ADVERTISEMENT

ಡಿಜಿಟಲ್‌ ಮೀಟರ್‌ ಅಳವಡಿಸದ ಆಟೊ ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 9:45 IST
Last Updated 12 ಜುಲೈ 2017, 9:45 IST

ಕೋಲಾರ: ‘ಡಿಜಿಟಲ್‌ ಮೀಟರ್ ಅಳವಡಿಸದ ಮತ್ತು ದಾಖಲೆ ಪತ್ರಗಳಿಲ್ಲದ ಆಟೊಗಳು ಜಿಲ್ಲೆಯಲ್ಲಿ ರಸ್ತೆಗಿಳಿಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಸೂಚನೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಸಾರಿಗೆ ಅದಾಲತ್‌ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ‘ಕೋಲಾರ ನಗರದಲ್ಲಿ ಆಟೊಗಳಿಗೆ ಡಿಜಿಟಲ್‌ ಮೀಟರ್‌ ಅಳವಡಿಸಲು ಮತ್ತು ವಾಹನಗಳ ದಾಖಲೆಪತ್ರ ಸರಿಪಡಿಸಿಕೊಳ್ಳಲು ನೀಡಿದ್ದ ಗಡುವು ಮುಗಿದು ತಿಂಗಳುಗಳೇ ಕಳೆದಿವೆ. ಆದರೂ ಬಹುಪಾಲು ಆಟೊಗಳಿಗೆ ಮೀಟರ್‌ ಅಳವಡಿಸಿಲ್ಲ’ ಎಂದು ಹೇಳಿದರು.

‘ಆಟೊ ಮಾಲೀಕರು ಮತ್ತು ಚಾಲಕರ ಬೇಡಿಕೆಯಂತೆ ಪ್ರಯಾಣದರ ಪರಿಷ್ಕರಿಸಲಾಗಿದೆ. ಆದರೂ ಚಾಲಕರು ಪ್ರಯಾಣಿಕರಿಂದ ನಿಯಮಬಾಹಿರವಾಗಿ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ನಗರದಲ್ಲಿ ಇನ್ನೂ ಅನಧಿಕೃತ ಆಟೊಗಳು ಸಂಚರಿಸುತ್ತಿರುವುದು ಸರಿಯಲ್ಲ’ ಎಂದು ಆರ್‌ಟಿಒ ಅಶೋಕ್‌ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಜಪ್ತಿ ಮಾಡಿ: ‘ಅಧಿಕೃತ ದಾಖಲೆಪತ್ರಗಳಿಲ್ಲದ ಮತ್ತು ಡಿಜಿಟಲ್‌ ಮೀಟರ್‌ ಅಳವಡಿಸದ ಆಟೊಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ’ ಎಂದು ಆರ್‌ಟಿಒ ಅಶೋಕ್‌ಕುಮಾರ್‌ ಹೇಳಿಕೆ ನೀಡಿದ್ದಕ್ಕೆ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ‘ಮೀಟರ್ ಇಲ್ಲದ ಮತ್ತು ಅನಧಿಕೃತ ಆಟೊಗಳನ್ನು ಪತ್ತೆ ಹಚ್ಚಿ ದಂಡ ಹಾಕುವುದಲ್ಲ.

ಅಂತಹ ಆಟೊಗಳು ನಗರದಲ್ಲಿ ಸಂಚರಿಸಬಾರದು. ಶೀಘ್ರವೇ ಕಾರ್ಯಾಚರಣೆ ನಡೆಸಿ ಅನಧಿಕೃತ ಆಟೊಗಳನ್ನು ಯಾವುದೇ ಮುಲಾಜಿಲ್ಲದೆ ಜಪ್ತಿ ಮಾಡಿ’ ಎಂದು ತಾಕೀತು ಮಾಡಿದರು.

‘ನಗರದ ಪ್ರಮುಖ ವೃತ್ತಗಳಲ್ಲಿ ಅಡ್ಡಾದಿಡ್ಡಿ ಬಸ್‌ ನಿಲ್ಲಿಸುವ ಮೂಲಕ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ  ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಪ್ರಯಾಣಿಕರ ತಂಗುದಾಣ ಇಲ್ಲದೆ ಕಡೆ ಬೇಕಾಬಿಟ್ಟಿ ಬಸ್‌ ನಿಲ್ಲಿಸುವ, ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಮತ್ತು ಸಂಚಾರ ನಿಯಮ ಪಾಲಿಸದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ ಚಾಲಕರ ಚಾಲನಾ ಪರವಾನಗಿ ರದ್ದುಪಡಿಸಿ’ ಎಂದು ಸೂಚಿಸಿದರು.

‘ಪ್ರಯಾಣಿಕರ ತಂಗುದಾಣ ಇರುವ ಕಡೆ ಮಾತ್ರ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ನಗರದಲ್ಲಿ ಆರ್‌ಟಿಒ ಸಿಬ್ಬಂದಿ ಮತ್ತು ಸಂಚಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಬೇಕು. ಚಾಲನಾ ಪರವಾನಗಿ ಹೊಂದಿರದ ವಿದ್ಯಾರ್ಥಿಗಳು ಮನಬಂದಂತೆ ಬೈಕ್‌ ಓಡಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ದೂರು ಬರುತ್ತಿವೆ. ಈ ಬಗ್ಗೆ ಸಂಚಾರ ಪೊಲೀಸರು ಗಮನ ಹರಿಸಬೇಕು’ ಎಂದು ತಿಳಿಸಿದರು.

ನಗರ ಸಾರಿಗೆ: ‘ಕೋಲಾರ ನಗರದಲ್ಲಿ ನಗರ ಸಾರಿಗೆ ಬಸ್‌ಗಳನ್ನು ಗ್ರಾಮಾಂತರ ಸಾರಿಗೆ ವಾಹನಗಳಾಗಿ ಮಾರ್ಪಡಿಸಿ ಜನರನ್ನು ವಂಚಿಸುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಗರದ ನಾಗರಿಕರಿಗೆ ಅನುಕೂಲವಾಗುವಂತೆ ನಗರ ಸಾರಿಗೆ ಬಸ್‌ ಸೇವೆ ಆರಂಭಿಸಬೇಕು’ ಎಂದು ಹೇಳಿದರು.

‘ಕೆಎಸ್‌ಆರ್‌ಟಿಸಿ ಬಸ್‌ಗಳು ಕೋಲಾರ ನಗರ ಪ್ರವೇಶಿಸದೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ತಿರುಪತಿ, ಮುಳಬಾಗಿಲು ಕಡೆಗೆ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಐರಾವತ, ರಾಜಹಂಸ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್‌ಗಳು ಕಡ್ಡಾಯವಾಗಿ ನಗರದ ನಿಲ್ದಾಣಕ್ಕೆ ಬಂದು ಹೋಗಬೇಕು’ ಎಂದು ತಿಳಿಸಿದರು.

ಪತ್ರ ಬರೆಯುತ್ತೇನೆ: ‘ರಾಜ್ಯದ ಬೇರೆ ವಿಭಾಗಗಳ ಕೆಎಸ್‌ಆರ್‌ಟಿಸಿ ಬಸ್‌ಗಳು ನಗರದ ನಿಲ್ದಾಣಕ್ಕೆ ಬಾರದಿದ್ದರೆ ಅಂತಹ ಬಸ್‌ಗಳನ್ನು ಗುರುತಿಸಿ ಚಾಲಕರು ಮತ್ತು ನಿರ್ವಾಹಕರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿ. ಯಾವ ವಿಭಾಗದ ಬಸ್‌ಗಳು ನಗರದ ನಿಲ್ದಾಣಕ್ಕೆ ಬರುವುದಿಲ್ಲ ಎಂಬ ಬಗ್ಗೆ ವರದಿ ನೀಡಿದರೆ ನಾನೇ ಆ ವಿಭಾಗಗಳ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ’ ಎಂದರು.

‘ಕೋಲಾರ ನಗರದಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ನೇರ ಬಸ್ ಸೇವೆ ಕಲ್ಪಿಸಬೇಕು ಮತ್ತು ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಬೇಕು. ಚೆಕ್‌ಪೋಸ್ಟ್‌ಗಳಿಗೆ ಸೀಮಿತವಾಗಿರುವ ಆರ್‌ಟಿಒ ಸಿಬ್ಬಂದಿ ಚಾಲನಾ ಪರವಾನಗಿ ಪರಿಶೀಲಿಸುವುದನ್ನೇ ಮರೆತಿದ್ದಾರೆ. ಸಂಚಾರ ಪೊಲೀಸರು ಚಾಲನಾ ಪರವಾನಗಿ ಇಲ್ಲದ ವಾಹನ ಸವಾರರಿಗೆ ಬೇಕಾಬಿಟ್ಟಿ ದಂಡ ವಿಧಿಸುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.