ADVERTISEMENT

ಗ್ರಂಥಾಲಯಕ್ಕೆ ಬೇಕಿದೆ ಕಾಯಕಲ್ಪ

ಮೂಲಸೌಕರ್ಯಗಳಿಲ್ಲ, ಮೂಟೆ ಕಟ್ಟಿ ಪುಸ್ತಕಗಳ ಸಂಗ್ರಹ: ಓದುಗರಿಗೆ ಕಿರಿ ಕಿರಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 11:02 IST
Last Updated 6 ಮಾರ್ಚ್ 2017, 11:02 IST
ಮಾಲೂರು: ಇಲ್ಲಿನ ನಗರ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಶಿಥಿಲವಾಗಿದ್ದು, ಪುಸ್ತಕಗಳನ್ನು ಮೋಟೆ ಕಟ್ಟಿ ಮೂಲೆಯಲ್ಲಿ ಇಡಲಾಗಿದೆ. ಗ್ರಂಥಾಲಕ್ಕೆ ಅಗತ್ಯವಿರುವ ಯಾವ ಸೌಲಭ್ಯಗಳೂ ಇಲ್ಲದ ಕಾರಣ ಓದುಗರು ಪರದಾಡಬೇಕಾಗಿದೆ. 
 
ಹಳೇ ಎಸ್‌ಬಿಎಂ ಬ್ಯಾಂಕ್ ಬಳಿ ಖಾಸಗಿ ಸಂಕೀರ್ಣದಲ್ಲಿ 1970ರಲ್ಲಿ ಸಾರ್ವಜನಿಕ ಗ್ರಂಥಾಲಯ ಆರಂಭವಾಯಿತು. ನಂತರ  ಹಳೇ ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರವಾಯಿತು. 1995ರಲ್ಲಿ ಗ್ರಂಥಾಲಯ ಸ್ವಂತ ಕಟ್ಟಡ ಹೊಂದಿತು. 
 
ಆದರೆ ಈಗ ಕಟ್ಟಡದ ಚಾವಣಿ ಸೋರುತ್ತಿದೆ. ಗ್ರಂಥಾಲಯದಲ್ಲಿ ಕುಡಿಯು ನೀರು, ಶೌಚಾಲಯ, ವಿದ್ಯುತ್ ಸೌಕರ್ಯ ಇಲ್ಲ.  ಸರ್ಕಾರ ಪ್ರತಿ ವರ್ಷ ಗ್ರಂಥಾಲಗಳಿಗೆ ಲಕ್ಷಾಂತರ ಮೌಲ್ಯದ ಪುಸ್ತಕಗಳನ್ನು ಪೂರೈಸುತ್ತಿದೆ. ಆದರೆ ಇಲ್ಲಿ ಪೂರೈಕೆಯಾದ ಪುಸ್ತಕಗಳು ಕಟ್ಟಡ ಶಿಥಿಲವಾದ ಕಾರಣ ಕಪಾಟುಗಳಲ್ಲಿ ತುಂಬಿಡಲಾಗಿದೆ. ಇನ್ನೂ ಕೆಲವು ಹೆಚ್ಚು ಬೆಲೆ ಪುಸ್ತಕಗಳು ಸ್ಥಳವಿಲ್ಲದೆ ಮೂಟೆಗಳಲ್ಲೇ ಇವೆ. ಓದುಗರಿಗೆ ಲಭ್ಯವಾಗುತ್ತಿಲ್ಲ.
 
ಗ್ರಂಥಾಲಯದಲ್ಲಿ ಮಕ್ಕಳು ಓದಲು ಯಾವು ಪುಸ್ತಕಗಳೂ ಇಲ್ಲ.  1900 ಜನರು ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ. ಸ್ಪರ್ಥಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳನ್ನು ಇಲ್ಲಿದ್ದು ಈ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಅಭ್ಯರ್ಥಿಗಳು ವ್ಯಾಸಂಗಕ್ಕಾಗಿ ಗ್ರಂಥಾಲಯಕ್ಕೆ ಬರುವರು. ಆದರೆ ಕೇವಲ 25 ಆಸನಗಳ ವ್ಯವಸ್ಥೆ ಮಾತ್ರ ಇರುವ ಕಾರಣ ನಿಂತು ಓದುವ ಮೂಲಕ  ಕಿರಿ–ಕಿರಿ ಅನುಭವಿಸುತ್ತಿದ್ದಾರೆ.  
 
 ಚಿಲ್ಲರೆ ತರಕಾರಿ ಮಾರುಕಟ್ಟೆ ಗ್ರಂಥಾಲಯದ ಮುಂಭಾಗದಲ್ಲಿ ಇದೆ. ಜನಸಂಚಾರ ಇಲ್ಲಿ ಹೆಚ್ಚಿರುವ ಕಾರಣ ವಾಹನಗಳ ಶಬ್ಧ, ಪಕ್ಕದ ಕೋಳಿ ಅಂಗಡಿಗಳ ದುರ್ವಾಸನೆ ಅಧ್ಯಯನ ನಿರತರನ್ನು ತೀವ್ರವಾಗಿ ತಟ್ಟುತ್ತಿದೆ. 
 
 ಗ್ರಂಥಾಲಯಕ್ಕೆ ಹೆಚ್ಚಿನ ಆಸನದ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಉತ್ತಮ ಕಟ್ಟಡವನ್ನು ನಿರ್ಮಿಸಬೇಕು. ಓದುಗ ಸ್ನೇಹಿಯಾಗಿ ರೂಪಿಸಬೇಕು ಎಂದು ಓದುಗರು ಮತ್ತು ಗ್ರಂಥಾಲಯದ ಸದಸ್ಯರು ಆಗ್ರಹಿಸು ವರು. 
–ರಾಜಗೋಪಾಲ್
 
ಉಪ ಗ್ರಂಥಾಲಯ ಆರಂಭಿಸಿ
ಇಂದಿರಾ ನಗರ, ಲಕ್ಷ್ಮಿ ಬಡಾವಣೆ, ಅಶೋಕನಗರ  ಮತ್ತು ಸಮತಾನಗರ ಸೇರಿದಂತೆ ರೈಲ್ವೆ ಬಡಾವಣೆಯಲ್ಲಿ ಹೆಚ್ಚು ದಲಿತರು, ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಪೋಷಕರು ಕೂಲಿಗೆ ತೆರಳಿದ ಸಂದರ್ಭದಲ್ಲಿ ಮಕ್ಕಳು ಶಾಲೆ ಮುಗಿಸಿ ಪೋಷಕರು ಬರುವ ತನಕ ಮನೆಗಳ ಬಳಿ ಕಾಲಾಹರಣ ಮಾಡುತ್ತಿರುತ್ತಾರೆ. ಈ ಬಡಾವಣೆಯಲ್ಲಿ ಸರ್ಕಾರ ಉಪ ಗ್ರಂಥಾಲಯ ಪ್ರಾರಂಭಿಸಿದರೆ ಮಕ್ಕಳೂ ಸೇರಿದಂತೆ ಓದುಗರಿಗೆ ಅನುಕೂಲವಾಗುತ್ತದೆ ಎನ್ನುವರು  45 ವರ್ಷಗಳಿಂದ ಗ್ರಂಥಾಲಯದ  ಸದಸ್ಯತ್ವ ಪಡೆದಿರುವ ನಿವೃತ್ತ ಶಿಕ್ಷಕಿ ರೈಲ್ವೆ ಬಡಾವಣೆ ವಾಸಿ ಎನ್.ಎಸ್.ಲಲಿತಾ ಅಶ್ವತ್ಥ್.
 
ನಿವೇಶನ ನೋಂದಣಿ: ಕಟ್ಟಡ ನಿರ್ಮಾಣ
ಗ್ರಂಥಾಲಯದ ನಿವೇಶನ ಪುರಸಭೆಗೆ ಸೇರಿದೆ. ಈ ನಿವೇಶನ ಇಲಾಖೆಗೆ ನೋಂದಣಿ ಮಾಡಿ ಕೊಡುವ ಸಂಬಂಧ ಪುರಸಭಾ ಮುಖ್ಯಾಧಿಕಾರಿ ಬಳಿ ಚರ್ಚಿಲಾಗಿದೆ. ಗ್ರಂಥಾಲಯ ಇಲಾಖೆಗೆ ನೋಂದಣಿಯಾದ ತಕ್ಷಣ ಇಲಾಖೆಯಿಂದ ಉತ್ತಮ  ಕಟ್ಟಡ ನಿರ್ಮಿಸಲಾಗುವುದು’ ಎನ್ನುವರು ಜಿಲ್ಲಾ ಗ್ರಂಥಾಲಯ ಅಧಿಕಾರಿ ಗಣೇಶ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.