ADVERTISEMENT

ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಬೇಡ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2017, 11:09 IST
Last Updated 5 ಏಪ್ರಿಲ್ 2017, 11:09 IST
ಕೋಲಾರದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಕುರಿತ ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು
ಕೋಲಾರದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಕುರಿತ ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು   

ಕೋಲಾರ: ‘ಕೋಲಾರ ಜಿಲ್ಲೆಯು ಭೂ ಹೋರಾಟ ನಡೆಸಿದ ಪ್ರಥಮ ಜಿಲ್ಲೆ. ಇಲ್ಲಿಯೇ ನಮ್ಮ ವ್ಯವಹಾರ ಕೊಳಕಾಗಿ ಹೋದರೆ ಹೇಗೆ. ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಆಗಬಾರದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಮಾತೃ ಇಲಾಖೆಯಂತಿರುವ ಕಂದಾಯ ಇಲಾಖೆಯು ಇತರೆ ಇಲಾಖೆಗಳಿಗೆ ಮಾದರಿಯಾಗಬೇಕು. ನನ್ನ ಇಲಾಖೆಯೇ ಕೊಳಕಾಗಿದ್ದರೆ ಆಡಳಿತ ಹೇಗೆ ನಡೆಸಲಿ. ಆಡಳಿತ ಯಂತ್ರ ಸ್ವಚ್ಛ ಮತ್ತು ಕ್ರಿಯಾಶೀಲವಾಗಿರಬೇಕು’ ಎಂದರು.

ಬಗರ್ ಹುಕುಂ ಸಾಗುವಳಿ ಮತ್ತು ಪೋಡಿ ಅದಾಲತ್‌ನಡಿ ರೈತರಿಗೆ ಹಕ್ಕುಪತ್ರ ಹಾಗೂ ಪಹಣಿ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಕಿಡಿಕಾರಿದ ಅವರು, ‘ಜಿಲ್ಲೆಯಲ್ಲಿ 13 ಸಾವಿರ ಮಂದಿ ಬಗರ್ ಹುಕುಂ ಸಾಗುವಳಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಇತ್ಯರ್ಥವಾಗದಿದ್ದರೆ ಹೇಗೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಆಗಸ್ಟ್ ಅಂತ್ಯದೊಳಗೆ ಎಲ್ಲಾ ಬಗರ್‌ ಹುಕುಂ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಸುಮ್ಮನಿರುವುದಿಲ್ಲ. ನಿಮ್ಮ ತಲೆ ಮೇಲೆ ಅಪಾಯದ ತೂಗುಗತ್ತಿ ಕಾದಿದೆ. ಅಕ್ರಮ ಸಾಗುವಳಿ ಸಕ್ರಮಗೊಳಿಸುವ ಸಂಬಂಧ ತಹಶೀಲ್ದಾರ್‌ಗಳು ವಾರದಲ್ಲಿ ಒಮ್ಮೆಯಾದರೂ ಸಭೆ ನಡೆಸಬೇಕು. ಯಾರು ಬರಲಿ ಅಥವಾ ಬಾರದೆ ಹೋಗಲಿ ಇಬ್ಬರಾದರೂ ಸಭೆ ನಡೆಸಬೇಕು. ಸಭೆಗೆ ಆಯಾ ಕ್ಷೇತ್ರದ ಶಾಸಕರು ಬರಬೇಕು. ಶಾಸಕರು ಬರದಿದ್ದರೆ ನೀವೇ ಸಭೆ ನಡೆಸಿ. ಈ ಬಗ್ಗೆ ಜಿಲ್ಲಾಧಿಕಾರಿ ಜವಾಬ್ದಾರಿ ವಹಿಸಬೇಕು’ ಎಂದು ಸೂಚಿಸಿದರು.

ನಿಲುವು ಅಚಲ: ‘ಮೂರು ಕಂತುಗಳಲ್ಲಿ ಸಾಗುವಳಿ ಚೀಟಿ ಶುಲ್ಕ ಪಾವತಿಸಲು ರೈತರಿಗೆ ಅವಕಾಶ ಕೊಡಿ. ಶುಲ್ಕ ಪಾವತಿಸಲು ಸಾಧ್ಯವಾಗದ ರೈತರಿಗೆ ಸಾಗುವಳಿ ಚೀಟಿ ನೀಡಲು ವಿಳಂಬ ಮಾಡಬಾರದು. ಪೋಡಿ ಅದಾಲತ್ ವಿಚಾರದಲ್ಲಿ ನನ್ನ ನಿಲುವು ಅಚಲ. ಯಾವುದೇ ಕಾರಣಕ್ಕೂ ತಡ ಮಾಡಬೇಡಿ, ದಾಖಲೆಪತ್ರಗಳು ಕಳೆದು ಹೋಗಿದ್ದರೆ ಮಿಸ್ಸಿಂಗ್ ಪ್ರಕರಣದಡಿ ಮಾಹಿತಿ ಪಡೆದು ಪಕ್ಕಾ ಪೋಡಿ ಮಾಡಿಕೊಡಿ’ ಎಂದು ಹೇಳಿದರು.

ಬೆದರಿಸುತ್ತಾರೆ: ಸಭೆಯಲ್ಲಿ ಮಾತನಾಡಿದ ಮುಳಬಾಗಿಲು ಶಾಸಕ ಜಿ.ಮಂಜುನಾಥ್, ‘ಸರ್ವೆಯರ್‌ಗಳು ತಹಶೀಲ್ದಾರ್‌ರ ಮಾತು ಕೇಳುತ್ತಿಲ್ಲ. ಬದಲಿಗೆ ಅವರನ್ನೇ ಬೆದರಿಸುತ್ತಾರೆ’ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಆಡಳಿತ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ನಿಮ್ಮಲ್ಲಿ ಬೇರೆ ಏನಾದರೂ ವೀಕ್ನೆಸ್‌ ಇದೆ ಏನ್ರಿ. ನೀವು ಯಾರಿಗೂ ಹೆದರಬೇಡಿ. ನಿಷ್ಠೆಯಿಂದ ಕೆಲಸ ಮಾಡಿ’ ಎಂದು ಮುಳಬಾಗಿಲು ತಹಶೀಲ್ದಾರ್‌ಗೆ ತಿಳಿಸಿದರು.

‘ಕೆರೆ ಒತ್ತುವರಿ ತೆರವು ಮಾಡಬೇಕು. ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಸರ್ವೆ ಮಾಡಿ ಕೆರೆ ಅಚ್ಚುಕಟ್ಟು ಭದ್ರಪಡಿಸಬೇಕು. ಸರ್ವೆಯರ್‌ಗಳ ಕೊರತೆ ಇದ್ದರೆ ನಿವೃತ್ತಿ ಹೊಂದಿದವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಿ. ನರೇಗಾದಲ್ಲಿ ಸಾಕಷ್ಟು ಹಣವಿದೆ. ಹೇಳಿ ಕೇಳಿ ಕೋಲಾರ ಕೆರೆಗಳ ಜಿಲ್ಲೆ. 2,000ಕ್ಕೂ ಹೆಚ್ಚು ಕೆರೆಗಳು ಜಿಲ್ಲೆಯಲ್ಲಿದ್ದು, ಎಲ್ಲ ಕೆರೆಗಳಲ್ಲೂ ಹೂಳು ತೆಗೆಯಿರಿ’ ಎಂದರು.

‘ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರು ಮತ್ತು ಜಾನುವಾರಗಳಿಗೆ ಮೇವಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಸಮಸ್ಯಾತ್ಮಕ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಕೊಡಿ. ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಕೊಳವೆ ಬಾವಿ ಕೊರೆಸಿ. ನೀರಿನ ಸಮಸ್ಯೆಯ ವಿಚಾರದಲ್ಲಿ ರಾಜಿ ಬೇಡ. ಕುಡಿಯುವ ನೀರಿಗೆ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧ. ಅಗತ್ಯವಿರುವ ಕಡೆ ಗೋಶಾಲೆ ತೆರೆಯಿರಿ’ ಎಂದು ಸಲಹೆ ನೀಡಿದರು.

ವಿಶೇಷ ಅನುದಾನ: ‘ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಗೆ ಕುಡಿಯುವ ನೀರು ಪೂರೈಸಲು ವಿಶೇಷ ಅನುದಾನ ಕೊಡಬೇಕು’ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಒತ್ತಾಯಿಸಿದರು.

‘ಎಲ್ಲಾ ಗ್ರಾಮಗಳಿಗೂ ಟ್ಯಾಂಕರ್ ಮೂಲಕ ನೀರು ಕೊಡಲು ಸಾಧ್ಯವಿಲ್ಲ. ಆದ ಕಾರಣ ಕೊಳವೆ ಬಾವಿ ಕೊರೆಸಲು ಅನುಮತಿ ಕೊಡಿ’ ಎಂದು ಶಾಸಕಿ ವೈ.ರಾಮಕ್ಕ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಮನವಿ ಮಾಡಿದರು. ‘ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ಇದರಿಂದ ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ಆರೋಪಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿ.ಪಂ ಉಪಾಧ್ಯಕ್ಷೆ ಯಶೋಧಾ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.