ADVERTISEMENT

ಎತ್ತಿನಹೊಳೆ ಜಾರಿ ಬಗ್ಗೆ ಅನುಮಾನ ಬೇಡ: ರಮೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:17 IST
Last Updated 18 ಜುಲೈ 2017, 6:17 IST
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿದರು
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮಾತನಾಡಿದರು   

ಕೋಲಾರ: ‘ಕಾಂಗ್ರೆಸ್‌ನವರು ಎತ್ತಿನಹೊಳೆ ಯೋಜನೆ ಹಣ ತಿಂದಿದ್ದಾರೆ ಎಂದು ಅನೇಕರು ಆರೋಪ ಮಾಡಿದ್ದಾರೆ. ಎಸಿಬಿ, ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯಿಂದಾದರೂ ತನಿಖೆ ಮಾಡಿಸಿ ನಮ್ಮನ್ನು ಜೈಲಿಗೆ ಹಾಕಿದರೂ ಚಿಂತೆಯಿಲ್ಲ. ಆದರೆ, ಯಾವುದೇ ವಿಘ್ನವಿಲ್ಲದೆ ಯೋಜನೆ ಮುಂದುವರಿಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿ ಕುರಿತು ಅವಿಭಜಿತ ಕೋಲಾರ ಜಿಲ್ಲೆಯ ಸಾರ್ವಜನಿಕರಿಗೆ ಮಾಹಿತಿ ನೀಡಲು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಯೋಜನೆ ಅನುಷ್ಠಾನದ ಬಗ್ಗೆ ಜನರಿಗೆ ಯಾವುದೇ ಅನುಮಾನ ಬೇಡ’ ಎಂದು ಭರವಸೆ ನೀಡಿದರು.

‘ಯೋಜನೆ ಪೂರ್ಣಗೊಳ್ಳಲು 4 ವರ್ಷ ಕಾಲಾವಕಾಶ ಬೇಕೆಂದು ಸರ್ಕಾರ ಹೇಳಿದೆ. ಆದರೆ, 3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇವೆ. ಯೋಜನೆಗೆ ಎದುರಾಗಿದ್ದ ತಾಂತ್ರಿಕ ಅಡೆತಡೆ ಬಗೆಹರಿಸದಿದ್ದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇನೆ ಎಂದು ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದೆ. ಜನರಿಗೆ ಟೋಪಿ ಹಾಕಿ ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

ADVERTISEMENT

ಸಂಶಯ ಸಹಜ: ‘ಯಾವುದೇ ಯೋಜನೆ ಅಥವಾ ಅಭಿವೃದ್ಧಿ ಕೆಲಸಕ್ಕೆ ಸಂಶಯ ಸಹಜ. ಅವುಗಳನ್ನು ನಿವಾರಣೆ ಮಾಡುವುದು ಸರ್ಕಾರದ ಜವಾಬ್ದಾರಿ. ನಮ್ಮ ನೋವು ಅರ್ಥ ಮಾಡಿಕೊಳ್ಳದೆ ಎಲ್ಲಿಯೋ ಕುಳಿತು ಸಂಶಯ ವ್ಯಕ್ತಪಡಿಸಿ ಯೋಜನೆಗೆ ಅಡ್ಡಿಪಡಿಸಲು ಯತ್ನಿಸಿದರೆ ವಿಪರೀತ ಕೋಪ ಬರುತ್ತದೆ’ ಎಂದರು.

‘ಯೋಜನೆ ವಿಚಾರವಾಗಿ ಮೈಸೂರಿನ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದರು. ಅವರಿಗೂ ಇದಕ್ಕೂ ಏನು ಸಂಬಂಧ. ನಮ್ಮ ಕಷ್ಟ ಅವರಿಗೆ ಎಲ್ಲಿ ತಿಳಿಯುತ್ತದೆ. ಇಲ್ಲಿ ಗುಬ್ಬಚ್ಚಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ’ ಎಂದು ವಿಷಾದಿಸಿದರು.

‘ಸಾಲಕ್ಕೆ ಹೆದರಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಯುವಕರು ಜವಾನರಾಗಿ ಕೆಲಸ ಮಾಡುವ ಪರಿಸ್ಥಿತಿ ಇದೆ. ನಮ್ಮ ಪ್ರಯತ್ನದಲ್ಲಿ ಬದ್ಧತೆ ಇದೆಯೆ ಹೊರತು ಸಡಿಲತೆ ಇಲ್ಲ. ಯೋಜನೆಯಿಂದ ನೀರು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು. ಕರಾವಳಿ ಭಾಗದ 50 ವರ್ಷಗಳ ಇತಿಹಾಸ ಪರಿಶೀಲಿಸಿದಾಗ ವಾರ್ಷಿಕ 500 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತಿರುವುದು ಸಾಬೀತಾಗಿದೆ’ ಎಂದು ವಿವರಿಸಿದರು.

ಸುಲಭವಲ್ಲ: ‘ಇತ್ತೀಚೆಗೆ ಮಂಗಳೂರಿಗೆ ಹೋಗಿದ್ದಾಗ ಕೆಲವರು ನನ್ನನ್ನು ಅಡ್ಡಗಟ್ಟಿ, ಎತ್ತಿನಹೊಳೆ ಯೋಜನೆ ಯಿಂದ ತಮ್ಮಲ್ಲಿನ ಮೀನುಗಳು ಸತ್ತು ಹೋಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಹ ವಿರೋಧ ಎದುರಿಸುವುದು ಸುಲಭವಲ್ಲ. 2 ಸಾವಿರ ಎಕರೆ ಭೂಸ್ವಾಧೀನ ಮಾಡಿ, ಯೋಜನೆಯಿಂದ ಮುಳುಗಡೆಯಾಗುವ 7 ಗ್ರಾಮಗಳ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇವೆಲ್ಲಾ ಯಾರಿಗೂ ಅರ್ಥವಾಗುತ್ತಿಲ್ಲವೇ’ ಎಂದು ಅವರು ಹೇಳಿದರು.

‘34 ಎಕರೆ ವಶಪಡಿಸಿಕೊಳ್ಳುವಾಗಲೇ ಸಾಕಷ್ಟು ತೊಂದರೆ ನೀಡಿದ್ದಾರೆ. ಒಂದು ಮರ ಕಡಿದಿದ್ದಕ್ಕೆ ಕೋರ್ಟ್‌ಗೆ ಹೋಗ್ತಾರೆ. ನ್ಯಾಯಾಲಯದ ಆದೇಶ ಬರುವವರೆಗೂ ಜೀವ ಕೈಯಲ್ಲಿ ಹಿಡಿದುಕೊಂಡಿದ್ದೆವು. 75 ಲಕ್ಷ ಜನರಿಗೆ ನೀರು ಕೊಡುವ ಉದ್ದೇಶಕ್ಕಾಗಿ ನೋವು ನುಂಗಿಕೊಂಡು ಹೋಗುತ್ತಿದ್ದೇವೆ. ಇದಕ್ಕೆ ಕಾರಣ ವೈಯಕ್ತಿಕ ಪ್ರತಿಷ್ಠೆಯಿಲ್ಲ, ನೀರು ಕೊಡುವುದಷ್ಟೇ’ ಎಂದು ಸ್ಪಷ್ಟಪಡಿಸಿದರು.

ಜಾಲಿ ಕಾಣಲಿಲ್ಲ: ‘ಜಿಲ್ಲೆಯ ಕೆರೆಗಳಲ್ಲಿ 10 ವರ್ಷಗಳಿಂದ ನೀರಿಲ್ಲ. ಕೆರೆಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಜಾಲಿ ಮರಗಳಿವೆ. ಆದರೆ, ಇಷ್ಟು ವರ್ಷಗಳಿಂದ ಜಾಲಿ ಯಾರಿಗೂ ಕಾಣಲಿಲ್ಲ. ಅದರ ನಿರ್ಮೂಲನೆಗೆ ಹೋರಾಟವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎರಡೂ ಜಿಲ್ಲೆಯಲ್ಲಿ ಫ್ಲೋರೈಡ್‌ ಸಮಸ್ಯೆಯಿಂದ ಪರಿಸ್ಥಿತಿ ಮಿತಿ ಮೀರಿ ಅನೇಕರು ಕಾಯಿಲೆಗೆ ತುತ್ತಾಗಿದ್ದಾರೆ. ಅದನ್ನು ನೋಡಲಾಗದೆ ಕೇಂದ್ರ ಸರ್ಕಾರದ ಆದೇಶದನ್ವಯ 1,000 ಜನಸಂಖ್ಯೆ ಇರುವ ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ಘಟಕ ನೀಡಲು ಸರ್ಕಾರ ಮುಂದಾಯಿತು. 500 ಜನಸಂಖ್ಯೆ ಇರುವ ಗ್ರಾಮಗಳಿಗೂ ನೀರಿನ ಘಟಕ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತಂದು, ಅನುಕೂಲ ಮಾಡಿಕೊಟ್ಟಿದ್ದೇನೆ’ ಎಂದು ವಿವರಿಸಿದರು.

ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ಶಾಸಕ ಕೆ.ಎಸ್‌.ಮಂಜುನಾಥಗೌಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕ ಎಂ.ಸಿ.ಸುಧಾಕರ್‌ರೆಡ್ಡಿ ಸಭೆಯಲ್ಲಿ ಪಾಲ್ಗೊಂಡಿದ್ದರು.

**

ಕೆ.ಸಿ.ವ್ಯಾಲಿ: ರಸ್ತೆ ಅಗೆಯುತ್ತಿಲ್ಲ
‘ಕೆ.ಸಿ.ವ್ಯಾಲಿ ಯೋಜನೆಗೆ ಕೆಲವರು 3 ತಿಂಗಳಿಂದ ಅಡ್ಡಿಪಡಿಸುತ್ತಿದ್ದಾರೆ. ಇಲ್ಲದಿದ್ದರೆ ಈ ವೇಳೆಗಾಗಲೆ ನೀರು ಬರುತ್ತಿತ್ತು. ಯೋಜನೆ ಕಾಮಗಾರಿಗಾಗಿ ಮುಖ್ಯರಸ್ತೆ ಅಥವಾ ಸರ್ವಿಸ್‌ ರಸ್ತೆ ಅಗೆಯುತ್ತಿಲ್ಲ. ಸರ್ವಿಸ್‌ ರಸ್ತೆ ಪಕ್ಕ ಗುಂಡಿ ತೋಡಿ ಪೈಪ್‌ಲೈನ್‌ ಕಾಮಗಾರಿ ನಂತರ ಮುಚ್ಚಿ ಕೊಡುವುದಾಗಿ ಹೇಳಿದರೂ ಕೇಳದೆ ತೊಂದರೆ ನೀಡುತ್ತಿದ್ದಾರೆ’ ಎಂದು ಸಚಿವರು ಕಿಡಿಕಾರಿದರು.

‘ಕೆ.ಸಿ.ವ್ಯಾಲಿ ಯೋಜನೆಯಿಂದ ಆ.15ರೊಳಗೆ ಜಿಲ್ಲೆಗೆ ನೀರು ಹರಿಸದಿದ್ದರೆ ಸಚಿವ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದೆ. ಜಿಲ್ಲೆಗೆ ನೀರು ತರುವುದು ನನಗೆ ಮುಖ್ಯ. ಆದರೆ, ಕೆಲವರಿಗೆ ನಾನು ಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಮುಖ್ಯ. ಜನರ ಋಣ ತೀರಿಸುವ ಪ್ರಯತ್ನಕ್ಕೆ ಇಳಿದಿದ್ದು, ಜುಲೈ 20ರಿಂದ ನಾನೇ ಮುಂದೆ ನಿಂತು ಪೈಪ್‌ಲೈನ್ ಹಾಕಿಸುತ್ತೇನೆ. ಯಾರು ಏನು ಮಾಡ್ತಾರೆ ನೋಡೋಣ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.