ADVERTISEMENT

ಜೆಡಿಎಸ್‌ ಮನೆ ಹಾಲು ಕೆಟ್ಟು ಮೊಸರಾಗಿದೆ

ನಾಮಪತ್ರ ಸಲ್ಲಿಕೆ ಬಳಿಕ ಶಾಸಕ ವರ್ತೂರು ಪ್ರಕಾಶ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 10:38 IST
Last Updated 24 ಏಪ್ರಿಲ್ 2018, 10:38 IST

ಕೋಲಾರ: ‘ಜೆಡಿಎಸ್‌ ಮನೆಯಲ್ಲಿನ ಹಾಲು ಕೆಟ್ಟು ಮೊಸರಾಗಿದೆ. ಅದು ಇನ್ನು ಪ್ರಯೋಜನಕ್ಕೆ ಬರುವುದಿಲ್ಲ. ಆ ಪಕ್ಷದ ಮುಖಂಡರ ಮನಸುಗಳು ಒಡೆದಿದ್ದು, ಅವರು ಒಗ್ಗೂಡುವುದೂ ಇಲ್ಲ. ಹೀಗಾಗಿ ಚುನಾವಣೆಯಲ್ಲಿ ನನಗೆ ಪ್ರಬಲ ಪ್ರತಿಸ್ಪರ್ಧಿಯೇ ಇಲ್ಲ’ ಎಂದು ಶಾಸಕ ವರ್ತೂರು ಪ್ರಕಾಶ್‌ ಹೇಳಿದರು.

ನಗರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿ ಮಾತನಾಡಿ, ‘ಜೆಡಿಎಸ್ ಮುಖಂಡ ಕೆ.ಶ್ರೀನಿವಾಸಗೌಡರು ನನಗೆ ಸಮರ್ಥ ಎದುರಾಳಿಯಾಗಿದ್ದರು. ಆದರೆ, ಜೆಡಿಎಸ್‌ನಲ್ಲಿ ಅವರಿಗೆ ಟಿಕೆಟ್‌ ಕೊಡಲು ವರಿಷ್ಠರು ತಿಂಗಳುಗಟ್ಟಲೇ ಸತಾಯಿಸಿದರು. ಇದರಿಂದ ಬೇಸತ್ತ ಅವರು ಕಾಂಗ್ರೆಸ್‌ನತ್ತ ಹೋಗಿ ಪುನಃ ಜೆಡಿಎಸ್‌ಗೆ ಬಂದಿದ್ದಾರೆ’ ಎಂದು ಟೀಕಿಸಿದರು.

‘ಜೆಡಿಎಸ್‌ನಲ್ಲಿ ಒಂದು ತಿಂಗಳಲ್ಲಿ ಆದ ಅನಿರೀಕ್ಷಿತ ಬೆಳವಣಿಗೆಗಳಿಂದ ಕ್ಷೇತ್ರದಲ್ಲಿ ರಾಜಕೀಯವಾಗಿ ಸಾಕಷ್ಟು ಬದಲಾವಣೆಯಾಗಿವೆ. ಶ್ರೀನಿವಾಸಗೌಡರು ಆಡಿದ ಆಟಕ್ಕೆ ಜೆಡಿಎಸ್‌ ಮನೆ ಛಿದ್ರವಾಗಿದೆ. ವರಿಷ್ಠರು ಮೊದಲು ವಕ್ಕಲೇರಿ ರಾಮುಗೆ ಬಿ ಫಾರಂ ಕೊಟ್ಟು ವಾಪಸ್‌ ಪಡೆದಿದ್ದಾರೆ. ಆ ಪಕ್ಷದಲ್ಲಿ ಗೊಂದಲ ಮುಂದುವರಿದಿದೆ. ಕಾಡಿ ಬೇಡಿ ಟಿಕೆಟ್‌ ಪಡೆದಿರುವ ಶ್ರೀನಿವಾಸಗೌಡರ ಶಕ್ತಿ ಕುಂದಿದೆ’ ಎಂದು ಲೇವಡಿ ಮಾಡಿದರು.

ADVERTISEMENT

‘ಕ್ಷೇತ್ರದ ಇತಿಹಾಸದಲ್ಲೇ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರಲಿಲ್ಲ. ಬೆಂಬಲಿಗರು ಹಾಗೂ ಜನರನ್ನು ಕಂಡು ರಾಜಕೀಯ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿದೆ. ರೋಡ್‌ ಶೋಗೆ ಬಂದಿರುವ ಜನರ ಸಂಖ್ಯೆಯೇ ನಾನು ಮತ್ತೊಮ್ಮೆ ಶಾಸಕನಾಗುತ್ತೇನೆ ಎಂಬುದಕ್ಕೆ ಸಾಕ್ಷಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಾಸವಿಲ್ಲ: ‘ಜೆಡಿಎಸ್ ನಾಯಕರು ಶ್ರೀನಿವಾಸಗೌಡರ ದಿಕ್ಕು ತಪ್ಪಿಸಿದ್ದಾರೆ. ಎಲ್ಲಾ ಗೊಂದಲಗಳಿಗೆ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಕಾರಣ. ಶ್ರೀನಿವಾಸಗೌಡರು ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟಿದ್ದರಿಂದ ಮೊದಲ ಪಟ್ಟಿಯಲ್ಲಿ ಟಿಕೆಟ್ ತಪ್ಪಿತು. ಕಾಂಗ್ರೆಸ್‌ ಟಿಕೆಟ್ ಕೊಡಿಸುವಲ್ಲಿ ಸಚಿವ ರಮೇಶ್‌ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾದರು. ಶ್ರೀನಿವಾಸಗೌಡರ ಬಗ್ಗೆ ಜನರಿಗೆ ವಿಶ್ವಾಸವಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಮಾತೃ ಪಕ್ಷ: ‘ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ನಾನು ನಮ್ಮ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಸೈಯದ್‌ ಜಮೀರ್ ಪಾಷಾ ನನ್ನ ಸಹೋದರ ಇದ್ದಂತೆ. ಸಂಸದ ಕೆ.ಎಚ್.ಮುನಿಯಪ್ಪ ನಮ್ಮ ನಾಯಕರು. ಕಾಂಗ್ರೆಸ್ ನನ್ನ ಮಾತೃ ಪಕ್ಷ. ಗೆದ್ದ ನಂತರ ಪುನಃ ಅಲ್ಲಿಗೆ ಹೋಗುತ್ತೇನೆ’
ಎಂದರು.

**

ಸಿಎಂ ಸಿದ್ದರಾಮಯ್ಯರೊಂದಿಗೆ ಭಿನ್ನಾಭಿಪ್ರಾಯವಿತ್ತು. ರಾಜಕೀ ಯದಲ್ಲಿ ಸಹಜ. ಸಿದ್ದರಾಮಯ್ಯ ಕುರುಬ ಜನಾಂಗದ ಪ್ರಶ್ನಾತೀತ ನಾ ಯಕ. ಗೆದ್ದು ಅವರನ್ನು ಬೆಂಬಲಿಸುವೆ
– ವರ್ತೂರು ಪ್ರಕಾಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.