ADVERTISEMENT

ಕಾಂಗ್ರೆಸ್‌ ಬಾಗಿಲು ಮುಚ್ಚಿ ಹೋಗಿದೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 9:15 IST
Last Updated 28 ನವೆಂಬರ್ 2017, 9:15 IST
ಎಸ್‌.ಎನ್‌.ನಾರಾಯಣಸ್ವಾಮಿ
ಎಸ್‌.ಎನ್‌.ನಾರಾಯಣಸ್ವಾಮಿ   

ಕೋಲಾರ: ‘ಶಾಸಕ ವರ್ತೂರು ಪ್ರಕಾಶ್‌ ಅವರದು ಬ್ಲಾಕ್ ಮೇಲ್ ರಾಜಕಾರಣ. ಅವರ ಬೆದರಿಕೆಗೆ ನಾನು ಬಗ್ಗುವುದಿಲ್ಲ. ಅವರ ಪಾಲಿಗೆ ಕಾಂಗ್ರೆಸ್‌ ಬಾಗಿಲು ಮುಚ್ಚಿ ಹೋಗಿದೆ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್, ಮಾಜಿ ಸಚಿವ ನಸೀರ್ ಅಹಮ್ಮದ್‌ ಸೇರಿದಂತೆ ಎಲ್ಲ ಸ್ಥಳೀಯ ಮುಖಂಡರು ವರ್ತೂರು ಪ್ರಕಾಶ್‌ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಬೇಡವೆಂದು ತೀರ್ಮಾನ ಮಾಡಿದ್ದಾರೆ. ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದರು.

ಸಂಸದ ಕೆ.ಎಚ್.ಮುನಿಯಪ್ಪ ಸಹ ವರ್ತೂರು ಪ್ರಕಾಶರ ಪರವಾಗಿಲ್ಲ. ಜನಪ್ರತಿನಿಧಿಗಳ ಮಾತಿನ ಧಾಟಿ ಸರಿಯಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಇರಬೇಕು. ಆದರೆ ಆತನಿಗೆ ಈ ಯಾವುದೇ ಅರ್ಹತೆಗಳಿಲ್ಲ. ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಸುವಂತೆ ಆತ ತನಗೆ ದುಂಬಾಲು ಬಿದ್ದಿದ್ದ. ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರು.

ADVERTISEMENT

ಜನ ಸಹಿಸುತ್ತಾರೆಯೇ: ವರ್ತೂರು ಪ್ರಕಾಶ್‌ ಕೋಲಾರಕ್ಕೆ ಹೇಗೆ ಬಂದರು, ಆರಂಭದಲ್ಲಿ ಅವರು ಯಾರ ಬೆಂಬಲ ಪಡೆದು ಇಲ್ಲಿಗೆ ಕಾಲಿಟ್ಟರು ಎನ್ನುವುದು ಎಲ್ಲರಿಗೂ ಗೊತ್ತು. ಈಗ ಅವರ ವಿರುದ್ಧವೇ ತಿರುಗಿಬಿದ್ದರೆ ಜನ ಸಹಿಸುತ್ತಾರೆಯೇ ಎಂದು ಪ್ರಶ್ನಿಸಿದರು.

‘ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ (ಆರ್‌ಡಿಪಿಆರ್‌) ಹಣ ಬಂದಿದೆಯೇ ಹೊರತು ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವುದೇ ಯೋಜನೆಯಲ್ಲಿ ಅನುದಾನ ಕೊಟ್ಟಿಲ್ಲ. ಆದರೆ ವರ್ತೂರು ಪ್ರಕಾಶ್‌ ಮುಖ್ಯಮಂತ್ರಿಯಿಂದ ಕ್ಷೇತ್ರಕ್ಕೆ ₹ 100 ಕೋಟಿ ಬಿಡುಗಡೆ ಮಾಡಿಸಿರುವುದಾಗಿ ಸುಳ್ಳು ಹೇಳುತ್ತಾ ಜನರನ್ನು ಯಾಮಾರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಯಾವುದೇ ರಾಜಕಾರಣಿ ಜಾತಿ ನೆಚ್ಚಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಜನಪ್ರತಿನಿಧಿಗಳಿಗೆ ಎಲ್ಲ ಜಾತಿಗಳ ಸಹಕಾರ ಬೇಕು. ವರ್ತೂರು ಪ್ರಕಾಶ್ ಕುರುಬ ಸಮುದಾಯದಿಂದ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಅವರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.

ದಲಿತ ಸಮುದಾಯ ಸೇರಿದಂತೆ ಎಲ್ಲ ಜಾತಿಗಳು ಬೇಕು. ದಲಿತರ ಮತಗಳಿಲ್ಲದೆ ಅವರು ಹೇಗೆ ಗೆಲ್ಲುತ್ತಾರೊ ನೋಡುತ್ತೇನೆ. ಇತ್ತೀಚಿನ ಬೆಳವಣಿಗೆ ನೋಡಿದರೆ ಕುರುಬ ಸಮುದಾಯವೇ ಅವರ ಹಿಂದೆ ಇಲ್ಲ. ಹಿರಿಯರು ಹೇಳಿರುವಂತೆ ಕೆಡಿಸಬೇಡ, ಮತ್ತೊಬ್ಬರನ್ನು ಕೆಡಿಸಲು ಹೋದರೆ ನೀನೇ ಕೆಟ್ಟು ಹೋಗುತ್ತೀಯಾ ಎಂಬಂತಾಗಿದೆ ವರ್ತೂರು ಪ್ರಕಾಶ್‌ರ ಸ್ಥಿತಿ ಎಂದು ವ್ಯಂಗವಾಡಿದರು.

* * 

ಕಾಂಗ್ರೆಸ್ ಉತ್ತಮ ಆಡಳಿತ ನೀಡಿದೆ. ಸಿದ್ದರಾಮಯ್ಯ ಜನಪರವಾಗಿ ಕೆಲಸ ಮಾಡಿದ್ದಾರೆ. ಸರ್ಕಾರ ಅಥವಾ ಮುಖ್ಯಮಂತ್ರಿ ತಪ್ಪು ಮಾಡಿದ್ದರೆ ತೋರಿಸಲಿ
ಎಸ್‌.ಎನ್‌.ನಾರಾಯಣಸ್ವಾಮಿ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.