ADVERTISEMENT

ಗುಜರಿ ಅಂಗಡಿ ಸೇರಿದ ತುಂತುರು ನೀರಾವರಿ ಪೈಪ್‌

ಬರದಿಂದ ಕಂಗೆಟ್ಟ ರೈತರು, ಬತ್ತುತ್ತಿರುವ ಕೊಳವೆಬಾವಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 7:41 IST
Last Updated 20 ಜನವರಿ 2017, 7:41 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕೊಳವೆ ಬಾವಿಗಳು ಬತ್ತಿಹೋಗುತ್ತಿವೆ. ರೈತರು ತುಂತುರು ನೀರಾವರಿಗೆ ಅಳವಡಿಸಿದ್ದ ಪ್ಲಾಸ್ಟಿಕ್‌ ಪೈಪ್‌ಗಳು ಹಾಗೂ ಸಸಿ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದ್ದ ಗುಳಿ ಫಲಕಗಳನ್ನು ಗುಜರಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಕೊಳವೆ ಬಾವಿ ಸಂಸ್ಕೃತಿ ಆರಂಭದ ದಿನಗಳಿಂದ ಹಿಡಿದು, ಸಾಕಷ್ಟು ನೀರು ಸಿಗುತ್ತಿದ್ದ ಕಾಲದ ವರೆಗೆ ನೀರನ್ನು ಬೆಳೆಗಳಿಗೆ ಕಾಲುವೆ ಮೂಲಕ ಹರಿಸುತ್ತಿದ್ದರು. ಅಂತರ್ಜಲ ಕೊರತೆ ಹೆಚ್ಚಿದಂತೆ ನೀರಿನ ಮಿತ ಬಳಕೆ ಮಾಡುವುದು ಶುರುವಾಯಿತು. ಅದಕ್ಕೆ ಕಂಡು ಕೊಂಡ ವಿಧಾನವೆಂದರೆ ತುಂತುರು ನೀರಾವರಿ. ತುಂತುರು ನೀರಾವರಿ ವಿಧಾನ ಅಳವಡಿಸಲು ವಿವಿಧ ಗಾತ್ರದ ಪ್ಲಾಸ್ಟಿಕ್‌ ಪೈಪ್‌ಗಳು ಬೇಕಾಗುತ್ತವೆ.

ಆದರೆ ಈಗ ನೀರು ಮುಗಿದಿದೆ. ಪೈಪ್‌ಗಳು ಕೃಷಿಗೆ ಅನುಪಯುಕ್ತವಾಗಿವೆ. ಬಳಸಿದ ಪೈಪ್‌ಗಳನ್ನು ಕೊಳ್ಳುವವರಿಲ್ಲ. ಹೀಗಾಗಿ ಕೊಳವೆ ಬಾವಿಯಲ್ಲಿ ನೀರು ಮುಗಿದ ರೈತರು ಪ್ಲಾಸ್ಟಿಕ್‌ ಪೈಪ್‌ಗಳನ್ನು ಕಿತ್ತು ಗುಜರಿ ಅಂಗಡಿಗೆ ಹಾಕುತ್ತಿದ್ದಾರೆ. ಸಸಿ ಮಡಿಗಳಲ್ಲಿ ಟೊಮೆಟೊ ಮತ್ತಿತರ ಸಸಿಗಳನ್ನು ಬೆಳೆಸಲು ಬಳಸುತ್ತಿದ್ದ ಪ್ಲಾಸ್ಟಿಕ್‌ ಗುಳಿ ಫಲಕಗಳನ್ನು ಹಳೆ ವಸ್ತು ಖರೀದಿಸುವ ವ್ಯಕ್ತಿಗಳು ಗ್ರಾಮಗಳಿಗೆ ಭೇಟಿ ಅತ್ಯಂತ ಕಡಿಮೆ ಬೆಲೆಗೆ  ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.

1800 ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ. ಸಾಲ ಮಾಡಿ ಐದಾರು ಕೊಳವೆ ಬಾವಿ ಕೊರೆಸಿ ಕೈ ಸುಟ್ಟುಕೊಂಡಿದ್ದೇನೆ. ಇನ್ನೊಂದು ಕೊಳವೆ ಬಾವಿ ನಿರ್ಮಿಸುವ ಧೈರ್ಯ ಇಲ್ಲ. ಹಾಗಾಗಿ ಕೊಳವೆ ಬಾವಿಗೆ ಅಳವಡಿಸಿದ್ದ ವಸ್ತುಗಳನ್ನು ಮಾರಿ ಕೈತೊಳೆದುಕೊಳ್ಳುತ್ತಿದ್ದೇನೆ ಎಂದು ಕೃಷಿಕ ನಾರಾಯಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಈಚೆಗೆ ಅಂಗಡಿಗೆ ಬರುವ ಪ್ಲಾಸ್ಟಿಕ್‌ ಪೈಪ್‌ ಪ್ರಮಾಣ ಹೆಚ್ಚಿದೆ. ಅದರಲ್ಲೂ ತುಂತುರು ನೀರಾವರಿಗೆ ಅಳವಡಿಸಿದ್ದ ಪೈಪ್‌ಗಳು ಟನ್‌ಗಟ್ಟಲೆ ಬರುತ್ತಿವೆ. ಇದು ಕೊಳವೆ ಬಾವಿಗಳಲ್ಲಿ ನೀರು ಮುಗಿದಿರುವುದರ ಸಂಕೇತವಾಗಿದೆ ಎಂದು ಗುಜರಿ ಅಂಗಡಿ ಮಾಲೀಕ ನವಾಜ್‌ ಹೇಳಿದರು.

ರೈತರು ಪೈಪ್‌ಗಳನ್ನು ಕಿತ್ತು ತೋಟದಲ್ಲಿ ರಾಶಿ ಹಾಕಿದ್ದಾರೆ. ನೀರು ಹರಿಯುತ್ತಿದ್ದ ಉದ್ದನೆಯ ಪೈಪ್‌ಗಳು ಈಗ ಹೊರೆ ಹಗ್ಗದಂತೆಯೂ ದಾರವಾಗಿ ಬಳಕೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.