ADVERTISEMENT

ಆರೋಗ್ಯ ರಕ್ಷಣೆಗೆ ಸಿರಿಧಾನ್ಯ ಬಳಕೆ ಪೂರಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 10:11 IST
Last Updated 24 ಜೂನ್ 2017, 10:11 IST

ಕೋಲಾರ: ‘ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಸ್ತು ಪ್ರದರ್ಶನಗಳು ರೈತಾಪಿ ವರ್ಗ ಹಾಗೂ ಜನ ಸಾಮಾನ್ಯರಿಗೆ ಹೊಸ ಶೋಧನೆಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುತ್ತವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌. ರಮೇಶ್‌ಕುಮಾರ್ ಅಭಿಪ್ರಾಯ ಪಟ್ಟರು.

ಜಿಲ್ಲಾಡಳಿತವು ನಗರದ ತೋಟಗಾರಿಕೆ ಇಲಾಖೆ ನರ್ಸರಿ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ವಸ್ತು ಪ್ರದರ್ಶನಗಳು ನೆಪ ಮಾತ್ರ. ಅದರ ಮೂಲಕ ಇಲಾಖೆಯ ಪ್ರಗತಿ ಮತ್ತು ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತದೆ’ ಎಂದರು.

‘ಸಿರಿಧಾನ್ಯಗಳು ಮತ್ತು ಅವುಗಳ ಪ್ರಯೋಜನದ ಬಗ್ಗೆ ಜನರಲ್ಲಿ ಅರಿವು ಕಡಿಮೆ. ಸಿರಿಧಾನ್ಯಗಳ ಬಳಕೆ ಕಡಿಮೆ ಆಗಿರುವುದರಿಂದಲೇ ಜನರ ಆರೋಗ್ಯ ಕೆಡುತ್ತಿದೆ. ಹಿಂದೆ ಹೊಲಗಳಲ್ಲಿ ರಾಗಿ ಜತೆಗೆ ನವಣೆ, ಸಜ್ಜೆ, ಸಾಸಿವೆ ಧಾನ್ಯಗಳನ್ನು ಬೆಳೆಯುತ್ತಿದ್ದರು. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈಗಲೂ ಕೊರಲು ಎಂಬ ಧಾನ್ಯ ಬೆಳೆಯುತ್ತಾರೆ.

ADVERTISEMENT

ನಾನು ಚಿಕ್ಕವನಿದ್ದಾಗ ಕೊರಲು ಧಾನ್ಯದಿಂದ ಮಾಡಿದ ಪಾಯಸ ಕುಡಿಯುತ್ತಿದ್ದೆ. ಪಾಯಸ ಬಹಳ ರುಚಿಕರವಾಗಿರುತ್ತಿತ್ತು’ ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
‘ಅಧಿಕಾರಿಗಳು ಅಚ್ಚುಕಟ್ಟಾಗಿ ವಸ್ತು ಪ್ರದರ್ಶನ ಏರ್ಪಾಡು ಮಾಡಿದ್ದಾರೆ. ಕಾಯಿಪಲ್ಯೆಗಳಿಂದ ಸುಂದರವಾಗಿ ಬಿಂಬಿತವಾಗಿರುವ ವಸ್ತು ಪ್ರದರ್ಶನವನ್ನು ಶಾಲಾ ಮಕ್ಕಳಿಗೆ ತೋರಿಸಿದರೆ ಹೆಚ್ಚು ಖುಷಿ ಪಡುತ್ತಾರೆ. ಶನಿವಾರ ಮತ್ತು ಭಾನುವಾರ ಮಕ್ಕಳಿಗಾಗಿಯೇ ಒಂದು ಪ್ರದರ್ಶನ ಇಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊರತೆ ಇಲ್ಲ: ‘ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳುತ್ತಿದೆ. ಮುಂಗಾರು ಮಳೆ ಆಶಾದಾಯಕವಾಗಿದೆ. ಮುಂದೆಯೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಕೊರತೆ ಇಲ್ಲ. ರೈತರಿಗೆ ಅಗತ್ಯವಿರುವಷ್ಟು ಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ’ ಎಂದು ವಿವರಿಸಿದರು.

ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋಧಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್‌.ರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.