ADVERTISEMENT

ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:46 IST
Last Updated 9 ನವೆಂಬರ್ 2017, 8:46 IST
ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೋಲಾರದಲ್ಲಿ ಬುಧವಾರ ಸಂಸದ ಕೆ.ಎಚ್‌.ಮುನಿಯಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೋಲಾರದಲ್ಲಿ ಬುಧವಾರ ಸಂಸದ ಕೆ.ಎಚ್‌.ಮುನಿಯಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.   

ಕೋಲಾರ: ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಒಂದು ವರ್ಷವಾದ ಕಾರಣ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಬುಧವಾರ ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಿದರು. ಗಾಂಧಿವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಂಸದ ಕೆ.ಎಚ್‌.ಮುನಿಯಪ್ಪ ನೇತೃತ್ವದಲ್ಲಿ ಬೃಹತ್‌ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರವು ನೋಟು ಅಮಾನ್ಯೀಕರಣಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ. ಈ ಅವೈಜ್ಞಾನಿಕ ಕ್ರಮದಿಂದ ದೇಶದ ಆರ್ಥಿಕ ಪರಿಸ್ಥಿತಿ ಅನಾಥವಾಗಿದ್ದು, ಅರಾಜಕತೆ ಸೃಷ್ಟಿಯಾಗಿದೆ’ ಎಂದು ಮುನಿಯಪ್ಪ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ವಿತ್ತ ಸಚಿವರಿಗೆ ಮಾಹಿತಿ ನೀಡದೆ ನೋಟು ಅಮಾನ್ಯೀಕರಣ ಮಾಡಿದ್ದು ಆತಂಕಕಾರಿ ಬೆಳವಣಿಗೆ. ಆದರೆ ದೇಶದ 25 ಬೃಹತ್ ಉದ್ಯಮಿಗಳಿಗೆ ಮಾತ್ರ ಅಮಾನ್ಯೀಕರಣದ ವಿಷಯ ತಿಳಿಸಿದ್ದ ಮೋದಿ ವಾರಕ್ಕೂ ಮೊದಲೇ ಅವರ ಕಪ್ಪು ಹಣ ಬದಲಾವಣೆ ಮಾಡಿಸಿದ್ದರು ಎಂದು ಆರೋಪಿಸಿದರು.

ADVERTISEMENT

ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ್ದರಿಂದ ಭಯೋತ್ಪಾದನಾ ಚಟುವಟಿಕೆಗಳು ನಿಗ್ರಹವಾಗುತ್ತವೆ, ವಿದೇಶದಲ್ಲಿನ ಕಪ್ಪು ಹಣ ಬರುತ್ತದೆ ಎಂದು ಮೋದಿ ಬೊಗಳೆ ಹೊಡೆದಿದ್ದರು. ಆದರೆ ಅದ್ಯಾವುದು ಆಗಲಿಲ್ಲ. ಹಳೆಯ ನೋಟು ಬದಲಿಸಿಕೊಳ್ಳಲು ಬ್ಯಾಂಕ್‌ಗಳ ಮುಂದೆ ದಿನಗಟ್ಟಲೇ ಸರದಿ ಸಾಲಿನಲ್ಲಿ ನಿಂತ ಜನಸಾಮಾನ್ಯರು ಸಂಕಷ್ಟ ಎದರಿಸಬೇಕಾಯಿತು ಎಂದು ದೂರಿದರು.

ನೋಟು ಅಮಾನ್ಯೀಕರಣ ಘೋಷಣೆ ಮಾಡಿದ ನ.8ರ ದಿನವು ದೇಶಕ್ಕೆ ಕರಾಳ ದಿನವಾಗಿದೆ. ಸರಕು ಮತ್ತು ಸೇವಾ ತೆರಿಗೆ ಕ್ರಮವು ದೇಶವನ್ನು ಮತ್ತಷ್ಟು ದಿವಾಳಿ ಮಾಡಿದೆ. ಕೇಂದ್ರದ ದುಡುಕು ನಿರ್ಧಾರದಿಂದ ರೈತರು, ಕಾರ್ಮಿಕರು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಅಧೋಗತಿಗೆ ತಳ್ಳಿದೆ: ‘ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣದ ಹೆಸರಿನಲ್ಲಿ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ. ಎಲ್ಲಾ ಕ್ಷೇತ್ರಗಳಲ್ಲೂ ತೀವ್ರ ಹಿನ್ನಡೆಯಾಗಿದ್ದು, ಕೇಂದ್ರವು ತನ್ನ ವೈಫಲ್ಯ ಒಪ್ಪಿಕೊಳ್ಳಲು ಸಿದ್ಧವಿಲ್ಲ’ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಆರ್‌.ಸುದರ್ಶನ್‌ ಟೀಕಿಸಿದರು.

ದೇಶದ ಆರ್ಥಿಕ ಸ್ಥಿತಿಗತಿ ಹಾಗೂ ಜನಜೀವನ ಸುಧಾರಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಆರ್ಥಿಕ ಉದಾರೀಕರಣ ಜಾರಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮೋದಿ ವಿಫಲರಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಆಡಳಿತವಿರುವ ರಾಜ್ಯಗಳ ಅಭಿವೃದ್ಧಿ ವಿಚಾರದಲ್ಲಿ ಮೋದಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದು.

ಬಿಜೆಪಿಯುವರು ಕಾಂಗ್ರೆಸ್ ಮುಕ್ತ ಭಾರತದ ಆಲೋಚನೆಯಲ್ಲಿ ಹೊರಟಿದ್ದಾರೆ. ಆದರೆ ಕಾಂಗ್ರೆಸ್‌ ನಾವು ಹಸಿವು ಮುಕ್ತ ಕರ್ನಾಟಕದ ಆಲೋಚ ನೆಯಲ್ಲಿ ಮುನ್ನಡೆಯುತ್ತಿದೆ. ಬಿಜೆಪಿ ಮುಖಂಡರಿಗೆ ಜನರೇ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಬುಡ ಮೇಲಾಗಿದೆ: ‘ಮೋದಿಯವರ ನೀತಿಗೆಟ್ಟ ಧೋರಣೆಗಳಿಂದ ದೇಶದ ಆರ್ಥಿಕ ವ್ಯವಸ್ಥೆ ಬುಡ ಮೇಲಾಗಿದೆ. ಶೇ 8.7ರಷ್ಟಿದ್ದ ಜಿಡಿಪಿ 5.7ಕ್ಕೆ ಕುಸಿದಿದೆ’ ಎಂದು ಎಂಎಸ್‍ಐಎಲ್ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್‌ಕುಮಾರ್‌ ದೂರಿದರು.

’ಮೋದಿಯು ಜನರನ್ನು ಮಾತಿನಲ್ಲಿ ಮೋಡಿ ಮಾಡಲು ಹೊರಟಿದ್ದಾರೆ. ಉದ್ಯಮಗಳ ಹೆಸರಿನಲ್ಲಿ ದೇಶವನ್ನು ಹಾಳು ಮಾಡಿದ್ದು, ಜನ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಬೀದಿ ಪಾಲಾಗಿದ್ದಾರೆ: ’ನೋಟು ಅಮಾನ್ಯೀಕರಣದಿಂದ ಈಗಾಗಲೇ ಸಾಕಷ್ಟು ಕಂಪೆನಿಗಳು ವಿದೇಶಕ್ಕೆ ಹೋಗಿವೆ. ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ದೇಶ ಹಾಳು ಮಾಡುವುದೇ ಕೇಂದ್ರದ ಉದ್ದೇಶ ವಾಗಿದೆ’ ಎಂದು ಮುಳಬಾಗಿಲು ಶಾಸಕ ಕೊತ್ತೂರು ಜಿ.ಮಂಜುನಾಥ್ ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ, ರಾಜ್ಯ ಕಾಂಗ್ರೆಸ್‌ ಮಹಿಳಾ ಘಟಕದ ಉಪಾಧ್ಯಕ್ಷೆ ರೂಪಾ, ಮಾಜಿ ಸಚಿವ ನಿಸಾರ್ ಅಹಮ್ಮದ್, ನಿವೃತ್ತ ಐಎಎಸ್ ಅಧಿಕಾರಿ ಜಮೀರ್‌ ಪಾಷಾ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ಪ್ರಸಾದ್‌ಬಾಬು, ಸಲ್ಲಾವುದ್ದೀನ್‌ ಬಾಬು ಪಾಲ್ಗೊಂಡಿದ್ದರು.
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.