ ಪ್ರಸಾದ್‌, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್‌. ಭರತ್‌, ಮಹದೇವ್‌, ಎಚ್‌.ಬಿ. ರಮೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.