ADVERTISEMENT

ಕ್ಷೇತ್ರದಿಂದ ಹೊರ ಹೋಗುವ ಪ್ರಶ್ನೆಯಿಲ್ಲ

ಆತ್ಮಾವಲೋಕನ ಸಭೆಯಲ್ಲಿ ಪರಾಜಿತ ಅಭ್ಯರ್ಥಿ ವರ್ತೂರು ಪ್ರಕಾಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 9:51 IST
Last Updated 25 ಮೇ 2018, 9:51 IST

ಕೋಲಾರ: ‘ವೈಯಕ್ತಿಕ ಕಾರಣಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಪ್ರಾಣ ಇರುವವರೆಗೂ ಕೋಲಾರ ಕ್ಷೇತ್ರದಿಂದ ಹೊರ ಹೋಗುವ ಪ್ರಶ್ನೆಯಿಲ್ಲ. ಕೋಲಾರದಲ್ಲೇ ಮಣ್ಣಾಗುತ್ತೇನೆ’ ಎಂದು ನಮ್ಮ ಕಾಂಗ್ರೆಸ್‌ ಪಕ್ಷದ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದರು.

ಚುನಾವಣೆಯಲ್ಲಿನ ಸೋಲಿನ ಸಂಬಂಧ ನಗರದಲ್ಲಿ ಗುರುವಾರ ನಡೆದ ನಮ್ಮ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ‘ಚುನಾವಣೆಯಲ್ಲಿ ನನ್ನ ಪರ ಯುದ್ಧ ಮಾಡಲು ಸೈನಿಕರು ಸಿದ್ಧರಿದ್ದರು, ಬಂದೂಕುಗಳು ಸಜ್ಜಾಗಿದ್ದವು. ಆದರೆ, ಮದ್ದು ಗುಂಡುಗಳಿರಲಿಲ್ಲ’ ಎಂದರು.

‘ಇನ್ನು ಮುಂದೆ ಯಾಮಾರುವುದಿಲ್ಲ, ನಿಮ್ಮೆಲ್ಲರ ಋಣ ತೀರಿಸುತ್ತೇನೆ. ನಮ್ಮಪ್ಪನಾಣೆಗೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ 6 ತಿಂಗಳು ಉಳಿಯುವುದಿಲ್ಲ. ಬಿಜೆಪಿಯೂ ಅಧಿಕಾರಕ್ಕೆ ಬರಲ್ಲ. ಬದಲಿಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತದೆ. ಮತ್ತೆ ಚುನಾವಣೆ ಎದುರಿಸಲು ಈಗಿನಿಂದಲೇ ಸಿದ್ಧರಾಗೋಣ’ ಎಂದು ತಿಳಿಸಿದರು.

ADVERTISEMENT

‘ಚುನಾವಣೆಯಲ್ಲಿ ಚಾಕೊಲೇಟ್ ನೀಡದಿದ್ದರೂ ಮತದಾರರು ನನಗೆ 35 ಸಾವಿರ ಮತ ಹಾಕಿದ್ದಾರೆ. ವಿರೋಧಿಗಳು ಹಣದ ಹೊಳೆ ಹರಿಸಿ ಗೆದ್ದಿದ್ದಾರೆ. ಮತ್ತೆ ಪ್ರತಿ ಗ್ರಾಮಕ್ಕೆ ತೆರಳುತ್ತೇನೆ. 9 ತಿಂಗಳಲ್ಲಿ ಎದುರಾಗುವ ನಗರಸಭೆ ಚುನಾವಣೆ ಮೂಲಕವೇ ಮತ್ತೆ ರಾಜಕೀಯವಾಗಿ ಎದ್ದು ನಿಲ್ಲುತ್ತೇನೆ’ ಎಂದು ಘೋಷಿಸಿದರು.

‘ಕ್ಷೇತ್ರದ 220 ಹಳ್ಳಿಗಳಲ್ಲಿ ಒಕ್ಕಲಿಗರೇ ನನ್ನ ಪರ ನಿಂತು ಚುನಾವಣೆ ನಡೆಸಿದ್ದಾರೆ. ಅಹಿಂದ ಮತದಾರರು ನನ್ನೊಂದಿಗಿದ್ದಾರೆ. ನಗರಸಭೆ ಚುನಾವಣೆಯಲ್ಲಿ 35 ವಾರ್ಡ್‌ಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಅದೇ ರೀತಿ ಎಪಿಎಂಸಿ, ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲೂ ಬೆಂಬಲಿಗರನ್ನು ಗೆಲ್ಲಿಸುತ್ತೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಹಾಯ ಮಾಡಲಿಲ್ಲ: ‘ಕಾಂಗ್ರೆಸ್ ಮುಖಂಡರಾದ ನಸೀರ್‌ ಅಹಮ್ಮದ್‌, ನಿಸಾರ್ ಅಹಮ್ಮದ್ ಹಾಗೂ ಅನಿಲ್‌ಕುಮಾರ್‌ ಕಾಂಗ್ರೆಸ್‌ನಿಂದ ಅಧಿಕಾರ ಪಡೆದು ಜೆಡಿಎಸ್‌ಗೆ ನಿಷ್ಠೆ ತೋರಿದರು. ಸಂಸದ ಕೆ.ಎಚ್.ಮುನಿಯಪ್ಪ ಚುನಾವಣೆಯಲ್ಲಿ ನನಗೆ ಸಹಾಯ ಮಾಡಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಅವರನ್ನು ಬೆಂಬಲಿಸುವ ಸಂಬಂಧ ಬೆಂಬಲಿಗರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದರು.

‘ಬೆಗ್ಲಿ ಪ್ರಕಾಶ್‌ ಬಗ್ಗೆ ಯಾರಾದರೂ ತುಚ್ಛವಾಗಿ ಮಾತನಾಡಿದರೆ ಬೂಟಿನಿಂದ ಒದ್ದು ಪಕ್ಷದಿಂದ ಉಚ್ಛಾಟಿಸುತ್ತೇನೆ. ಬೆಗ್ಲಿ ಪ್ರಕಾಶ್ ಜತೆಗಿರದಿದ್ದರೆ ನನಗೆ ಚುನಾವಣೆಯಲ್ಲಿ ಠೇವಣಿ ಸಹ ಬರುವುದಿಲ್ಲ. ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ನನ್ನ ಜತೆ ಉಳಿಸಿಕೊಂಡಿದ್ದೇನೆ’ ಎಂದು ಹೇಳಿದರು.

ಒಡನಾಡಿಗಳ ಮೋಸ: ‘ಸಂಪನ್ಮೂಲ ಕೊರತೆ, ಅತಿಯಾದ ಆತ್ಮವಿಶ್ವಾಸ, ನಂಬಿಕೆ ದ್ರೋಹದಿಂದ ವರ್ತೂರು ಪ್ರಕಾಶ್ ಚುನಾವಣೆಯಲ್ಲಿ ಸೋತಿದ್ದಾರೆ. ನಂಬಿದವರೇ ಕೈ ಕೊಟ್ಟಿದ್ದಾರೆ. ಪಕ್ಕದಲ್ಲಿದ್ದ ಒಡನಾಡಿಗಳೇ ಮೋಸ ಮಾಡಿದ್ದಾರೆ’ ಎಂದು ನಮ್ಮ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬೆಗ್ಲಿ ಪ್ರಕಾಶ್‌ ಆರೋಪಿಸಿದರು.

‘ವೆಂಕಟಗಿರಿಯಪ್ಪ ಸೋತಾಗಲೂ ಗೆದ್ದಾಗಲೂ ಅವರ ಜತೆಗಿದ್ದೆ. ನಂತರ ಕೆ.ಎಚ್.ಮುನಿಯಪ್ಪ ಅವರೊಂದಿಗೆ ನಿಷ್ಠೆಯಿಂದ ಇದ್ದೆ. ಈಗ ವರ್ತೂರು ಪ್ರಕಾಶ್‌ ಅವರಿಗೆ ಕಷ್ಟ ಕಾಲದಲ್ಲೂ ಜತೆಯಾಗಿದ್ದೇನೆ. ರಾಜಕಾರಣದಿಂದ ನಿವೃತ್ತನಾಗುತ್ತೇನೆಯೇ ಹೊರತು ವರ್ತೂರು ಪ್ರಕಾಶ್ ಅವರನ್ನು ಕೈಬಿಡುವುದಿಲ್ಲ’ ಎಂದರು.

‘ವರ್ತೂರು ಪ್ರಕಾಶ್ ಕೋಲಾರ ಕ್ಷೇತ್ರಕ್ಕೆ ₹ 140 ಕೋಟಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಶೇ 30ರಷ್ಟು ಕಾಮಗಾರಿಗಳು ಮಾತ್ರ ಬಾಕಿ ಇವೆ. ಈ ಕಾಮಗಾರಿಗಳು ತಮ್ಮದೆಂದು ನೂತನ ಶಾಸಕ ಕೆ.ಶ್ರೀನಿವಾಸಗೌಡರು ಹೇಳಿಕೊಳ್ಳಬಾರದು. ಅವರು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿ’ ಎಂದು ಹೇಳಿದರು.

‘ಕೆ.ಶ್ರೀನಿವಾಸಗೌಡರು ಕುಸ್ತಿ ಮಾಡುವವರಲ್ಲ. ಆದರೆ, ಅವರೊಂದಿಗೆ ಇರುವ ಭಟ್ಟಂಗಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಶ್ರೀನಿವಾಸಗೌಡರು ಹೇಳಿಕೆ ಮಾತು ಕೇಳುವುದು ಬಿಡಬೇಕು. ಮುಂದಿನ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ಗೆಲುವು ಸಾಧಿಸಿ ಮತ್ತೆ ಕ್ಷೇತ್ರದ ಚುಕ್ಕಾಣಿ ಹಿಡಿಯಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಅರುಣ್‌ಪ್ರಸಾದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಸದಸ್ಯರಾದ ಮಂಜುನಾಥ್, ರಾಜಣ್ಣ, ಸಾಬಿರ್ ಪಾಷಾ, ಮಂಜುಳಾ, ನಗರಸಭೆ ಸದಸ್ಯರಾದ ಕಾಶಿ ವಿಶ್ವನಾಥ್‌, ಸೋಮಶೇಖರ್‌, ಮಂಜುನಾಥ್ ಪಾಲ್ಗೊಂಡಿದ್ದರು.

ಬಾಡೂಟಕ್ಕೆ ನೂಗು ನುಗ್ಗಲು

ಕೋಲಾರ: ನಗರದಲ್ಲಿ ಗುರುವಾರ ನಡೆದ ಮಾಜಿ ಶಾಸಕ ವರ್ತೂರು ಪ್ರಕಾಶ್‌ರ ಚುನಾವಣಾ ಸೋಲಿನ ಆತ್ಮಾವಲೋಕನ ಸಭೆಗೆ ಬಂದಿದ್ದ ‘ನಮ್ಮ ಕಾಂಗ್ರೆಸ್‌’ ಪಕ್ಷದ ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.
ವರ್ತೂರು ಪ್ರಕಾಶ್‌ ಅವರು ಸುಮಾರು 50 ಕೆ.ಜಿ ಕುರಿ ಮಾಂಸ ತರಿಸಿ ಮಧ್ಯಾಹ್ನದ ಊಟಕ್ಕೆ ಬಿರಿಯಾನಿ ಮತ್ತು ಮೊಸರು ಬಜ್ಜಿ ವ್ಯವಸ್ಥೆ ಮಾಡಿಸಿದ್ದರು. ಆದರೆ, ಅವರ ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸಭೆಗೆ ಬಂದರು.

ಸಭೆ ಮುಗಿಯುತ್ತಿದ್ದಂತೆ ಕಾರ್ಯಕರ್ತರು ಬಿರಿಯಾನಿ ತೆಗೆದುಕೊಳ್ಳಲು ಮುಗಿಬಿದ್ದರು. ಇದರಿಂದ ನೂಕು ನುಗ್ಗಲು ಉಂಟಾಯಿತು. ಪಕ್ಷದ ಮುಖಂಡರು ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಸಾಕಷ್ಟು ಮಂದಿಗೆ ಬಿರಿಯಾನಿ ಸಿಗದೆ ಬೇಸರದಿಂದ ಮನೆಯತ್ತ ಹೆಜ್ಜೆ ಹಾಕಿದರು.

ವರ್ತೂರು ಪ್ರಕಾಶ್‌ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರು ಹಾಗೂ ಕಾರ್ಯಕರ್ತರ ಓಲೈಕೆಗಾಗಿ ಹಲವು ಬಾರಿ ಬಾಡೂಟ ಹಾಕಿಸಿ ಸುದ್ದಿಯಾಗಿದ್ದರು. ಚುನಾವಣೆಯಲ್ಲಿ ಸೋತ ನಂತರವೂ ಅವರು ಕಾರ್ಯಕರ್ತರಿಗೆ ಬಾಡೂಟ ಹಾಕಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

**
ರಾಜಕೀಯ ವಿರೋಧಿಗಳು ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಬೆಂಬಲಿಗರಿಗೆ ತೊಂದರೆ ಕೊಟ್ಟರೆ ಸಹಿಸುವುದಿಲ್ಲ. ಅವರ ಮನೆ ಮುಂದೆ ಧರಣಿ ನಡೆಸುತ್ತೇನೆ. ನ್ಯಾಯ ಸಿಗದಿದ್ದರೆ ಎಸ್ಪಿ ಕಚೇರಿಗೆ ಐದು ಸಾವಿರ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕುತ್ತೇನೆ
ವರ್ತೂರು ಪ್ರಕಾಶ್‌, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.