ADVERTISEMENT

ಕೊಳೆಗೇರಿಯಂತಾದ ಬಡಾವಣೆ: ಸ್ಥಳೀಯರ ಬವಣೆ

ಒಡೆದ ಯುಜಿಡಿ ಪೈಪ್‌: ಕೇಶವನಗರದಲ್ಲಿ ಕೆರೆಯಂತೆ ನಿಂತ ಕೊಳಚೆ ನೀರು, ಹೇಳತೀರದ ಸ್ಥಳೀಯರ ಬವಣೆ

ಜೆ.ಆರ್.ಗಿರೀಶ್
Published 22 ಮೇ 2017, 5:24 IST
Last Updated 22 ಮೇ 2017, 5:24 IST
ಕೋಲಾರದ ಕೇಶವನಗರದಲ್ಲಿ ಮನೆಗಳ ಪಕ್ಕ ನಿಂತಿರುವ ಯುಜಿಡಿ ಮಾರ್ಗದ ಕೊಳಚೆ ನೀರು
ಕೋಲಾರದ ಕೇಶವನಗರದಲ್ಲಿ ಮನೆಗಳ ಪಕ್ಕ ನಿಂತಿರುವ ಯುಜಿಡಿ ಮಾರ್ಗದ ಕೊಳಚೆ ನೀರು   

ಕೋಲಾರ: ನಗರದ 28ನೇ ವಾರ್ಡ್‌ ವ್ಯಾಪ್ತಿಯ ಕೇಶವನಗರದಲ್ಲಿ ಒಳ ಚರಂಡಿ ಮಾರ್ಗದ (ಯುಜಿಡಿ) ಪೈಪ್‌ಗಳು ಒಡೆದಿದ್ದು, ಕೊಳಚೆ ನೀರು ಕೆರೆಯಂತೆ ನಿಂತಿದೆ. ಯುಜಿಡಿ ಪೈಪ್‌ಗಳಿಂದ ಹೊರ ಹರಿಯುತ್ತಿರುವ ಕೊಳಚೆ ನೀರು ಬಡಾವಣೆಯ ಸೌಂದರ್ಯವನ್ನು ಹಾಳುಗೆಡವಿದ್ದು, ಸ್ಥಳೀಯರ ಬವಣೆ ಹೇಳತೀರದು.

ಸುಲ್ತಾನ್‌ ತಿಪ್ಪಸಂದ್ರ, ಮಹಾಲಕ್ಷ್ಮಿ ಲೇಔಟ್‌, ವಿಭೂತಿಪುರ, ಕೀಲುಕೋಟೆ, ಕೇಶವನಗರ ಹಾಗೂ ಸುತ್ತಮುತ್ತಲ ಬಡಾವಣೆಗಳ ಕೊಳಚೆ ನೀರು ರಾಜಕಾಲುವೆ ಮತ್ತು ಯುಜಿಡಿ ಮೂಲಕ ನಗರದ ಹೊರವಲಯದ ಮಣಿಘಟ್ಟ ರಸ್ತೆಯಲ್ಲಿನ ಗ್ರಾಮಸಾರ ಶುದ್ಧೀಕರಣ ಘಟಕಕ್ಕೆ ಹರಿದು ಹೋಗುತ್ತದೆ.

ಆದರೆ, ಕೇಶವನಗರದ ಬಳಿ ರೈತರು ತಮ್ಮ ಜಮೀನುಗಳಿಗೆ ಕೊಳಚೆ ನೀರನ್ನು ಬಳಸಿಕೊಳ್ಳುವ ಉದ್ದೇಶಕ್ಕಾಗಿ ಯುಜಿಡಿ ಪೈಪ್‌ಗಳನ್ನು ಒಡೆದಿದ್ದಾರೆ. ಅಲ್ಲದೇ, ಯುಜಿಡಿ ಮಾರ್ಗ ಮತ್ತು ರಾಜಕಾಲುವೆ ಬಳಿಯಿಂದ ತಮ್ಮ ಜಮೀನುಗಳವರೆಗೆ ದೊಡ್ಡ ಕಾಲುವೆ ತೋಡಿಸಿ ಕೊಳಚೆ ನೀರು ವಿರುದ್ಧ ದಿಕ್ಕಿನಲ್ಲಿ ಹರಿಯುವಂತೆ ಮಾಡಿದ್ದಾರೆ. ಕಾಲುವೆ ಮೂಲಕ ಹರಿದು ಬರುವ ಕೊಳಚೆ ನೀರನ್ನು ತೆರೆದ ಬಾವಿಯಲ್ಲಿ ಸಂಗ್ರಹಿಸಿಕೊಂಡು ಪಂಪ್‌ ಮತ್ತು ಮೋಟರ್‌ನ ಸಹಾಯದಿಂದ ಮೇಲಕ್ಕೆತ್ತಿ ಬೆಳೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ರೋಗ ಭೀತಿ: ಕೊಳಚೆ ನೀರು ಹರಿದು ಹೋಗುವ ಕಾಲುವೆಯ ಅಕ್ಕಪಕ್ಕ ಮನೆಗಳಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಕಾಲುವೆಯಲ್ಲಿನ ಕೊಳಚೆ ನೀರಿನಿಂದ ದುರ್ನಾತ ಹೆಚ್ಚಿದ್ದು, ಸ್ಥಳೀಯರು ಮನೆಗಳಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಕಾಲುವೆಯಲ್ಲಿ ಗಿಡ ಗಂಟೆಗಳು ಬೆಳೆದುಕೊಂಡಿವೆ. ಮತ್ತೊಂದೆಡೆ ಕಾಲುವೆ ಪಕ್ಕದಲ್ಲಿ ಸಿಮೆಂಟ್‌, ಇಟ್ಟಿಗೆಯಂತಹ ನಿರುಪಯುಕ್ತ ಸಾಮಗ್ರಿಗಳು ಮತ್ತು ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ.

ಕೊಳಚೆ ನೀರು ಮತ್ತು ತ್ಯಾಜ್ಯದ ರಾಶಿಯಿಂದ ಹಂದಿ, ಬೀದಿ ನಾಯಿ, ನೊಣ ಹಾಗೂ ಸೊಳ್ಳೆ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವುದರಿಂದ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವ ಪರಿಸ್ಥಿತಿ ಇದೆ. ಯುಜಿಡಿ ಮಾರ್ಗದ ಪಕ್ಕದ ರಸ್ತೆಯಲ್ಲಿ ಜನ ಕೊಳಚೆ ನೀರಿನ ದುರ್ನಾತ ಸಹಿಸಲಾಗದೆ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಅಂತರ್ಜಲ ಕಲುಷಿತ: ಕಾಲುವೆಯ ಪಕ್ಕದಲ್ಲೇ ಇರುವ ಕೊಳವೆ ಬಾವಿಯಿಂದ ಕೇಶವ ನಗರದ ಮನೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕಾಲುವೆಯಲ್ಲಿ ಸರಾಗವಾಗಿ ಹರಿಯದೆ ನಿಂತಿರುವ ಕೊಳಚೆ ನೀರು ಭೂಮಿಗೆ ಬಸಿದು ಪಕ್ಕದ ಕೊಳವೆ ಬಾವಿಯಲ್ಲಿನ ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ.

ಕೇಶವನಗರ ನಿವಾಸಿಗಳು ಈ ಸಂಗತಿ ತಿಳಿಯದೆ ಕಲುಷಿತ ನೀರನ್ನೇ ಸ್ನಾನಕ್ಕೆ, ಪಾತ್ರೆ ಮತ್ತು ತರಕಾರಿ ತೊಳೆಯಲು ಬಳಕೆ ಮಾಡುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದ್ದು, ಚರ್ಮ ರೋಗ ಹಾಗೂ ತಲೆಗೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ರೈತರು ಸ್ಪಂದಿಸುತ್ತಿಲ್ಲ: ಯುಜಿಡಿ ಪೈಪ್‌ ಒಡೆದಿರುವುದರಿಂದ ಆಗಿರುವ ಸಮಸ್ಯೆಯನ್ನು ತಿಳಿಸಿ ಕೊಳಚೆ ನೀರನ್ನು ಕೃಷಿಗೆ ಬಳಸದಂತೆ ಸ್ಥಳೀಯರು ಮನವಿ ಮಾಡಿದರೂ ರೈತರು ಸ್ಪಂದಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ರೈತರ ವಿರುದ್ಧ ನಗರಸಭೆಗೆ ದೂರು ನೀಡಿ, ಕೃಷಿಗೆ ಯುಜಿಡಿ ನೀರು ಬಳಸಿಕೊಳ್ಳುವುದಕ್ಕೆ ಕಡಿವಾಣ ಹಾಕುವಂತೆ ಕೋರಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಸೌಜನ್ಯಕ್ಕೂ ಇತ್ತ ತಿರುಗಿ ನೋಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೇಶವನಗರ ನಿವಾಸಿಗಳು ಕೊಳಚೆ ನೀರಿನ ದುರ್ನಾತದ ನಡುವೆಯೇ ದಿನ ದೂಡುವಂತಾಗಿದೆ.

ಗಮನಕ್ಕೆ ಬಂದಿದೆ
ಕೇಶವನಗರದ ಬಳಿ ರೈತರು ಯುಜಿಡಿ ಮಾರ್ಗದ ಪೈಪ್‌ಗಳನ್ನು ಒಡೆದು ಕೊಳಚೆ ನೀರನ್ನು ಜಮೀನುಗಳಿಗೆ ಬಳಸಿಕೊಳ್ಳುತ್ತಿರುವ ಸಂಗತಿ ಗಮನಕ್ಕೆ ಬಂದಿದೆ. ರೈತರಿಗೆ ನೋಟಿಸ್‌ ನೀಡಿ, ಪೈಪ್‌ಗಳನ್ನು ದುರಸ್ತಿ ಪಡಿಸುತ್ತೇವೆ. ಆ ನಂತರವೂ ರೈತರು ಹಳೆ ಚಾಳಿ ಮುಂದುವರಿಸಿದರೆ ದೂರು ದಾಖಲಿಸುತ್ತೇವೆ.
–ಎಸ್‌.ಎ.ರಾಮ್‌ಪ್ರಕಾಶ್‌, ನಗರಸಭೆ ಆಯುಕ್ತ

*
ರೈತರು ನಾಲ್ಕೈದು ವರ್ಷಗಳಿಂದ ಯುಜಿಡಿ ಮಾರ್ಗದ ಕೊಳಚೆ ನೀರನ್ನು ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ.  ಕೊಳಚೆ ನೀರಿನ ದುರ್ನಾತದಿಂದ ಮನೆಯಲ್ಲಿ ಇರುವುದೇ ಕಷ್ಟವಾಗಿದೆ.
-ಶ್ರೀನಿವಾಸ್‌, ಕೇಶವನಗರ ನಿವಾಸಿ

ADVERTISEMENT

*
ಯುಜಿಡಿ ಪೈಪ್‌ಗಳು ಒಡೆದಿರುವ ಬಗ್ಗೆ ನಗರಸಭೆಗೆ ಹಲವು ಬಾರಿ ದೂರು ಕೊಟ್ಟಿದ್ದೇವೆ. ಆದರೆ, ಅಧಿಕಾರಿಗಳು ಅವುಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.
-ಶ್ರೀಧರ್‌,
ಕೇಶವನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.