ADVERTISEMENT

ಕೊಳವೆಬಾವಿ ಮಾಲೀಕರ ಮನವೊಲಿಸಿ

‘ಸದೃಢ ರೈತ ಚಳವಳಿ ಮತ್ತು ಅಸ್ಪೃಶ್ಯತೆ, ಜಾತಿ ತಾರತಮ್ಯದ ಪ್ರಶ್ನೆಗಳು’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:57 IST
Last Updated 6 ಮಾರ್ಚ್ 2017, 10:57 IST
ಬಂಗಾರಪೇಟೆ: ‘ದೇಶದಲ್ಲಿ ಅಸ್ತಿತ್ವದ ಲ್ಲಿರುವ ಜಾತಿ ಮತ್ತು ಅಸ್ಪೃಶ್ಯತೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಲಿದೆ’ ಎಂದು ನವದೆಹಲಿಯ ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಉಪಾಧ್ಯಕ್ಷ ಕೆ.ವರದರಾಜನ್ ಅಭಿಪ್ರಾಯಪಟ್ಟರು.
 
ಪಟ್ಟಣದ ಬಯಲು ರಂಗಮಂದಿರದಲ್ಲಿ ಭಾನುವಾರ ಕರ್ನಾಟಕ ಪ್ರಾಂತ ರೈತ ಸಂಘ ‘ಸದೃಢ ರೈತ ಚಳವಳಿ ಮತ್ತು ಅಸ್ಪೃಶ್ಯತೆ, ಜಾತಿ ತಾರತಮ್ಯದ ಪ್ರಶ್ನೆಗಳು’ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ  ಮಾತನಾಡಿದರು.
 
‘ದೇಶ ಸ್ವಾತಂತ್ರ್ಯಗೊಂಡು 7 ದಶಕಗಳಾಗಿವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಮರೀಚಿಕೆಯಾಗಿದೆ. ಜಾತಿ ಮತ್ತು ವರ್ಣ ವ್ಯವಸ್ಥೆ ಸಂಪೂರ್ಣವಾಗಿ ತೊಡೆದುಹಾಕಿದರೆ ಮಾತ್ರ ಸಮಾನತೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು. 
 
‘ಜಾತಿ ಮತ್ತು ಹಣ ಇಂದಿನ ಚುನಾವಣೆಗಳ ಫಲಿತಾಂಶ ನಿರ್ಧರಿಸಲಿವೆ. ಇದರ ಜತೆ ಭ್ರಷ್ಟಾಚಾರ ಸೇರಿಕೊಂಡು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿದೆ.  ಅಧಿಕಾರಕ್ಕೆ ಬರುವ ರಾಜಕಾರಣಿಗಳು ಜಾತಿ ಹೆಸರಿನಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
 
‘ಸಂವಿಧಾನದ ಆಶಯದಂತೆ ಕಾರ್ಯಾಂಗ ಕೆಲಸ ಮಾಡುತ್ತಿಲ್ಲ. ಮೀಸಲಾತಿ ನೀತಿ ಕೂಡ ಸಮರ್ಪಕವಾಗಿ ಪಾಲಿಸುತ್ತಿಲ್ಲ. ತುಳಿತಕ್ಕೆ ಒಳಗಾದ ವರ್ಗಗಳಿಗೆ ಮೀಸಲಿಟ್ಟಿರುವ ಹಣ ಸದ್ಬಳಕೆ ಮಾಡದೆ, ಇತರ ಕೆಲಸಗಳಿಗೆ ವ್ಯಯ ಮಾಡಲಾಗುತ್ತಿದೆ’ ಎಂದು ದೂರಿದರು. 
 
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಹಿರಿಯ ಮುಖಂಡ ಎನ್‌.ವೆಂಕಟೇಶ್ ಮಾತನಾಡಿ, ‘ಬಡವರ ಅಭಿವೃದ್ಧಿಗೆ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜಾತಿ ತಾರತಮ್ಯ ಮರೆತು ಬಡವರೆಲ್ಲಾ ಒಗ್ಗಟ್ಟಾಗುವ ಮೂಲಕ ಪ್ರಜ್ಞಾಪೂರ್ವ ಹೋರಾಟ ನಡೆಸಬೇಕಿದೆ’ ಎಂದರು.
 
‘ಶೇ 50ಕ್ಕಿಂತ ಹೆಚ್ಚಿರುವ ಬಡವರ ಅಭಿವೃದ್ಧಿ ಕಡೆಗಣಿಸಲಾಗಿದೆ. ಕೆಲ ಬಂಡವಾಳ ಶಾಹಿಗಳ ಅನುಕೂಲಕ್ಕಾಗಿಯೆ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಹೋರಾಟಗಳು ತೀವ್ರಗೊಳ್ಳಬೇಕಿದೆ’ ಎಂದರು. 
 
ಪ್ರಾಂತ ರೈತ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರು ವರದರಾಜನ್‌ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು. ತಾಲ್ಲೂಕು ಘಟಕ ಅಧ್ಯಕ್ಷ ಪಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಂ.ಮುನಿವೆಂಕಟೇಗೌಡ, ಶಿಕ್ಷಕ ಎಂ.ಆರ್.ದೇವರಾಜ್, ಮುಖಂಡ ಬಂಗ್ವಾದಿ ನಾರಾಯಣಪ್ಪ  ಮತ್ತಿತರರು ಉಪಸ್ಥಿತರಿದ್ದರು. 
 
* ಸರ್ಕಾರಗಳು ಬಂಡವಾಳ ಶಾಹಿ ಪರ ನಿಲ್ಲು ತ್ತಿವೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಉದ್ಯಮಿಗಳು ಲಾಭ ಗಳಿಸಲು ಪೂರಕ ವಾತಾವರಣ ಸೃಷ್ಟಿಸುತ್ತಿವೆ.
ಕೆ.ವರದರಾಜನ್,  ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.