ADVERTISEMENT

ಅಭಿವೃದ್ಧಿಗೆ ಪಾರ್ಥೇನಿಯಂನಂತೆ ಕಾಂಗ್ರೆಸ್ ಅಡ್ಡಿ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 6:17 IST
Last Updated 10 ಜುಲೈ 2017, 6:17 IST

ಕೋಲಾರ: ‘ದೇಶದ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ಪಾರ್ಥೇನಿಯಂನಂತೆ (ನಕ್ಷತ್ರ ಕಳೆ) ಅಡ್ಡಿಯಾಗಿದೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಆರೋಪಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ‘ಅಧಿಕಾರಕ್ಕಾಗಿ ದೇಶವನ್ನು ವಿಭಜಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಕಾಂಗ್ರೆಸ್‌ ಆಡಳಿತದ ನಿರ್ಮೂಲನೆಗೆ ಬೂತ್ ಮಟ್ಟದ ಕಾರ್ಯಕರ್ತರು ಸಂಕಲ್ಪ ಮಾಡಬೇಕು’ ಎಂದು ಹೇಳಿದರು.

‘ದೇಶದಲ್ಲಿ ಮತ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಪಕ್ಷದಿಂದಲೇ ಆರಂಭವಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಸಮಾಜ ಘಾತುಕ ಕೃತ್ಯಗಳು ಮಿತಿಮೀರಿ ನಡೆಯುತ್ತಿವೆ. ಅದರ ಪರಿಣಾಮವಾಗಿ ಇತರ ಪಕ್ಷಗಳು ಹಾದಿ ತಪ್ತುತ್ತಿವೆ. ಇದೊಂದು ಬೇಜವಾಬ್ದಾರಿ ವರ್ತನೆಯಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ರಾಜ್ಯಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಕಾನೂನು ಸುವ್ಯವಸ್ಥೆ ಹದಗಟ್ಟಿದ್ದು, ದೇಶಭಕ್ತರನ್ನು ವಿನಾಕಾರಣ ಹಾಡಹಗಲೇ ಹತ್ಯೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಇದನ್ನೆಲ್ಲ ಗಮನಿಸುತ್ತಿದ್ದರೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆಯಾಗಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಲ್ಲಿದ್ದಾಗ ಜಾರಿಗೊಳಿಸಿರುವ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಕಾರ್ಯಕರ್ತರು ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ಬಿಜೆಪಿ ಜಿಲ್ಲಾ ಉಸ್ತುವಾರಿ ಜಯದೇವ್, ವಿಭಾಗೀಯ ಉಸ್ತುವಾರಿ ಸಚ್ಚಿದಾನಂದಮೂರ್ತಿ, ಜಿಲ್ಲಾ ಘಟಕ ಅಧ್ಯಕ್ಷ ಬಿ.ಪಿ. ವೆಂಕಟಮುನಿಯಪ್ಪ, ಮುಖಂಡರಾದ ವೈ. ಸಂಪಂಗಿ, ಎ.ನಾಗರಾಜ್, ಬಿಸ್ಸೇಗೌಡ, ನಗರಸಭೆ ಸದಸ್ಯ ಮುರಳಿ ಗೌಡ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.