ADVERTISEMENT

ಏ.16ಕ್ಕೆ ಕಾಮಗಾರಿ ಸ್ಥಳಕ್ಕೆ ಪ್ರವಾಸ

ಕೆರೆಗಳಿಗೆ ನೀರು ತುಂಬಿಸುವ ಕೆಸಿ ವ್ಯಾಲಿ ಯೋಜನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:43 IST
Last Updated 14 ಏಪ್ರಿಲ್ 2017, 4:43 IST

ಕೋಲಾರ: ‘ಬಯಲು ಸೀಮೆ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಕೈಗೆತ್ತಿಕೊಂಡಿರುವ ಕೆಸಿ ವ್ಯಾಲಿ ಯೋಜನೆಯ ವಾಸ್ತವವನ್ನು ಸಾರ್ವಜನಿಕರಿಗೆ ತಿಳಿಸಲು ಏ.16ರಂದು ಕಾಮಗಾರಿ ಸ್ಥಳಕ್ಕೆ ಪ್ರವಾಸ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಯೋಜನೆ ತಯಾರಿಸಿ, ತಜ್ಞರ ವರದಿ, ಆಡಳಿತಾತ್ಮಕ, ಆರ್ಥಿಕ ಮಂಜೂರಾತಿ ಪಡೆದು ಜಿಲ್ಲೆಯ 126 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶರವೇಗದಿಂದ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಯ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರಕ್ಕೆ ಬದ್ದತೆ ಇದೆ. ಕೆಸಿ ವ್ಯಾಲಿ, ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳ ಕಾಮಗಾರಿಗಳು ಚಾಲ್ತಿಯಲ್ಲಿವೆ. ಕೆಸಿ ವ್ಯಾಲಿ ಯೋಜನೆಯನ್ನು ಮುಂದಿನ ಆಗಸ್ಟ್ 15ಕ್ಕೆ ಉದ್ಘಾಟಿಸುವುದು ಖಚಿತ’ ಎಂದು ಹೇಳಿದರು.

‘ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸದ ವಿರೋಧ ಪಕ್ಷಗಳು ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೂ ಒಂದು ಮಿತಿ ಇರಬೇಕು. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಯ ಅವರಲ್ಲಿ ಶುರು ಆಗಿರಬೇಕು’ ಎಂದು ಭವಿಷ್ಯ ನುಡಿದರು.

‘ಮೇಕೆದಾಟು ಯೋಜನೆ ನೀರಿನ ಲಭ್ಯತೆ ಅಂಶಗಳ ಅಧ್ಯಯನ ನಡೆದಿದೆ. ವರದಿ ಬಂದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ. ನೀರು ಕೋಲಾರದಿಂದಲೇ ಹರಿಯುತ್ತದೆ ಬಾಯಿಗೆ ಬಂದಂತೆ ಮಾತನಾಡೋದನ್ನು ಬಿಡಬೇಕು’ ಎಂದು ತೀರುಗೇಟು ನೀಡಿದರು.

‘ಕೆಸಿ ವ್ಯಾಲಿ ಯೋಜನೆಯ ಕಾಮಗಾರಿ ಬೆಳ್ಳಂದೂರು, ನರಸಾಪುರ, ಹೊಳಲಿ, ಶಿವಾರಪಟ್ಟಣ, ಜನ್ನಘಟ್ಟ ಕೆರೆ, ಅಗ್ರಹಾರ ಬಳಿ ಕಾಮಗಾರಿ ಪ್ರತಿಯಲಿದೆ. ಕೆಲಸ ನಡೆಯುತ್ತಿರುವ ವೇಗ ಗಮನಿಸಿ ಸಾರ್ವಜನಿಕರಿಗೆ ತಿಳಿಸಲು ಪ್ರವಾಸ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಯೂನಿವರ್ಸಲ್ ಹೆಲ್ತ್ ಕವರೇಜ್: ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಯ ಮೂಲಕ ರಾಜ್ಯದ 1.5 ಕೋಟಿ ಕುಟುಂಬಗಳಿಗೂ ಆಧಾರ್ ಕಾರ್ಡ್ ಆಧಾರಿತವಾದ ಯೂನಿವರ್ಸಲ್ ಹೆಲ್ತ್ ಕವರೇಜ್ ಒದಗಿಸಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ತಿಳಿಸಿದರು.

‘ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ, ಯಶಸ್ವಿನಿ, ಎಪಿಎಲ್, ಬಿಪಿಎಲ್, ಜನಪ್ರತಿನಿಧಿಗಳಿಗೆ ಚಿಕಿತ್ಸೆ ಹೀಗೆ ಎಲ್ಲವೂ ತೆಗೆದು ಹಾಕಿ ಯೂನಿವರ್ಸಲ್ ಹೇಲ್ತ್ ಕೇರ್ ಮೂಲಕ ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘₹ 500 ಕೋಟಿ ವೆಚ್ಚ ಮಾಡಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿದರೆ ಆ ಭಾಗದ ಜನರಿಗೆ ಲಾಭ ಸಿಗುತ್ತದೆ ಎಂದು ಅರಿತು ಮೊದಲು ₹ 120 ಕೋಟಿ ವೆಚ್ಚದಿಂದ ಮುಂದೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಉದ್ದೇಶಿಸಿರುವ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿ ಸಮಗ್ರವಾಗಿ ಎಂಆರ್‍ಐ ಸ್ಕ್ಯಾನ್, ಕಿಡ್ನಿ, ಮೆದುಳು, ಕ್ಯಾನ್ಸರ್, ಹೃದಯ, ಲಿವರ್ ಸಂಬಂಧಿತ ಎಲ್ಲಾ ಕಾಯಿಲೆಗಳಿಗೂ ಚಿಕಿತ್ಸೆ ಒದಗಿಸುವ ಆಲೋಚನೆ ಸರ್ಕಾರದಾಗಿದೆ’ ಎಂದು ವಿವರಿಸಿದರು.

ಆಯುರ್ವೇದ ಆಸ್ಪತ್ರೆ: ‘ಆರೋಗ್ಯ ಇಲಾಖೆಗೆ ಸೇರಿರುವ ಕೋಲಾರದ ಸ್ಯಾನಿಟೋರಿಯಂ ಹಳೇ ಕ್ಷಯಾ ರೋಗ ಆಸ್ಪತ್ರೆ ಜಾಗದಲ್ಲಿ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಆರಂಭಿಸಲು ಉದ್ದೇಶಿಸಲಾಗಿದೆ. 100 ಹಾಸಿಗೆ ತಾಯಿ-ಮಗುವಿನ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗೆ ಶೀಘ್ರದಲ್ಲೆ ಗುದ್ದಲಿ ಪೂಜೆ ನೆರವೇರಿಸಲಾಗುವುದು’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದೇಗೌಡ, ನಿರ್ದೇಶಕ ಸೋಮಣ್ಣ, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್ ಗೋಷ್ಠಿಯಲ್ಲಿ ಹಾಜರಿದ್ದರು.

ಉಪ ಚುನಾವಣೆ; ಶ್ರೀನಿವಾಸ್‌ಪ್ರಸಾದ್‌ಗೆ ಸಂದೇಶ
‘ನಂಜನಗೂಡು ಉಪ ಚುನಾವಣೆಯಲ್ಲಿ ಮತದಾರರು ಶ್ರೀನಿವಾಸ್‌ ಪ್ರಸಾದ್‌ಗೆ ಒಳ್ಳೆಯ ಸಂದೇಶವನ್ನೇ ನೀಡಿದ್ದಾರೆ’ ಎಂದು ರಮೇಶ್‌ಕುಮಾರ್ ತಿಳಿಸಿದರು.

‘ನಂಜಗೂಡು ಉಪಚುನಾವಣೆ ಬೇಕಾಗಿರಲಿಲ್ಲ. ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸರ್ಕಾರದ ಮೇಲೆ ಮತದಾರರಿಗೆ ನಂಬಿಕೆ ಇರುವುದರಿಂದಲೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಹಣ ಪ್ರಿಂಟ್ ಮಾಡುವ ಯಂತ್ರ ಇಟ್ಟುಕೊಂಡು ₹ 2 ಸಾವಿರ ನೋಟು ಮುದ್ರಿಸಿ ಐದು ರಾಜ್ಯಗಳ ಚುನಾವಣೆ ನಡೆಸಿದ್ದರು. ಕೇಂದ್ರ ಸರ್ಕಾರದ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಪ್ರಿಂಟ್ ಮಾಡುವ ಯಂತ್ರ ಇಟ್ಟುಕೊಂಡು ಉಪ ಚುನಾವಣೆ ನಡೆಸಿಲ್ಲ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸರ್ಕಾರದ ಸಾಧನೆಯೇ ಕಾರಣವಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಮತದಾರರು ಬಿಜೆಪಿಗೂ ಒಳ್ಳೆಯ ಸಂದೇಶವನ್ನೇ ನೀಡಿದ್ದಾರೆ. ಇನ್ನಾದರೂ ಬಿಜೆಪಿಯವರು ಕೆಳಮಟ್ಟದ ರಾಜಕೀಯ ನಡೆಸುವುದನ್ನು ಬಿಡಲಿ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.