ADVERTISEMENT

18, 19ಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ

ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಕನ್ನಡ ಕಲರವ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:53 IST
Last Updated 16 ನವೆಂಬರ್ 2017, 10:53 IST
18, 19ಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ
18, 19ಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ   

ಮಡಿಕೇರಿ: ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಕೊಡವ ಸಮಾಜ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ. 18 ಹಾಗೂ 19ರಂದು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಕೇಚಾಮಾಡ ಸುಬ್ಬಮ್ಮ ತಿಮ್ಮಯ್ಯ ಆಯ್ಕೆಯಾಗಿದ್ದು, ಎರಡು ದಿವಸ ಸಾಹಿತ್ಯದ ಕಾರ್ಯಕ್ರಗಳು ನಡೆಯಲಿವೆ’ ಎಂದು ಹೇಳಿದರು.

18ರಂದು ಬೆಳಿಗ್ಗೆ 8ಕ್ಕೆ ಕೊಡವ ಸಮಾಜ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಧ್ವಜಾರೋಹಣ ನಡೆಯಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಸಮ್ಮೇಳನದ ದ್ವಾರಗಳು : ಬಳಿಕ 8.15ಕ್ಕೆ ಬಾಚಮಾಡ ಡಿ. ಗಣಪತಿ ಮುಖ್ಯದ್ವಾರವನ್ನು ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಬಾಚಮಾಡ ಡಿ. ಸುಬ್ಬಯ್ಯ ದ್ವಾರವನ್ನು ತಾ.ಪಂ ಸದಸ್ಯರಾದ ಆಶಾ ಪೂಣಚ್ಚ, ಚೆಕ್ಕೇರ ಅಪ್ಪಯ್ಯ ದ್ವಾರವನ್ನು ತಾ.ಪಂ ಸದಸ್ಯ ಪೊಯಿಲೆಂಗಡ ಪಲ್ವಿನ್ ಪೂಣಚ್ಚ, ಕೀಕಣಮಡ ಸುಬ್ಬಯ್ಯ ದ್ವಾರವನ್ನು ತಾ.ಪಂ ಸದಸ್ಯ ಬಿ.ಎಂ. ಗಣೇಶ್, ಚಿರಿಯಪಂಡ ಕುಶಾಲಪ್ಪ ದ್ವಾರವನ್ನು ಪೊನ್ನಂಪೇಟೆ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ, ಸ್ಕ್ವಾಡ್ರನ್‌ ಲೀಡರ್ ಅಜ್ಜಮಾಡ ದೇವಯ್ಯ ದ್ವಾರವನ್ನು ತಾ.ಪಂ ಸದಸ್ಯ ಕುಟುಟಂಡ್ ಅಜಿತ್ ಕರುಂಬಯ್ಯ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ : 9.30ಕ್ಕೆ ಪೊನ್ನಂಪೇಟೆಯ ಪದವಿ ಪೂರ್ವ ಕಾಲೇಜು ಆವರಣದಿಂದ ಆರಂಭವಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ಚಾಲನೆ ನೀಡುವರು. ಮಂಗಳವಾದ್ಯ, ಕೊಡವ ಸಾಂಪ್ರದಾಯಿಕ ವಾಲಗ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್, ಕಲಾತಂಡಗಳು, ಸ್ತಬ್ಧಚಿತ್ರಗಳು ಮೆರುಗು ನೀಡಲಿವೆ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 11.15ಕ್ಕೆ ಮುಖ್ಯವೇದಿಕೆ ಯಲ್ಲಿ ನಡೆಯುವ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ್‌ ಉದ್ಘಾಟಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ರಾಮಕೃಷ್ಣ ಶಾರದಾಶ್ರಮದ ಬೋಧ ಸ್ವರೂಪಾನಂದಾಜೀ ಮಹಾರಾಜ್ ನೇತೃತ್ವ ವಹಿಸಲಿದ್ದಾರೆ. ಶಾಸಕರ ಕೆ.ಜಿ.ಬೋಪಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ವಿವರಿಸಿದರು.

ಸಮ್ಮೇಳನದ ಕಾರ್ಯಕ್ರಮಗಳು : ಮಧ್ಯಾಹ್ನ 1.30ಕ್ಕೆ ನಡೆಯುವ ಗೀತಗಾಯನ ಕಾರ್ಯಕ್ರಮವನ್ನು ಮಡಿಕೇರಿಯ ಹಿರಿಯ ಕಲಾವಿದರಾದ ಸತ್ಯಪ್ರಸಾದ್ ಉದ್ಘಾಟಿಸುವರು. ಹಿರಿಯ ಸಾಹಿತಿ ಚಾಲ ಸುಬ್ರಹ್ಮಣ್ಯ ಕಂಜರ್ಪಣೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಶೈಕ್ಷಣಿಕ ಗೋಷ್ಠಿಯಲ್ಲಿ ಡಾ.ಜೆ.ಸೋಮಣ್ಣ, ಉ.ರಾ. ನಾಗೇಶ್, ಡಾ.ದಯಾನಂದ ವಿಷಯ ಮಂಡಿಸಲಿದ್ದಾರೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕೊಡಗಿನ ಕೃಷಿ ಸಂಸ್ಕೃತಿ ಗೋಷ್ಠಿಯಲ್ಲಿ ವಿ.ಪಿ.ಶಶಿಧರ್, ಡಾ.ವೀರೇಂದ್ರ ಕುಮಾರ್, ರಮಾನಾಥ್ ವಿಷಯ ಮಂಡಿಸಲಿದ್ದಾರೆ ಎಂದು ವಿವರಿಸಿದರು.

19ರಂದು ಬೆಳಿಗ್ಗೆ 11ಕ್ಕೆ ಹಿರಿಯ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಮಹಿಳಾ ಗೋಷ್ಠಿಯಲ್ಲಿ ಶ.ಗ.ನಯನತಾರಾ, ಮಲ್ಲೆಂಗಡ ರೇವತಿ ಪೂವಯ್ಯ, ಉಳ್ಳಿಯಡ ಡಾಟಿ ಪೂವಯ್ಯ ವಿಷಯ ಮಂಡಿಸುವರು. ಬಳಿಕ ನಡೆಯುವ ಸಾಂಸ್ಕೃತಿಕ ಸಂಭ್ರಮವನ್ನು ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಚೆಪ್ಪುಡೀರ ಪೊನ್ನಪ್ಪ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಗೀತಗಾಯನ ನಡೆಯಲಿದೆ. ಬಳಿಕ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. 17 ಮಂದಿ ಕವಿಗಳು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್, ಡಾ.ಸುಭಾಶ್ ನಾಣಯ್ಯ, ಗೌರವ ಕೋಶಾಧಿಕಾರಿ ಮುರಳೀಧರ್, ನಿರ್ದೇಶಕರಾದ ಅಶ್ವತ್, ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಸುಕುಮಾರ್ ಉಪಸ್ಥಿತರಿದ್ದರು.

***

ಸಾಧಕರರಿಗೆ ಸನ್ಮಾನ

ಮಡಿಕೇರಿ: 19ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅವರಿಗೆ ವಿಶೇಷ ಗೌರವ ಸಮರ್ಪಣೆ ನಡೆಯಲಿದೆ.

ಚೇಂದ್ರಿಮಾಡ ಗ. ಮುತ್ತಪ್ಪ (ಸಾಹಿತ್ಯ), ವಿ.ಆರ್. ರಘುನಾಥ್(ಕ್ರೀಡೆ), ಮುಕ್ಕಾಟೀರ ಪುನಿತ್ ಕುಟ್ಟಯ್ಯ (ಉನ್ನತ ಶಿಕ್ಷಣ), ಸೋಮೆಂಗಡ ಗಣೇಶ್ ತಿಮ್ಮಯ್ಯ (ಕೃಷಿ), ಉಂಬಾಯಿ (ಸಮಾಜ ಸೇವೆ), ಉಷಾರಾಣಿ (ಶಿಕ್ಷಣ), ಯತಿರಾಜ್ (ವೈದ್ಯಕೀಯ), ಕು. ಕಾರ್ತಿಕ್ ಶೆಣೈ (ಯುವ ಪ್ರತಿಭೆ), ಎನ್.ಪಿ. ಕಾವೇರಪ್ಪ (ಶಿಲ್ಪಕಲೆ), ಚರಣ್ ರಾಜ್ (ಸಂಗೀತ), ಫಯಾಜ್ ಖಾನ್ (ಚಲನಚಿತ್ರ), ಶಿವಣ್ಣ (ಹವ್ಯಾಸಿ ಛಾಯಾಗ್ರಾಹಕ), ಬೆಸೂರು ಶಾಂತೇಶ್ (ಜಾನಪದ), ಅಜ್ಜಮಾಡ ರಮೇಶ್ ಕುಟ್ಟಪ್ಪ (ಮಾಧ್ಯಮ ಕ್ಷೇತ್ರ) ಅವರನ್ನು ಸನ್ಮಾನಿಸಲಾಗುವುದು ಎಂದು ಲೋಕೇಶ್‌ ಸಾಗರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.