ADVERTISEMENT

ಅನುದಾನ ವಾಪಸ್‌ ಹೋದರೆ ಕ್ರಮ

ಅಧಿಕಾರಿಗಳಿಗೆ ತಾ.ಪಂ ಅಧ್ಯಕ್ಷ ಆಂಜಿನಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:34 IST
Last Updated 23 ಮಾರ್ಚ್ 2018, 11:34 IST

ಕೋಲಾರ: ‘ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗಬಾರದು. ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ಬಳಕೆಯಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಪ್ರತಿ ಹಣಕಾಸು ವರ್ಷದಲ್ಲಿ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಈ ಬಾರಿ ಅನುದಾನ ವಾಪಸ್‌ ಹೋದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ವಿಶೇಷ ಘಟಕದ ಯೋಜನೆ ಹಾಗೂ ಗಿರಿಜನ ಉಪಯೋಜನೆ (ಎಸ್‌ಸಿಪಿ– ಟಿಎಸ್‌ಪಿ) ಅನುದಾನ ಸದ್ಬಳಕೆ ಆಗಬೇಕು. ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳಿಗೆ ವಿವಿಧ ಯೋಜನೆಗಳಲ್ಲಿ ಮೀಸಲಿರುವ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದು ಹೇಳಿದರು.

ADVERTISEMENT

‘ಸರ್ಕಾರ ಬಡವರು, ದಲಿತರು ಹಾಗೂ ಹಿಂದುಳಿದ ವರ್ಗದವರ ಅನುಕೂಲಕ್ಕಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಸರ್ಕಾರದ ಉದ್ದೇಶ ಈಡೇರಬೇಕು ಮತ್ತು ಯೋಜನೆಯ ಲಾಭ ಜನರಿಗೆ ತಲುಪಬೇಕು. ಹಿಂದಿನ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸಾಧನೆಯಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನಕ್ಕೇರಿತ್ತು. ಈ ಬಾರಿ ಮೊದಲ ಸ್ಥಾನಕ್ಕೆ ಏರಬೇಕು’ ಎಂದರು.

ಬ್ಯಾಂಕ್‌ಗಳು ಸತಾಯಿಸುತ್ತಿವೆ: ‘ರಾಷ್ಟ್ರೀಕೃತ ಬ್ಯಾಂಕ್‌ಗಳು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ಕೊಡದೆ ಸತಾಯಿಸುತ್ತಿವೆ. ಈ ಸಂಬಂಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೇನೆ. ಆದರೂ ಬ್ಯಾಂಕ್‌ಗಳ ನಿರ್ಲಕ್ಷ್ಯ ಮುಂದುವರಿ
ದಿದೆ. ಫಲಾನುಭವಿಗಳಿಗೆ ಸಕಾಲಕ್ಕೆ ಸಾಲ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಸರ್ಕಾರದ ಯೋಜನೆಗಳು ಯಶಸ್ವಿಯಾಗುವುದಿಲ್ಲ’ ಎಂದರು.

‘ಬೇಸಿಗೆಗಾಲ ಆರಂಭವಾಗಿದ್ದು, ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಕೊಳವೆ ಬಾವಿಗಳ ನೀರಿನಲ್ಲಿ ವಿಷಕಾರಿ ಫ್ಲೋರೈಡ್ ಅಂಶ ಇರುವುದರಿಂದ ಆ ನೀರು ಬಳಕೆಗೆ ಯೋಗ್ಯವಲ್ಲ. ತಾಲ್ಲೂಕಿನಲ್ಲಿ 364 ಘಟಕಗಳನ್ನು ಸ್ಥಾಪಿಸಬೇಕಿದ್ದು, ಈಗಾಗಲೇ 245 ಘಟಕಗಳ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 119 ಘಟಕಗಳು ಶೀಘ್ರವೇ ಕಾರ್ಯಾರಂಭ ಮಾಡಬೇಕು’ ಎಂದು ಹೇಳಿದರು.

ಹೆಚ್ಚಿನ ಆದಾಯ: ‘ಹಿಂದಿನ ವರ್ಷ ಉತ್ತಮ ಮಳೆ ಆಗಿರುವುದರಿಂದ ತಾಲ್ಲೂಕಿನ ಬಹುಪಾಲು ಕೆರೆಗಳು ತುಂಬಿವೆ. ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟು ಹರಾಜು ಮಾಡಲಾಗಿದೆ. ಮತ್ತೆ ಕೆಲ ಕೆರೆಗಳಿಗೆ ಈಗ ಮೀನು ಮರಿಗಳನ್ನು ಬಿಡಲಾಗುತ್ತಿದೆ. ಮೀನು ಸಾಕಾಣಿಕೆಯಿಂದ ಇಲಾಖೆಗೆ ಹೆಚ್ಚಿನ ಆದಾಯ ಬಂದಿದೆ’ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾ.ಪಂ ಉಪಾಧ್ಯಕ್ಷೆ ಲಕ್ಷ್ಮಿ, ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.