ADVERTISEMENT

ಒಗ್ಗಟ್ಟಿನ ಹೋರಾಟಕ್ಕೆ ಬೆಳೆಗಾರರ ನಿರ್ಣಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 10:07 IST
Last Updated 21 ಜನವರಿ 2018, 10:07 IST

ಗೋಣಿಕೊಪ್ಪಲು: ಸಂಕಷ್ಟದ ಸಂದರ್ಭದಲ್ಲಿ ರೈತರು, ಬೆಳೆಗಾರರು ಮತ್ತು ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಡಬೇಕು ಎಂಬ ಒಕ್ಕೊರಲ ನಿರ್ಣಯವನ್ನು ಇಲ್ಲಿ ಶುಕ್ರವಾರ ನಡೆದ ಬೆಳೆಗಾರರ ಒಕ್ಕೂಟದ ಸಭೆಯಲ್ಲಿ ಕೈಗೊಳ್ಳಲಾಯಿತು.

ಪ್ರಸಕ್ತ ಸಾಲಿನಲ್ಲಿ ಕಾಫಿ ಫಸಲು ತೀವ್ರ ಇಳಿಮುಖವಾಗಿದೆ. ಜತೆಗೆ ಕಾಳು ಮೆಣಸಿನ ದರವೂ ಕುಂಠಿತವಾಗಿದೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಭೆಯಲ್ಲಿ ಆತಂಕ ವ್ಯಕ್ತವಾಯಿತು.

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್, ‘ವಿಯೆಟ್ನಾಂ ಕರಿಮೆಣಸು ಆಮದಿನಿಂದ ಜಿಲ್ಲೆಯ ಬೆಳೆಗಾರರಿಗೆ ಉಂಟಾಗಿರುವ ಸಂಕಷ್ಟದ ಬಗ್ಗೆ ಕೇಂದ್ರ ಕೃಷಿ ಸಚಿವ ಸುರೇಶ್ ಪ್ರಭು ಅವರ ಗಮನಕ್ಕೆ ತಂದು ಆಮದಿನ ಮೇಲೆ ₹ 500ರಷ್ಟು ಸುಂಕ ವಿಧಿಸಲು ಸಫಲರಾಗಿದ್ದೇವೆ. ದೇಶದ ಒಟ್ಟು 16 ಒಕ್ಕೂಟಗಳು ಒಂದೇ ವೇದಿಕೆಗೆ ಬಂದುದರಿಂದ ಈ ಹೋರಾಟಕ್ಕೆ ಫಲ ದೊರಕಿತು. ಇದರಂತೆಯೇ ಕಾಫಿ ಸಮಸ್ಯೆ ಪರಿಹರಿಸಲು ಎಲ್ಲರೂ ಒಂದಾಗಿ ಹೋರಾಡಬೇಕಿದೆ’ ಎಂದು ಹೇಳಿದರು.

ADVERTISEMENT

‘ವಿಯೆಟ್ನಾಂ ಕರಿಮೆಣಸಿನ ಗುಣಮಟ್ಟ ತೀವ್ರ ಕಳಪೆಯಾಗಿರು ವುದರಿಂದ ಇದರ ಆಮದನ್ನು ಎಲ್ಲ ರಾಷ್ಟ್ರಗಳು ನಿಷೇಧಿಸಿವೆ. ಆದರೆ ದೇಶದ ವ್ಯಾಪಾರಿಗಳು ಮಾತ್ರ ತಮ್ಮ ಲಾಭಕ್ಕಾಗಿ ದೇಶದ ಬೆಳೆಗಾರರ ಹಿತ ಬಲಿಕೊಟ್ಟು ಹಣಮಾಡುವ ದಂಧೆಗೆ ಇಳಿದಿದ್ದಾರೆ. ವಿಯಟ್ನಾಂನಿಂದ ಕಿಲೋ ಒಂದಕ್ಕೆ ₹ 120ರಿಂದ ₹ 150ಕ್ಕೆ ಖರೀದಿಸಿ ಇಲ್ಲಿ ₹ 500ಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಇಡಿ ಇಲಾಖೆಗೆ ಒಕ್ಕೂಟದ ಮೂಲಕ ಮನವರಿಕೆ ಮಾಡಿಕೊಡಲಾಗಿದೆ’ ಎಂದು ನುಡಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಸೋಮಯ್ಯ, ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಚೊಟ್ಟೆಕಾಮಾಡ ರಾಜೀವ್ ಬೋಪಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಪೃಥ್ಯು,

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲೀರ ಬೋಸ್, ಬೆಳೆಗಾರರಾದ ಪುಚ್ಚಿಮಾಡ ಲಾಲಾ ಪೂಣಚ್ಚ, ಆದೇಂಗಡ ವಿನು ಉತ್ತಪ್ಪ, ಆದೇಂಗಡ ಅಶೋಕ್, ಜಮ್ಮಡ ಮೋಹನ್, ಮಲಚೀರ ನಾಣಯ್ಯ, ಮಾಚಂಗಡ ಉಮೇಶ್, ಶೆರಿ ಸುಬ್ಬಯ್ಯ, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

4ಇಳುವರಿ ಮತ್ತು ಬೆಲೆ ಕುಸಿತು ಉಂಟಾಗಿರುವ ಕಾರಣ ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ಬ್ಯಾಂಕುಗಳು ಸಾಲಗಾರರಿಗೆ ನೋಟಿಸ್ ನೀಡಿ ಬಲವಂತದ ಸಾಲ ವಸೂಲಾತಿಗೆ ಕಡಿವಾಣ ಹಾಕಬೇಕು. 

4 ಮುಂದೆ ಬ್ಯಾಂಕುಗಳು ಬೆಳೆಗಾರರ ಆಸ್ತಿಯ ಒಟ್ಟು ಮೌಲ್ಯವನ್ನು ಪರಿಗಣಿಸಿ ಸಾಲ ನೀಡಬೇಕು.

4 ಕೇಂದ್ರ ಸರ್ಕಾರದ ಡಿಸಿ ಬ್ಯಾಂಕ್ ಮೂಲಕ ವಿತರಿಸಿರುವ ರೂಪೇ ಕಾರ್ಡ್‌ನಿಂದಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲದ ವಹಿವಾಟು ನಡೆಸಲು ಕಡಿವಾಣ ಬೀಳಲಿದೆ. ಇದನ್ನು ಹಿಂದಕ್ಕೆ ಪಡೆದು ಹಿಂದಿನ ರೀತಿಯಲ್ಲಿಯೇ ವ್ಯವಹಾರ ನಡೆಸಲು ಕ್ರಮ ಕೈಗೊಳ್ಳಬೇಕು.

4ಕಾಫಿಗೆ ಉತ್ಪಾದನಾ ದರ ಆಧರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.

4ಎಂಎಸ್.ಸ್ವಾಮಿನಾಥನ್‌ ವರದಿಯನ್ನು ಅನುಷ್ಠಾನಗೊಳಿಸಬೇಕು.

ಈ ಎಲ್ಲ ನಿರ್ಣಯಗಳ ಅನುಷ್ಠಾನಕ್ಕೆ ಹೋರಾಡಲು ಜಿಲ್ಲಾ ರೈತ ಸಂಘ, ಕೊಡಗು ಬೆಳೆಗಾರರ ಒಕ್ಕೂಟ, ಜಿಲ್ಲಾ ಭಾರತೀಯ ಕಿಸಾನ್ ಸಂಘ ಜಂಟಿಯಾಗಿ ಕಾರ್ಯನಿರ್ವಹಿಸಲು ತೀರ್ಮಾನಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.