ADVERTISEMENT

ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮೇ 2017, 5:25 IST
Last Updated 26 ಮೇ 2017, 5:25 IST

ಕೋಲಾರ: ರಾಜ್ಯ ಸರ್ಕಾರ ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಪಡಿಸದೆ ವಚನಭ್ರಷ್ಟವಾಗಿದೆ ಎಂದು ಆರೋಪಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪೊರಕೆ ಚಳವಳಿ ನಡೆಸಿದರು.

ನಗರದ ನಚಿಕೇತ ವಿದ್ಯಾರ್ಥಿನಿಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪೊರಕೆಗಳೊಂದಿಗೆ ಮೆರವಣಿಗೆ ನಡೆಸಿದ ಸದಸ್ಯರು, ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ 45,000ಕ್ಕೂ ಹೆಚ್ಚು ಪೌರ ಕಾರ್ಮಿಕರು ಕನಿಷ್ಠ ಸೌಲಭ್ಯಗಳಿಲ್ಲದೆ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವಾ ಭದ್ರತೆ ಇಲ್ಲದೆ ಅತಂತ್ರವಾಗಿರುವ ಇವರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆ ಪದ್ಧತಿಯಡಿ ಪೌರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪು ನೀಡಿದೆ. ಆದರೂ ಸರ್ಕಾರ ಈ ತೀರ್ಪು ಉಲ್ಲಂಘಿಸಿ ಗುತ್ತಿಗೆ ಪದ್ಧತಿಯಡಿ ಪೌರ ಕಾರ್ಮಿಕರನ್ನು ನೇಮಿಸಲು ಪುನಃ ಟೆಂಡರ್ ಕರೆದಿದೆ’ ಎಂದು ಸಮಿತಿಯ ರಾಜ್ಯ ಘಟಕದ ಸಂಚಾಲಕಿ ಎಂ.ಪದ್ಮಾ ಹೇಳಿದರು.

ADVERTISEMENT

ಕಾನೂನುಬಾಹಿರ ಗುತ್ತಿಗೆ ಪದ್ಧತಿ ರದ್ದುಪಡಿಸುವಂತೆ ಪೌರ ಕಾರ್ಮಿಕರು ಅನೇಕ ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. 2017ರ ಮಾರ್ಚ್ ಅಂತ್ಯದೊಳಗೆ ವಿಶೇಷ ನಿಯಮಾವಳಿ ರೂಪಿಸಿ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ರದ್ದುಪಡಿಸುವುದಾಗಿ ಘೋಷಿಸಿದ್ದರು. ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ವರದಿ ಮೂಲೆಗುಂಪು: ದೇಶದ ಹರಿಯಾಣ ಮತ್ತು ಪಂಜಾಬ್ ರಾಜ್ಯದ ಮಾದರಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ಅಧ್ಯಯನ ನಡೆಸಿದ ತಂಡವು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಆದರೆ, ಸರ್ಕಾರ ಆ ವರದಿಯನ್ನು ಮೂಲೆಗುಂಪು ಮಾಡಿದೆ. ಸರ್ಕಾರಕ್ಕೆ ಪೌರ ಕಾರ್ಮಿಕರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಧರಣಿನಿರತರು ದೂರಿದರು.

ಸುಪ್ರೀಂ ಕೋರ್ಟ್‌ ಮತ್ತು ರಾಜ್ಯ ಹೈಕೋರ್ಟ್‌ ವಿಭಾಗೀಯ ಪೀಠದ ತೀರ್ಪಿನಂತೆ ಸರ್ಕಾರ ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು. ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಜತೆಗೆ ಮೇಲ್ವಿಚಾರಕರು, ಕಸದ ವಾಹನಗಳ ಚಾಲಕರು, ನೀರಗಂಟಿಗಳು ಮತ್ತು ಒಳಚರಂಡಿ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರಾದ ನಾಗೇಶ್, ಕೆ.ಎಂ. ಶ್ರೀನಿವಾಸ್, ಮಣಿಮಾಲಾ, ವೈ.ರಾಜು, ರೂಪಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.