ADVERTISEMENT

ಪುನರ್ವಸು ಅಬ್ಬರಕ್ಕೆ ಹಳ್ಳಕೊಳ್ಳಗಳು ಭರ್ತಿ

ಧಾರಾಕಾರ ಮಳೆಗೆ ಮತ್ತೆ ಮುಳುಗಿದ ಭಾಗಮಂಡಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 13:32 IST
Last Updated 7 ಜುಲೈ 2018, 13:32 IST
ಮಡಿಕೇರಿ ತಾಲ್ಲೂಕು ಭಾಗಮಂಡಲ– ಅಯ್ಯಂಗೇರಿ ರಸ್ತೆಯ ಮೇಲೆ ಹರಿಯುತ್ತಿರುವ ಕಾವೇರಿ ನದಿಯ ನೀರು
ಮಡಿಕೇರಿ ತಾಲ್ಲೂಕು ಭಾಗಮಂಡಲ– ಅಯ್ಯಂಗೇರಿ ರಸ್ತೆಯ ಮೇಲೆ ಹರಿಯುತ್ತಿರುವ ಕಾವೇರಿ ನದಿಯ ನೀರು   

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಪುನರ್ವಸು ಮಳೆ ಅಬ್ಬರಿಸಲು ಆರಂಭಿಸಿದೆ. ಶುಕ್ರವಾರ ರಾತ್ರಿಯಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹಳ್ಳಕೊಳ್ಳಗಳು ಭರ್ತಿಯಾಗಿವೆ. ನದಿಗಳ ಮಟ್ಟ ಏರಿಕೆಯಾಗಿದ್ದು, ಅಪಾರ ಪ್ರಮಾಣದ ನೀರು ಹರಿಯುತ್ತಿದೆ.

ಹೊಸ ನಕ್ಷತ್ರದ ಮಳೆ ಪದಾರ್ಪಣೆ ಮಾಡಿ, ಎರಡೇ ದಿನಕ್ಕೆ ವರುಣ ಆರ್ಭಟಿಸಲು ಆರಂಭಿಸಿದ್ದಾನೆ. ಶನಿವಾರ ಬೆಳಿಗ್ಗೆಯೂ ಭಾರಿ ಮಳೆ ಸುರಿಯಿತು. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಜಿಲ್ಲಾಡಳಿತ ಶನಿವಾರ ರಜೆ ಘೋಷಿಸಿತ್ತು.

ಮಡಿಕೇರಿ ನಗರದಲ್ಲೂ ಒಂದೇ ಸಮನೆ ಮಳೆಯಾಗುತ್ತಿದೆ. ಗಾಳಿಬೀಡು, ಮಾಂದಲ್‌ಪಟ್ಟಿ, ಸುಂಟಿಕೊಪ್ಪ, ಚೆಟ್ಟಳ್ಳಿ, ತಾಳತ್‌ಮನೆ ವ್ಯಾಪ್ತಿಯಲ್ಲೂ ಮಳೆಗೆ ಜನರು ಹೈರಾಣಾಗಿದ್ದಾರೆ. ಕೆಲವು ಕ್ಷಣ ಬಿಡುವು ಕೊಟ್ಟು ಮಳೆ ರಭಸವಾಗಿ ಸುರಿಯುತ್ತಿದೆ. ಮಾಂದಲ್‌ಪಟ್ಟಿ ರಸ್ತೆಯ ಸೇತುವೆ ಮೇಲೆ ಮಳೆಯ ನೀರು ಹರಿದು ಪ್ರವಾಸಿಗರಿಗೆ ತೊಂದರೆ ಉಂಟಾಯಿತು. ಮಂಗಳಾದೇವಿ ನಗರದಲ್ಲಿ ಮರವೊಂದು ಉರುಳಿ ಬಿದ್ದಿದೆ.

ADVERTISEMENT

ಓಂಕಾರೇಶ್ವರ ದೇಗುಲದ ಕಲ್ಯಾಣಿ ಎರಡನೇ ಬಾರಿಗೆ ಭರ್ತಿಯಾಗಿದ್ದು ಇಡೀ ಆವರಣವನ್ನು ಮಳೆಯ ನೀರು ಆವರಿಸಿತ್ತು. ಮಳೆ ನೀರಿನಲ್ಲೇ ಸಾಗಿ ಭಕ್ತರು ದೇವರ ದರ್ಶನ ಪಡೆದರು.

ಭಾಗಮಂಡಲದಲ್ಲಿ ವರುಣನ ಆರ್ಭಟ

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಗೆ ತ್ರಿವೇಣಿ ಸಂಗಮ ಮಳೆಗಾಲದಲ್ಲಿ ಮೂರನೇ ಬಾರಿಗೆ ಭರ್ತಿಯಾಗಿದೆ. ಭಾಗಮಂಡಲದ ಸ್ನಾನಘಟ್ಟವು ಮತ್ತೆ ನೀರಿನಲ್ಲಿ ಮುಳುಗಡೆಯಾಗಿದೆ. ಮಧ್ಯಾಹ್ನದ ವೇಳೆಗೆ ರಸ್ತೆ ಸಂಚಾರವೂ ಬಂದ್‌ ಆಯಿತು. ಭಾಗಮಂಡಲ– ನಾಪೋಕ್ಲು– ಅಯ್ಯಂಗೇರಿ ರಸ್ತೆಯ ಮೇಲೆ ಕಾವೇರಿ ನದಿಯ ನೀರು ಹರಿಯುತ್ತಿದ್ದು, ವಾಹನ ಸಂಚಾರ ಬಂದ್‌ ಆಗಿದೆ. ತಲಕಾವೇರಿ ಸಂಪರ್ಕ ಕಡಿತವಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಭಗಂಡೇಶ್ವರನ ದರ್ಶನಕ್ಕೆ ತೆರಳುವ ಭಕ್ತರಿಗೆ ರ್‍ಯಾಫ್ಟಿಂಗ್‌ ಬೋಟ್‌ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕಳೆದ 10 ದಿನಗಳ ಕಾಲ ಮಳೆ ಇಳಿಮುಖವಾಗಿತ್ತು. ಮತ್ತೆ ಆರಂಭಗೊಂಡಿರುವ ಮಳೆಗೆ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಮೈದುಂಬಿಕೊಂಡು ಹರಿಯಲು ಆರಂಭಿಸಿವೆ. ನದಿಯಂಚಿನ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆಯಾ ವ್ಯಾಪ್ತಿ ಸ್ಥಳೀಯ ಆಡಳಿತಗಳು ಎಚ್ಚರಿಕೆ ನೀಡಿದೆ.

ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಮ್ಮನಮಂಟಿ ಬಡಾವಣೆಯಲ್ಲಿ ಚಿಕ್ಕಗುಡ್ಡ ಕುಸಿದು ಮನೆಯೊಂದು ಜಖಂಗೊಂಡಿದೆ. ಜೂನ್‌ ಎರಡನೇ ವಾರದಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ₹ 14 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಇದೀಗ ಮತ್ತೆ ವರುಣ ಆರ್ಭಟಿಸುತ್ತಿದ್ದು ಹಳ್ಳಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ನದಿಯಂಚಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಪ್ರವಾಸಿಗರ ಲಗ್ಗೆ: ಮಳೆಯಲ್ಲಿ ಕೊಡಗು ಜಿಲ್ಲೆಯ ಪ್ರಕೃತಿ ನೋಡುವುದೇ ಕಣ್ಣಿಗೆ ಹಬ್ಬ. ವಾರಾಂತ್ಯದಲ್ಲಿ ಹೊಸ ನಕ್ಷತ್ರದ ಮಳೆಯ ಅಬ್ಬರ ಕಣ್ತುಂಬಿಕೊಳ್ಳಲು ಪ್ರವಾಸಿಗರು ಜಿಲ್ಲೆಗೆ ಲಗ್ಗೆಯಿಟ್ಟಿದ್ದಾರೆ. ಈ ವಾರ ಹೋಂಸ್ಟೇಗಳು ಭರ್ತಿಯಾಗಿದ್ದು, ಪ್ರವಾಸಿತಾಣಗಳು ಜನದಟ್ಟಣೆಯಿಂದ ಕೂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.