ADVERTISEMENT

ಉದ್ಯೋಗ ನೀಡಿದ ಬೇವಿನ ಬೀಜ

ಮಹಿಳೆಯರಿಂದ ಸಂಗ್ರಹ: 1 ಕೆ.ಜಿಗೆ ₹ 25ರಂತೆ ವ್ಯಾಪಾರಿಗಳ ಖರೀದಿ, ರೋಗ ನಿಯಂತ್ರಣಕ್ಕೆ ಹಿಂಡಿ ಬಳಕೆ

ಟಿ.ನಂಜುಂಡಪ್ಪ
Published 11 ಜುಲೈ 2017, 8:50 IST
Last Updated 11 ಜುಲೈ 2017, 8:50 IST

ಗೌರಿಬಿದನೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕೃಷಿ ಕೂಲಿಕಾರ ಮಹಿಳೆಯರು ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಕೂಲಿ ದೊರೆಯದ ದಿನಗಳಲ್ಲಿ ಬೇವಿನ ಬೀಜ, ಹೊಂಗೆ, ಹಿಪ್ಪೆ ಬೀಜ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. 

ಯುಗಾದಿ ಸಮಯದಲ್ಲಿ ಬೇವಿನ ಮರಗಳು ಹೂ ಬಿಡುತ್ತವೆ. ಜೂನ್, ಜುಲೈನಲ್ಲಿ ಕಾಯಿಗಳು ಹಣ್ಣಾಗುತ್ತವೆ. ಪಕ್ಷಿಗಳು ಬೇವಿನ ಹಣ್ಣುಗಳನ್ನು ತಿಂದು ಬೀಜಗಳನ್ನು  ಉದುರಿಸುತ್ತವೆ. ಅಲ್ಲದೆ ತೀರ ಹಣ್ಣಾದ ಹಣ್ಣುಗಳೂ ತೊಟ್ಟು ಕಳಚಿ ಉದುರುತ್ತವೆ.   ನೆಲಕ್ಕೆ ಬಿದ್ದಿರುವ ಬೀಜ ಹಾಗೂ ಹಣ್ಣುಗಳನ್ನು ಮಹಿಳೆಯರು ಸಂಗ್ರಹಿಸುತ್ತಾರೆ.

ಬೀಜಗಳನ್ನು ಒಣಗಿಸಿದರೆ, ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆಯುವರು. ಹಿಂದೆ  ಬೇವಿನ ಮರಗಳು ಹೆಚ್ಚಾಗಿದ್ದವು. ಅಧಿಕವಾಗಿ ಬೀಜ ಸಂಗ್ರಹಿಸಲಾಗುತ್ತಿತ್ತು.  ಆದರೆ ಈಗ ಮರಗಳ ಸಂಖ್ಯೆ ಕಡಿಮೆ.

ADVERTISEMENT

ತಾಲ್ಲೂಕಿನ ಡಿ.ಪಾಳ್ಯ, ತೊಂಡೇ ಬಾವಿ, ಮಂಚೇನಹಳ್ಳಿ ಗ್ರಾಮಗಳಲ್ಲಿ ಬೇವಿನ ಮರಗಳು ವಿರಳ. ಕುರಿ, ಮೇಕೆ ಸಾಕಾಣಿಕೆದಾರರು ಸೊಪ್ಪಿಗಾಗಿ ಕೊಂಬೆ ಗಳನ್ನು ಕಡಿದು ಮರಗಳನ್ನು ಬೊಳು ಮಾಡುತ್ತಿದ್ದಾರೆ. ಆದ್ದರಿಂದ ಬೇವಿನ ಬೀಜ ಹುಡುಕಿ  ಇಪ್ಪತ್ತು ಮೂವತ್ತು ಕಿಲೋ ಮೀಟರ್ ದೂರದ ಇಡಗೂರು ದಿಣ್ಣೆ  ಮತ್ತಿತರ ಪ್ರದೇಶಗಳಿಗೆ ಮಹಿಳೆಯರು ತೆರಳುವರು.

ಈ ಹಿಂದೆ ಗ್ರಾಮೀಣ ಪ್ರದೇಶದ ಜನರು ಕಾಡು ಮೇಡುಗಳಲ್ಲಿ ಆಯಾ ಕಾಲಘಟ್ಟದಲ್ಲಿ ಕಂಡುಬರುವ ಸೀತಾಫಲ, ಬಿಕ್ಕೆ, ನೇರಳೆ, ಈಚಲು ಹಣ್ಣುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಈಗ ಬೆಟ್ಟ ಗುಡ್ಡಗಳಿಂದ ಹಣ್ಣುಗಳನ್ನು ತಂದು ಮಾರಾಟ ಮಾಡುವವರು ಇಲ್ಲವಾಗಿದ್ದಾರೆ. ಆದರೆ ಜಮೀನುಗಳಲ್ಲಿ ಹಾಗೂ ರಸ್ತೆ ಬದಿಯ ಬೇವು, ಹೊಂಗೆ ಮರಗಳಿಂದ ಬೀಜಗಳನ್ನು ಆಯ್ದು ಮಾರಾಟ ಮಾಡಿ ಜೀವನ ನಡೆಸುವುದು ಇಂದಿಗೂ ತಾಲ್ಲೂಕಿನಲ್ಲಿ ಇದ್ದಾರೆ. ಈ ಕೆಲಸವೇ ಅವರ ಬದುಕಿಗೆ ಆಧಾರವಾಗಿದೆ.

ಸಂಗ್ರಹಿಸಿರುವ ಬೇವಿನ ಬೀಜ ಗಳನ್ನು ಎಣ್ಣೆ ವ್ಯಾಪಾರಿಗಳು ಗ್ರಾಮಗಳಿಗೆ ಬಂದು 1 ಕೆ.ಜಿಗೆ ₹ 25ರಂತೆ ಖರೀದಿಸುವರು. ತಾವೇ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ ₹ 30 ದೊರೆಯುತ್ತದೆ. ಬೇವಿನ ಬೀಜಗಳಿಂದ ಬೇವಿನ ಎಣ್ಣೆ ಹಾಗೂ ಹಿಂಡಿ ತಯಾರಿಸಲಾಗುತ್ತದೆ. ಬೇವಿನ ಹಿಂಡಿಗೆ ರೈತರಿಂದ ಹೆಚ್ಚಿನ ಬೇಡಿಕೆಯಿದೆ. ರೋಗದ ಬೆಳೆಗಳಿಗೆ ಔಷಧಿಯಾಗಿ ಬೇವಿನ ಎಣ್ಣೆ ಹಾಗೂ ಮರಗಳಿಗೆ ಹಿಂಡಿಯನ್ನು  ಬಳಸುವರು. ಕೃಷಿ ಇಲಾಖೆ ಸಹಾಯಧನದಲ್ಲಿ ಹಿಂಡಿ ನೀಡುತ್ತದೆ.

***

ಬೆಳಿಗ್ಗೆ ಯಿಂದ ಸಂಜೆವರೆಗೆ ಸಂಗ್ರಹಿಸಿದರೂ 10 ಕೆ.ಜಿ ಸಂಗ್ರಹಿಸಲು ಆಗುವುದಿಲ್ಲ. ಆಟೊದಲ್ಲಿ ಇಲ್ಲಿಗೆ ಬರುತ್ತೇವೆ.  ಬೀಜ ಮಾರಾಟದಿಂದ ದಿನಕ್ಕೆ ಕನಿಷ್ಠ ₹ 250 ರಿಂದ 300 ದೊರೆಯುತ್ತದೆ.
ಗಂಗಮ್ಮ, ಡಿ.ಪಾಳ್ಯ

***

ಬೇವಿನ ಹಿಂಡಿಯನ್ನು ಮೊದಲು ಭೂಮಿಗೆ ಬೆರೆಸಬೇಕು. ನಂತರ ಬೆಳೆ ಇಟ್ಟರೆ ಇಳುವರಿ ಉತ್ತಮವಾಗಿ ಬರುತ್ತದೆ. ಬೇವಿನ ಹಿಂಡಿ ಭೂಮಿ ಫಲವತ್ತತೆ ಹೆಚ್ಚಿಸುತ್ತದೆ. ಬೆಳೆಗಳಿಗೆ  ರೋಗಗಳೂ ಬರುವುದಿಲ್ಲ.
ರಾಮಕೃಷ್ಣಪ್ಪ, ರೈತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.