ADVERTISEMENT

ಅನ್ನಭಾಗ್ಯ ಯೋಜನೆ ಮುಂದುವರಿಯಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:14 IST
Last Updated 11 ಜನವರಿ 2017, 11:14 IST

ಕೋಲಾರ: ‘ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಮುಂದುವರಿಸಬೇಕು. ಸರ್ಕಾರ ಯಾವುದೇ ಕಾರಣಕ್ಕೂ ಅಕ್ಕಿ ಬದಲಾಗಿ ಹಣ ಕೊಡಬಾರದು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಅಡುಗೆ ಕೆಲಸದ ಸಿಬ್ಬಂದಿಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ ಜನರು ಆಹಾರಕ್ಕಾಗಿ ಅನುಭವಿಸುತ್ತಿರುವ ಕಷ್ಟವನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 1ರ ದರದಲ್ಲಿ ಒಂದು ಕೆ.ಜಿ ಅಕ್ಕಿ ನೀಡುವ ವ್ಯವಸ್ಥೆ ಜಾರಿಗೊಳಿಸಿದರು. ಅವರ ಜನಪರ ನಿರ್ಧಾರಿಂದ ರಾಜ್ಯದಲ್ಲಿ ಬಡ ಜನರ ಅನ್ನದ ಕೊರತೆ ನೀಗಿದೆ. ಇಂತಹ ಮಹತ್ತರ ಯೋಜನೆಯನ್ನು ಅಡೆತಡೆ ಎದುರಾದರೂ ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಮಕ್ಕಳಿಗೆ ಅನ್ನ ಸಿಗುವುದೂ ಕಷ್ಟವಾಗಿದೆ. ದಿವಂಗತ ಎಂ.ಜಿ.ರಾಮಚಂದ್ರನ್ ಅವರ ಆಡಳಿತದ ವೇಳೆ ತಮಿಳುನಾಡಿನ ಒಬ್ಬ ಸಚಿವರು ತಮ್ಮ ಪ್ರವಾಸದ ಸಂದರ್ಭದಲ್ಲಿ ಶಾಲೆ ಬಿಟ್ಟ ಕೆಲ ಮಕ್ಕಳು ಅನ್ನಕ್ಕಾಗಿ ದುಡಿಯುತ್ತಿದ್ದುದ್ದನ್ನು ಕಂಡು ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತಂದರು. ಅವರ ಕ್ರಾಂತಿಕಾರಿ ನಿರ್ಧಾರದಿಂದ ದೇಶದ ಹಲವು ರಾಜ್ಯಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಾಯಿತು ಎಂದರು.

ಪ್ರೀತಿಯಿಂದ ಬಡಿಸಿ: ಅಡುಗೆ ಸಿಬ್ಬಂದಿಯು ಯಾವುದೇ ಬೇಧ ಭಾವ ಮತ್ತು ಜಾತಿ ತಾರತಮ್ಯವಿಲ್ಲದೆ ಮಕ್ಕಳಿಗೆ ಪ್ರೀತಿಯಿಂದ ಬಿಸಿಯೂಟ ಬಡಿಸಬೇಕು. ಮಧ್ಯಾಹ್ನದ ಬಿಸಿಯೂಟ ಬಡಿಸುವಾಗ ಯಾವುದೇ ಅವಘಡ ನಡೆಯಬಾರದು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮಕ್ಕಳನ್ನು ಇತರೆ ಮಕ್ಕಳಂತೆಯೇ ಭಾವಿಸಬೇಕು. ಎಲ್ಲಾ ಮಕ್ಕಳನ್ನು ಸಮಾನ ಭಾವದಿಂದ ನೋಡಬೇಕು. ಹುಟ್ಟುವಾಗ ಯಾವುದೇ ಜಾತಿ ನೋಡಿಹುಟ್ಟುವುದಿಲ್ಲ ಎಂದರು.

ಖಾಸಗಿ ಶಾಲೆಗಳ ದಂಧೆ ನಿಲ್ಲಬೇಕು. ಇತ್ತೀಚೆಗೆ ಶಿಕ್ಷಣದ ಹೆಸರಿನಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಮಕ್ಕಳ ದಾಖಲಾತಿ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಶಾಲೆಗಳು ಮುಚ್ಚಿ ಹೋಗಿ ಶಿಕ್ಷಕರಿಗೆ ಕೆಲಸವಿಲ್ಲದೆ ನಿರುದ್ಯೋಗ ಸಮಸ್ಯೆ ಎದುರಾಗುತ್ತದೆ ಎಂದು ಎಚ್ಚರಿಸಿದರು.

ಭವಿಷ್ಯ ಉಜ್ವಲ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಯ್ಯ ಮಾತನಾಡಿ, ‘ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಿಗೆ ಸಕಾಲಕ್ಕೆ ಉತ್ತಮ ಶಿಕ್ಷಣ ದೊರೆತರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನನ್ನ ತಂದೆ ತಾಯಿ ವಿದ್ಯಾವಂತರಲ್ಲ. ಆದರೆ, ನಾನು ಓದಿ ಮೇಲೆ ಬಂದಿದ್ದರಿಂದ ಡಿಡಿಪಿಐ ಆಗಿದ್ದೇನೆ. ಅದರಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಿದರೆ ಅವರ ಮುಂದಿನ ಸ್ಥಿತಿಗತಿ ಸುಧಾರಣೆಯಾಗುತ್ತದೆ’ ಎಂದು ತಿಳಿಸಿದರು.

ಕ್ಷೀರಭಾಗ್ಯ ನೋಡಲ್‌ ಅಧಿಕಾರಿಗಳಾದ ಮಹದೇವನಾಯಕ್, ಡಾ.ಪ್ರಸಾದ್, ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿ ಬಾಲಾಜಿ, ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.