ADVERTISEMENT

ಖಾಸಗಿ ಆಸ್ಪತ್ರೆ ನಿರ್ವಹಣಾ ಕಾಯ್ದೆಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:41 IST
Last Updated 21 ಮೇ 2017, 10:41 IST
. ಸಚಿವ ರಮೇಶ್‌ಕುಮಾರ್ ಮಾತನಾಡಿದರು
. ಸಚಿವ ರಮೇಶ್‌ಕುಮಾರ್ ಮಾತನಾಡಿದರು   

ಕೋಲಾರ: ‘ಖಾಸಗಿ ಆಸ್ಪತ್ರೆಗಳು ಟ್ರೀಟ್‍ಮೆಂಟ್ ಫಸ್ಟ್, ಪೇಮೆಂಟ್‌ ನೆಕ್ಸ್ಟ್‌ ಎಂಬ ತತ್ವದಡಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ವಹಣಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶ ಮತ್ತು ವೈಜ್ಞಾನಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಖಾಸಗಿ ಆಸ್ಪತ್ರೆಗಳ ನಿರ್ವಹಣಾ ಕಾಯ್ದೆಗೆ ತಿದ್ದುಪಡಿ ತರಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು. ತಿದ್ದುಪಡಿಯ ನಂತರ ಜೂನ್‌ 5ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಕಾಯ್ದೆ ಜಾರಿಯಾದ ಬಳಿಕ ಯಾವ ಚಿಕಿತ್ಸೆಗೆ ಎಷ್ಟು ಶುಲ್ಕ ಎಂಬ ಮಾಹಿತಿಯನ್ನು ಆಸ್ಪತ್ರೆಗಳು ಕಡ್ಡಾಯವಾಗಿ ಫಲಕದಲ್ಲಿ ಪ್ರಕಟಿಸಬೇಕು. ಚಿಕಿತ್ಸೆ ನೀಡದೆ ಮೊದಲೇ ಹಣ ಕೇಳುವ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಲಾಗುತ್ತದೆ’ ಎಂದರು.

ADVERTISEMENT

ಕೆಲಸವೇ ಇರುವುದಿಲ್ಲ: ‘ಇಲಾಖೆಯಲ್ಲಿ ಉಪ ನಿರ್ದೇಶಕರ 32 ಹುದ್ದೆಗಳಿವೆ. ಅಧಿಕಾರಿಗಳಿಗೆ ಕೆಲಸವೇ ಇರುವುದಿಲ್ಲ. ಪ್ರಭಾವ ಬೀರಿ ಈ ಹುದ್ದೆಗಳಿಗೆ ಬಂದಿದ್ದಾರೆ. ಅನವಶ್ಯಕ ಹುದ್ದೆಗಳನ್ನು ರದ್ದುಪಡಿಸಲಾಗುತ್ತದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹುದ್ದೆಗೂ ಪರೀಕ್ಷೆ ನಡೆಸಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ಕೋರ್ಸ್ ಆರಂಭಿಸಿ ಶೇ 100ರಷ್ಟು ಗ್ರಾಮೀಣ ವೈದ್ಯರಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ವಿವರಿಸಿದರು.

ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‍ಐ, ಸಿಟಿ ಸ್ಕ್ಯಾನ್, ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಜನರಿಕ್ ಔಷಧ ಮಳಿಗೆ ಆರಂಭ ಹೀಗೆ ಎಲ್ಲಾ ಸೌಲಭ್ಯಗಳ ಅನುಷ್ಠಾನಕ್ಕೆ ಅಡ್ಡ ಬರುವ ಮತ್ತು ಪ್ರಭಾವ ಬೀರುವ ಪ್ರಯತ್ನ ಮುಂದುವರಿದಿದೆ. ಆದರೆ, ಖಾಸಗಿ ಆಸ್ಪತ್ರೆಗಳ ಲಾಬಿಗೆ ಮಣಿಯುವುದಿಲ್ಲ. ರಮೇಶ್‌ಕುಮಾರ್‌ ಇರ್ತಾನೋ, ಬಿಡ್ತಾನೋ. ಎಲ್ಲವನ್ನೂ ಬಿಗಿ ಮಾಡಿಯೇ ಹೋಗೋದು’ ಎಂದು ಭರವಸೆ ನೀಡಿದರು.

ದುರಹಂಕಾರ: ‘ಹಳ್ಳಿಯಲ್ಲಿ ಹುಟ್ಟಿ ಇಲ್ಲಿನ ನೀರು, ತರಕಾರಿ, ಅಕ್ಕಿ ತಿಂದು ಬೆಳೆದು ರಸ್ತೆಯಲ್ಲಿ ಓಡಾಡಿ ಎಂಬಿಬಿಎಸ್‌ ಓದಿದವರಿಗೆ ಹಳ್ಳಿಗೆ ಬಂದು ಸೇವೆ ಮಾಡುವುದಕ್ಕೆ ದುರಹಂಕಾರ. ಹಳ್ಳಿಗೆ ಬಂದು ಸೇವೆ ಮಾಡಿದರೆ ಜನ ಕೈ ಮುಗಿದು ಕಾಲಿಗೆ ನಮಸ್ಕಾರ ಮಾಡ್ತಾರೆ. ತಿಂಗಳಿಗೆ ₹ 1.25 ಲಕ್ಷ ಸಂಬಳ ಕೊಟ್ಟರೂ ಗ್ರಾಮೀಣ ಸೇವೆಗೆ ಬರಲ್ಲ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಡಿಮೆ ಸಂಬಳಕ್ಕೆ ಜೊಲ್ಲು ಸುರಿಸಿಕೊಂಡಿರುವುದೇ ಚೆಂದ ಎಂದುಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾರ್ವಜನಿಕ ಆರೋಗ್ಯ ಎನ್ನುವುದು ಕಟ್ಟ ಕಡೆಯ ಮನುಷ್ಯನ ಜೀವಕ್ಕೆ ಅಪಾಯವಾದರೂ ಚಿಕಿತ್ಸೆ ನೀಡುವ ವ್ಯವಸ್ಥೆ. ಬಡವನಿಗೆ ಗ್ರಹಚಾರಕ್ಕೆ ಕಾಯಿಲೆ ಬಂದರೆ ಸರ್ಕಾರ ನೋಡಿಕೊಳ್ಳುತ್ತದೆ ಎಂಬ ಧೈರ್ಯವಿದೆಯಾ. ಎಲ್ಲದಕ್ಕೂ ದುಡ್ಡು ಬೇಕು. ಈ ಸಮಾವೇಶ ಏತಕ್ಕಾಗಿ. ಬೇಡಿಕೆಗಳನ್ನು ಹೇಳಿಕೊಳ್ಳಲೋ ಅಥವಾ ಸಂಘಟನೆಗಾಗಿಯೋ. ಸಾರ್ವಜನಿಕ ಆರೋಗ್ಯ ಸೇವೆಯು ಎಲ್ಲಿವರೆಗೆ ಮನುಷ್ಯನ ಮನೆ ಬಾಗಿಲಿಗೆ ಹೋಗುವುದಿಲ್ಲವೋ ಆವರೆಗೆ ಇಂತಹ ಸಮಾವೇಶಕ್ಕೆ ಅರ್ಥವೇ ಇಲ್ಲ’ ಎಂದರು.

ಹುಚ್ಚು ಹಿಡಿದಿದೆ: ‘ಲೋಪಗಳನ್ನು ಮುಚ್ಚಿ ಹಾಕಿ ಭ್ರಷ್ಟರನ್ನು ಹೊಗಳಿ, ಕ್ರಿಯಾಶೀಲರನ್ನು ಪಕ್ಕಕ್ಕೆ ಸರಿಸಿ ಆಡಳಿತ ನಡೆಸುವ ಕಾಲದಿಂದ ಹೊರ ಬರಬೇಕು. ನಾನು ಆರೋಗ್ಯ ಸಚಿವ, ನನಗೆ ಹುಚ್ಚು ಹಿಡಿದಿದೆ. ಈ ಹುಚ್ಚು ನಿಮಗೆಲ್ಲಾ ಹಿಡಿದರೆ ಸಾರ್ವಜನಿಕ ಆರೋಗ್ಯ ಸೇವೆ ಚೆನ್ನಾಗಿರುತ್ತದೆ. ನಾನು ಮಂತ್ರಿ ಪದವಿಗೆ ಆಸೆ ಪಟ್ಟವನಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಹೃದಯವಂತಿಕೆ ಇದೆ ಎಂದು ಆರೋಗ್ಯ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ. 7ನೇ ವಿಕೆಟ್‌ಗೆ ಬಂದಿದ್ದೇವೆ. ಮೂರು ಓವರ್ ಇದೆ. 86 ರನ್ ಬೇಕು. ನನ್ನ ತಂಡ ಈಗ ಪ್ಲೇ ಆಫ್‌ಗೆ ಬಂದು ನಿಂತಿದೆ. ಗೆಲ್ಲಬೇಕು ಅಷ್ಟೇ’ ಎಂದರು.

‘ದುಡ್ಡು ಕಾಸು ಖರ್ಚು ಮಾಡದೆ ಉಚಿತವಾಗಿ ಬಡವನಿಗೆ ಆರೋಗ್ಯ ಸೇವೆ ಸಿಕ್ಕಿದಾಗ ಮಾತ್ರ ಸರ್ಕಾರಿ ಆಸ್ಪತ್ರೆಗಳ ಘನತೆ ಹೆಚ್ಚುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅಕ್ರಮ ಅನ್ಯಾಯಗಳನ್ನು ನೋಡಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನೋಡಿದರೆ ನೋವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು. ಸರ್ಕಾರಿ ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ದ ಕಠಿಣ ಕ್ರಮ ಜರುಗಿಸುತ್ತೇವೆ. ವೈದ್ಯರು ಯಾರಿಗೂ ಭಯಪಡದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಕರೆ ನೀಡಿದರು.

ಇಲಾಖೆಯಲ್ಲೇ ಉಳಿಸಬೇಕು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ಪುಟ್ಟಸ್ವಾಮಿ ಮಾತನಾಡಿ, ‘ಜಿಲ್ಲಾ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯಲ್ಲೇ ಉಳಿಸಬೇಕು. ವೈದ್ಯಕೀಯ ಕಾಲೇಜು ನೆಪದಲ್ಲಿ ಕಿತ್ತುಕೊಳ್ಳುವುದು ಬೇಡ. ವೃಂದ ನೇಮಕಾತಿ ನಿಯಮ ಬದಲಾಯಿಸಬೇಕು. ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಸಿಬ್ಬಂದಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎಸ್.ವಿಜಯಮ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಉಪಾಧ್ಯಕ್ಷ ಮುನಿರಾಜು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಆರ್.ಶಿವಕುಮಾರ್, ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರಂಗನಾಥ್ ಇದ್ದರು.

* *

ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಲಾಗುವುದು. ಸಾರ್ವಜನಿಕರು ಅಲ್ಲಿನ ವೈದ್ಯಕೀಯ ಸೇವೆಗಳ ಬಗ್ಗೆ ದೂರುಗಳಿದ್ದಲ್ಲಿ ಆ ಪೆಟ್ಟಿಗೆಗೆ ಹಾಕಬಹುದು.
ಕೆ.ಆರ್‌.ರಮೇಶ್‌ಕುಮಾರ್‌
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.