ADVERTISEMENT

‘ಮಾನ್ಸೂನ್‌ ಉತ್ಸವ’ ಆಚರಿಸಿ

ಕೊಡವ ಸಮಾಜ ವತಿಯಿಂದ 3ನೇ ವರ್ಷದ ‘ಕಕ್ಕಡ ನಮ್ಮೆ’ ಆಚರಣೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 10:03 IST
Last Updated 4 ಆಗಸ್ಟ್ 2015, 10:03 IST

ಕುಟ್ಟ: ಕೊಡವರ ಸಂಸ್ಕೃತಿ, ಆಚಾರ– ವಿಚಾರ ವಿಶಿಷ್ಟವಾಗಿದೆ. ಇದನ್ನು ಜಗತ್ತಿಗೆ ತೆರೆದಿಡುವ ಪ್ರಯತ್ನವಾಗಬೇಕಾಗಿದೆ. ನಾಗಾಲ್ಯಾಂಡ್‌ ‘ನಾಗಾ ಉತ್ಸವ’ ಆಚರಿಸುವಂತೆ ಕೊಡಗಿನಲ್ಲಿ ‘ಮಾನ್ಸೂನ್‌ ಉತ್ಸವ’ ಆಚರಿಸಬೇಕು ಎಂದು ಯುಪಿಎಸ್‌ಸಿ ರ್‌್ಯಾಂಕ್‌ ವಿಜೇತ ಡಾ.ಪೆಮ್ಮಯ್ಯ ಹೇಳಿದರು.

ಇಲ್ಲಿನ ಕೊಡವ ಸಮಾಜವು ಭಾನುವಾರ ಏರ್ಪಡಿಸಿದ್ದ 3ನೇ ವರ್ಷದ ‘ಕಕ್ಕಡ ನಮ್ಮೆ’ಯಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ಇಲ್ಲಿರುವ ಪ್ರಕೃತಿಯಲ್ಲದೇ ಇಲ್ಲಿನ ಆಹಾರ ಪದ್ಧತಿ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪಾರಂ ಪರಿಕ ಪ್ರವಾಸೋದ್ಯಮ ಆರಂ ಭಿಸಬೇಕಾಗಿದೆ. ಪ್ರವಾಸೋದ್ಯಮ ಬೆಳೆ ದಂತೆ ಇಲ್ಲಿನ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕೆ. ವಿಷ್ಣು ಕಾರ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿಯ ಪ್ರಮುಖ ಭಾಗವಾಗಿರುವ ಕಕ್ಕಡ ಮಾಸವನ್ನು ಕಳೆದ ಮೂರು ವರ್ಷಗಳಿಂದ ಕಕ್ಕಡ ನಮ್ಮೆಯಾಗಿ ಆಚರಿಸುತ್ತಿದ್ದೇವೆ. ಕೊಡವರ ಸಂಸ್ಕೃತಿ ಯನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು.

ಪತ್ರಕರ್ತ ಕಲ್ಯಾಟಂಡ ಬಿ. ಗಣಪತಿ ಮಾತನಾಡಿ, ಮದ್ದುಸೊಪ್ಪಿನಲ್ಲಿ 18 ರೀತಿಯ ಔಷಧೀಯ ಗುಣಗಳು ಅಡಗಿರುತ್ತವೆ. ಅದನ್ನು ಸೇವಿಸಿದರೆ ಮನುಷ್ಯನ ಆರೋಗ್ಯಕ್ಕೆ  ಒಳ್ಳೆಯದೆಂದು ನಮ್ಮ ಹಿರಿಯರು ಹೇಳಿದ್ದಾರೆ. ಅದರ ಭಾಗವಾಗಿ ಇಂದು ಕಕ್ಕಡ ನಮ್ಮೆ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸಾಹಿತಿ ತೀತೀರ ರೇಖಾ ವಸಂತ್‌, ಜಿ.ಪಂ. ಅಧ್ಯಕ್ಷೆ ಚೋಡು ಮಾಡ ಶರೀನ್‌ ಸುಬ್ಬಯ್ಯ, ವಾರ್ತಾಧಿಕಾರಿ ಚಿನ್ನಸ್ವಾಮಿ ಇದ್ದರು. ಎಲ್ಲರಿಗೂ ಮದ್ದುಸೊಪ್ಪಿನ ಪಾಯಸ ನೀಡಿ ಸತ್ಕರಿಸಲಾಯಿತು.  ವಿವಿಧ ಸ್ವಸಹಾಯ ಸಂಘಗಳು ತಯಾರಿಸಿದ ಕರಕುಶಲ ವಸ್ತುಗಳು, ವಿಶೇಷ ಪೋಷಾಕುಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಘಮಘಮಿಸಿದ ಮದ್ದುಸೊಪ್ಪಿನ ಪಾಯಸ
ನಾಪೋಕ್ಲು: ಸೋಮವಾರ ಹೋಬಳಿ ಯಾದ್ಯಂತ ಕಕ್ಕಡ ಪದಿನೆಟ್‌ ಹಬ್ಬ ವನ್ನು ಸಂಭ್ರಮದಿಂದ ಆಚರಿಸ ಲಾಯಿತು. ನಾಪೋಕ್ಲು, ನೆಲಜಿ, ಕಕ್ಕಬ್ಬೆ ಹೊದ್ದೂರು ಸೇರಿದಂತೆ ನಾಲ್ಕುನಾಡು ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕಕ್ಕಡ ಮಾಸದ ಹಬ್ಬದ ಸಂಭ್ರಮದ ಪ್ರಯುಕ್ತ ಮದ್ದುಸೊಪ್ಪಿನ ಪಾಯಸ ಘಮ ಘಮಿಸಿತು.

ಜಿಲ್ಲೆಯ ಜನ ಕೃಷಿ ಚಟುವಟಿಕೆಯ ಭಾಗವಾಗಿ ಪ್ರತಿವರ್ಷ ಕಕ್ಕಡ ಮಾಸದ 18ನೇ ದಿನವನ್ನು ಸಂಪ್ರದಾಯ ಬದ್ಧವಾಗಿ  ಆಚರಿಸಲಾಗುತ್ತದೆ. ಆ ದಿನದ ವಿಶೇಷತೆ ಮದ್ದು ಸೊಪ್ಪಿನ ಪಾಯಸದ ಸೇವನೆ.

ಮದ್ದುಸೊಪ್ಪು ಎಂದರೆ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಆಷಾಢ ಅಥವಾ ಕಕ್ಕಡ ತಿಂಗಳ ಆರಂಭದ ದಿನದಿಂದ ಈ ಸೊಪ್ಪಿಗೆ ಒಂದೊಂದೇ ಔಷಧದ ಗುಣಗಳು ಸೇರಲಾರಂಭಿಸುತ್ತದೆ ಎಂದು ಇಲ್ಲಿಯ ಜನರ ನಂಬಿಕೆ.

18ನೇ ದಿನದಂದು ಹದಿನೆಂಟು ವಿಧದ ಔಷಧಗಳು ಸೇರಿ ಆ ಸೊಪ್ಪಿನಿಂದ ತಯಾರಿಸಿದ ಖಾದ್ಯ ಗಳು ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಗ್ರಾಮೀಣ ಜನರಲ್ಲಿ ಇರುವುದರಿಂದ ಹಲವರು ಮದ್ದು ಸೊಪ್ಪಿನ ಪಾಯಸ ತಯಾರಿಸಿ ಸವಿಯುತ್ತಾರೆ.

ಮಳೆಗಾಲದಲ್ಲಿ ಕಕ್ಕಡ ಪದಿನೆಟ್‌ ವಿಶೇಷ ದಿನವಾಗಿದ್ದು , ಮದ್ದುಸೊಪ್ಪಿನ ಪಾಯಸವನ್ನು ತಯಾರಿಸಿ ಸ್ವತಃ ಉಪ ಯೋಗಿಸುವುದಲ್ಲದೆ ಇತರರಿಗೆ ಹಂಚಿ ಸಂಭ್ರಮಿಸುತ್ತೇವೆ ಎಂದು ಕೃಷಿಕ ಚೆರುಮಂದಂಡ ಕುಶ ಹೇಳಿದರು. ಮದ್ದು ಸೊಪ್ಪನ್ನು ಕತ್ತರಿಸಿ ಬೇಯಿಸಿ ಅದರಿಂದ ದೊರಕುವ ನೀರನ್ನು ಬಳಸಿ ಅಕ್ಕಿಯನ್ನು ಬೇಯಿಸಲಾಗುತ್ತದೆ. ನಂತರ ಅದಕ್ಕೆ ಬೆಲ್ಲ, ಏಲಕ್ಕಿ ತೆಂಗಿನ ತುರಿ ಸೇರಿಸಿ ಪಾಯಸ ಮಾಡ ಲಾಗುತ್ತದೆ ಎಂದು ಶಿಕ್ಷಕಿ ಶೋಭಿತಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT