ADVERTISEMENT

ಗುರು ಭವನ ಕಾಮಗಾರಿಗೆ ಕೂಡದ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 8:49 IST
Last Updated 4 ಸೆಪ್ಟೆಂಬರ್ 2017, 8:49 IST

ಮಾಲೂರು: ಪಟ್ಟಣದಲ್ಲಿ ಗುರು ಭವನ ನಿರ್ಮಾಣಕ್ಕೆ ನಿವೇಶನ ಮೀಸಲಿಟ್ಟು 25 ವರ್ಷಗಳು ಕಳೆದರೂ ಭವನ ನಿರ್ಮಾಣಕ್ಕೆ ಮುಂದಾಗದೇ ಇರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅಧಿಕಾರಿಗಳು ಪ್ರತಿ ವರ್ಷದ ಶಿಕ್ಷಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂದು ಮಾತ್ರ ಗುರುಭವನ ನಿರ್ಮಾಣದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಕಾಮಗಾರಿ ಜಾರಿ ಮಾತ್ರ ಆಗಿಲ್ಲ ಎಂದು ಬಹುತೇಕ ಶಿಕ್ಷಕರು ಅಭಿಪ್ರಾಯಪಡುತ್ತಾರೆ.

ಮಾರುತಿ ಬಡಾವಣೆಯಲ್ಲಿ 45 ವರ್ಷಗಳ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿ ವಸತಿ ನಿಲಯಕ್ಕೆ 20 ಗುಂಟೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ. ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಕುಬೇರಪ್ಪ ಅವರು ವಸತಿ ನಿಲಯದ ಜಾಗವನ್ನು ಶಿಕ್ಷಕರ ಅನುಕೂಲಕ್ಕಾಗಿ ಗುರುಭವನ ನಿರ್ಮಾಣಕ್ಕೆ ವರ್ಗಾವಣೆ ಮಾಡಿಕೊಟ್ಟರು. ಆಗ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ವೆಳ್ಳಪ್ಪ ಅವರ ಪ್ರಯತ್ನ ಇಲ್ಲಿ ಪ್ರಮುಖವಾಗಿತ್ತು.

ADVERTISEMENT

ಆದರೆ ಇಲ್ಲಿಯವರೆಗೆ ಗುರುಭವನ ನಿರ್ಮಾಣಕ್ಕೆ ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಮುಂದಾಗಿಲ್ಲ. ಗುರುಭವನ ನಿರ್ಮಾಣದ ಪ್ರಗತಿ ನೋಡಿಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಸಹ ರಚಿಸಲಾಗಿದೆ. ಶಿಕ್ಷಕರ ಸಂಘದ ಪದಾಧಿಕಾರಿಗಳೆ ಸಮಿತಿಯಲ್ಲೂ ಇದ್ದಾರೆ.

2010ರಲ್ಲಿ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಕಾಮಗಾರಿ ಆರಂಭವಾಗಿಲ್ಲ. ಇತ್ತಿಚೇಗೆ ಗುರುಭವನ ನಿರ್ಮಾಣಕ್ಕೆ ಶಿಕ್ಷಕರು ಒಂದು ದಿನದ ಸಂಬಳವನ್ನು ನೀಡಲು ನಿರ್ಧರಿಸಿದ್ದು ‌ಇದರಿಂದ ₹ 8 ಲಕ್ಷ ಸಂಗ್ರಹವಾಗಿದೆ. ಗುರುಭವನ ಸಮಿತಿ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ.

ಆದರೆ ಕಾಮಗಾರಿ ಆರಂಭಿಸಲು ಸಮಯ ಕೂಡಿ ಬಂದಿಲ್ಲ. ಇನ್ನೂ ಮುಂದಾದರೂ ಸ್ಥಳೀಯ ಶಾಸಕರು ಗಮನ ವಹಿಸಿ ಶಿಕ್ಷಕರ ಅನುಕೂಲಕ್ಕಾಗಿ ಗುರುಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.

‘ಕಾಮಗಾರಿ ವಿಳಂಬಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರಣ. ಇಲ್ಲಿನ ಶಿಕ್ಷಕರ ಸಂಘ ಮತ್ತು ಶಿಕ್ಷಕರು ಎಷ್ಟು ಪ್ರಯತ್ನಿಸಿದರೂ ಕ್ಷೇತ್ರಶಿಕ್ಷಣಾಧಿಕಾರಿ ಸಹಕರಿಸುತ್ತಿಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ನರಸಿಂಹ ಆರೋಪಿಸಿದರು.

‘ ಜನ ಪ್ರತಿನಿಧಿಗಳು, ಶಿಕ್ಷಕರು ಹಾಗೂ ನೌಕರರ ಸಂಘದ ಪದಾಧಿಕಾರಿಗಳ ಇಚ್ಛಾ ಶಕ್ತಿ ಕೊರತೆಯಿಂದ ಕಾಮಗಾರಿ ಆರಂಭಗೊಂಡಿಲ್ಲ’ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಅಂಜಿನಪ್ಪ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.