ADVERTISEMENT

ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಿ

ಬೆಸ್ಕಾಂ ಗ್ಯಾಂಗ್‌ಮನ್‌, ಸೇವಾ ಕೇಂದ್ರದ ಆಪರೇಟರ್‌ಗಳ ಧರಣಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:37 IST
Last Updated 18 ಏಪ್ರಿಲ್ 2017, 5:37 IST
ಕೋಲಾರ: ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಸ್ಕಾಂ ಗ್ಯಾಂಗ್‌ಮನ್‌ ಮತ್ತು ಸೇವಾ ಕೇಂದ್ರದ ಆಪರೇಟರ್‌ಗಳು ನಗರದ ಬೆಸ್ಕಾಂ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
 
‘ಬೆಸ್ಕಾಂ ವತಿಯಿಂದ 2003ರಲ್ಲಿ ಆಪರೇಟರ್‌ ಹಾಗೂ ಗ್ಯಾಂಗ್‌ಮನ್‌ಗಳ ಹುದ್ದೆಗೆ 10 ಮಂದಿಯನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. 2013ರವರೆಗೆ ಸೇವೆ ಸಲ್ಲಿಸಿದ ನಂತರ 2014ರ ಅಕ್ಟೋಬರ್‌ನಲ್ಲಿ 10 ಮಂದಿಯನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದು ಧರಣಿ ನಿರತರು ದೂರಿದರು.
 
‘ಬೆಸ್ಕಾಂ ಕೆಲಸವನ್ನೇ ನಂಬಿ ಬದುಕು ಸಾಗಿಸುತ್ತಿದ್ದೇವೆ. ಆದರೆ, ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾ ಮಾಡಿದ್ದಾರೆ. ಮತ್ತೊಂದೆಡೆ 2013ರ ಏಪ್ರಿಲ್‌ನಿಂದ 13 ತಿಂಗಳ ಸಂಬಳ ತಡೆ ಹಿಡಿದಿದ್ದಾರೆ.
 
ಬಾಕಿ ಸಂಬಳ ಕೊಡುವಂತೆ ಹೈಕೋರ್ಟ್‌ ಮಧ್ಯಾಂತರ ಆದೇಶ ನೀಡಿದ್ದರೂ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ’ ಎಂದು ವಜಾಗೊಂಡಿರುವ ಗ್ಯಾಂಗ್‌ಮನ್‌ ಶಿವಪ್ಪ ಹೇಳಿದರು.
 
‘ಕೆಲಸ ಇಲ್ಲದಿರುವುದರಿಂದ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಿದೆ. ಬಡ್ಡಿ ಸಾಲ ಮಾಡಿ ಮಕ್ಕಳನ್ನು ಓದಿಸುತ್ತಿದ್ದೇವೆ. ಅಧಿಕಾರಿಗಳು ಬಾಕಿ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ.
 
ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬದಲಿಗೆ ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದು, ತಮ್ಮ ಅಗತ್ಯವಿಲ್ಲ ಎಂದು ದರ್ಪ ತೋರುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.
 
ಸೇವೆಯಿಂದ ವಜಾ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಕಾರ್ಮಿಕ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದೆವು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ತಮ್ಮನ್ನು ಸೇವೆಯಲ್ಲಿ ಮುಂದುವರಿಸುವಂತೆ ಆದೇಶ ನೀಡಿದೆ. ಅಲ್ಲದೇ, ಇಂಧನ ಸಚಿವರು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 
ಆದರೆ, ಅಧಿಕಾರಿಗಳು ನ್ಯಾಯಾಲಯದ ಆದೇಶ ಹಾಗೂ ಸಚಿವರ ಸೂಚನೆಯನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ವಜಾಗೊಂಡಿರುವ ಗ್ಯಾಂಗ್‌ಮನ್‌ ಹಾಗೂ ಆಪರೇಟರ್‌ಗಳಾದ ಗಣೇಶ್‌, ವಿಜಯ್‌ಕುಮಾರ್‌, ಸಿ.ಕೆ.ಮುನಿರಾಜು, ರಾಜಣ್ಣ, ನಾಗರಾಜ್‌, ಸುನಿಲ್‌ಕುಮಾರ್‌, ಎ.ಮುನಿರಾಜು, ಶಂಕರ್‌ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.